ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗಬಿಜೆಪಿಯಿಂದ ಉಚ್ಚಾಟನೆಯಿಂದಾಗಿ ನನಗೆ ನಿರೀಕ್ಷೆಗೂ ಮೀರಿ ಜನ ಬೆಂಬಲ ಸಿಗುತ್ತಿದೆ. ಉಚ್ಚಾಟನೆ ಕೇವಲ ತಾತ್ಕಾಲಿಕ ಮಾತ್ರ. ಚುನಾವಣೆಯಲ್ಲಿ ಗೆದ್ದ ಬಳಿಕ ಮತ್ತೆ ಬಿಜೆಪಿ ಸೇರುತ್ತೇನೆ ಎಂದು ಸ್ವತಂತ್ರ ಅಭ್ಯರ್ಥಿ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಬಿಜೆಪಿಯಿಂದ ನನ್ನ ಉಚ್ಚಾಟನೆಯಿಂದಾಗಿ ನನ್ನ ಸ್ಪರ್ಧೆ ಬಗ್ಗೆ ಎಲ್ಲರಿಗೂ ಸ್ಪಷ್ಟನೆ ಸಿಕ್ಕಿದೆ. ಇದಕ್ಕಾಗಿ ವಿಜಯೇಂದ್ರ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು. ಬಿಜೆಪಿ ಪಕ್ಷ ನನಗೆ ತಾಯಿ ಇದ್ದಂತೆ. ಕೆಲ ಷಡ್ಯಂತ್ರದಿಂದ ತಾತ್ಕಲಿಕವಾಗಿ ಪಕ್ಷದಿಂದ ಹೊರಗಿದ್ದೇನೆ. ಚುನಾವಣೆ ಬಳಿಕ ಅವರೇ ಬಂದು ಕರಿತಾರೆ. ಬಿಜೆಪಿಗೆ ಹೋಗುತ್ತೇನೆ. ಮೋದಿ ಪ್ರಧಾನಿಯಾಗುವುದಕ್ಕೆ ಕೈ ಎತ್ತುತ್ತೇನೆ. ನನ್ನ ಜನ್ಮ ಇರೋವರೆಗೂ ಕಾಂಗ್ರೆಸ್ ಗೆ ಹೋಗಲ್ಲ ಎಂದರು.
ರೈತ ಚಿಹ್ನೆ ಸಿಕ್ಕಿದ್ದು ನನ್ನ ಪುಣ್ಯ: ಲೋಕಸಭಾ ಚುನಾವಣೆಗೆ ನನಗೆ ರೈತನ ಚಿಹ್ನೆ ಸಿಕ್ಕಿರುವುದು ಯಾವುದೋ ಜನ್ಮದ ಪುಣ್ಯ. ನಿಮಗೆ ಇಂತ ಒಳ್ಳೆ ಚಿಹ್ನೆ ಸಿಕ್ಕಿದೆ ಎಂದು ಅನೇಕರು ಚಿಹ್ನೆ ಬಗ್ಗೆ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ ಎಂದು ಹೇಳಿದರು.ಈಶ್ವರಪ್ಪ ಉಚ್ಚಾಟನೆಯಲ್ಲಿ ನಮ್ಮ ಪಾತ್ರವಿಲ್ಲ: ಬಿಎಸ್‌ವೈ
ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ಅವರ ವಿರುದ್ಧ ಪಕ್ಷ ಕೈಗೊಂಡಿರುವ ಶಿಸ್ತು ಕ್ರಮದಲ್ಲಿ ನಮ್ಮ ಪಾತ್ರವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿರುವ ಮಾಜಿ ಸಚಿವ ಈಶ್ವರಪ್ಪ ವಿರುದ್ಧ ರಾಜ್ಯ ಬಿಜೆಪಿಯ ಶಿಸ್ತು ಸಮಿತಿ ಕ್ರಮ ಕೈಗೊಂಡಿದೆ. ಈಶ್ವರಪ್ಪ ಅವರು ಅಪೇಕ್ಷೆಪಟ್ಟಂತೆ ಪಕ್ಷದಿಂದ ಉಚ್ಚಾಟನೆಯಾಗಿದೆ. ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವುದು ಮೊದಲಿನಿಂದಲೂ ನಡೆದು ಬಂದಿದೆ. ಈಶ್ವರಪ್ಪ ಅವರಿಗೆ ಪಕ್ಷ ಸಾಕಷ್ಟು ಅವಕಾಶ ನೀಡಿತ್ತು. ಅವರು ತಮ್ಮ ತಪ್ಪನ್ನು ತಿದ್ದಿಕೊಳ್ಳದ ಕಾರಣ ಉಚ್ಚಾಟನೆಯಾಗಿದೆ ಎಂದು ತಿಳಿಸಿದರು.ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿಗೆ ಒಳ್ಳೆಯ ವಾತಾವರಣ ಇದೆ. ಪ್ರಧಾನಿ ಮೋದಿ ಅವರ ಅಲೆಯೂ ಇದ್ದು, ಎಲ್ಲ 28 ಕ್ಷೇತ್ರಗಳಲ್ಲೂ ಬಿಜೆಪಿ ಜಯ ಸಾಧಿಸಲಿದೆ. ರಾಜ್ಯದಲ್ಲಿ ಕಾಂಗ್ರೆಸ್‌ನ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಇವರಿಬ್ಬರೂ ಪ್ರಚಾರ ನಡೆಸಿದರೂ ಯಾವುದೇ ಪರಿಣಾಮ ಬೀರಲ್ಲ. ಇದರಿಂದ ಕಾಂಗ್ರೆಸ್‌ಗೆ ಯಾವ ಲಾಭವೂ ಆಗಲ್ಲ ಎಂದು ಕುಟುಕಿದರು.ಮೊದಲ ರೌಂಡಿಂದ ಕೊನೆ ರೌಂಡ್‌ವರೆಗೂ ಈಶ್ವರಪ್ಪಗೆ ಮತ ಬರಲ್ಲ: ವಿಜಯೇಂದ್ರಈಶ್ವರಪ್ಪ ಅವರನ್ನು ಮನವೊಲಿಸುವ ಸಾಕಷ್ಟು ಪ್ರಯತ್ನದ ಹೊರತಾಗಿಯೂ ಸ್ಪರ್ಧಾ ಕಣದಲ್ಲಿ ಉಳಿದಿದ್ದಾರೆ. ಹೀಗಾಗಿ, ಬಿಜೆಪಿಯ ಶಿಸ್ತು ಸಮಿತಿ ಅವರನ್ನು ಪಕ್ಷದಿಂದ ಉಚ್ಚಾಟಿಸಿದೆ. ಇದಕ್ಕೆ ಈಶ್ವರಪ್ಪ ಸಹ ಸಂತೋಷ ವ್ಯಕ್ತಪಡಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.ಮಂಗಳವಾರ ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದು, ಬಿಡುವುದು ಈಶ್ವರಪ್ಪ ಅವರಿಗೆ ಬಿಟ್ಟ ವಿಷಯ. ಆದರೆ, ಇದಕ್ಕೆ ಪ್ರತಿಕ್ರಿಯೆಯಾಗಿ ಬಿಜೆಪಿಯ ಶಿಸ್ತು ಸಮಿತಿ ಅವರನ್ನು ಪಕ್ಷದಿಂದ ಆರು ವರ್ಷ ಉಚ್ಚಾಟನೆ ಮಾಡಿದೆ. ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ ಎಂಬುದು ಮತ ಎಣಿಕೆ ಆರಂಭವಾದಾಗ ಅವರಿಗೇ ಗೊತ್ತಾಗುತ್ತದೆ ಎಂದು ತಿರುಗೇಟು ನೀಡಿದರು.
ಮೊದಲ ರೌಂಡ್ ನಿಂದ ಕೊನೆಯ ರೌಂಡ್ ವರೆಗೂ ಈಶ್ವರಪ್ಪಗೆ ಮತಗಳು ಬರುವುದಿಲ್ಲ. ರಾಘವೇಂದ್ರ ಅವರು ಕನಿಷ್ಠ ಎರಡೂವರೆ ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ವಿಧಾನಸಭೆ ಚುನಾವಣೆಯಲ್ಲಿ ಜನರ ಕಣ್ಣಿಗೆ ಮಣ್ಣೆರಚಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ನ ಆಡಳಿತವನ್ನು ನೋಡಿ ಜನ ಬೇಸತ್ತಿದ್ದಾರೆ. ದೇಶದಲ್ಲಿ ಮಹಾ ಚುನಾವಣೆ ನಡೆಯುತ್ತಿದ್ದು, ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿ ಆಗಬೇಕು ಎಂಬುದು ಜನರ ಅಪೇಕ್ಷೆಯಾಗಿದೆ. ಕಾಂಗ್ರೆಸ್ ನಿಂದ ರಾಜ್ಯದ ಜನತೆಗೆ ಚಿಪ್ಪು ಸಿಕ್ಕಿರುವುದೆಂದು ಈಗಾಗಲೇ ಮನವರಿಕೆ ಆಗಿದೆ. ಯಾವ ವಿಶ್ವಾಸವಿಟ್ಟು ಜನರು ಕಾಂಗ್ರೆಸ್ಸಿಗೆ ಮತ ಹಾಕಿದ್ದರೋ ಅದೇ ಜನ ಇವತ್ತು ರಾಜ್ಯ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ ಎಂದು ಆರೋಪಿಸಿದರು.