ಸಾರಾಂಶ
ಪ.ಪಂ ಅಧಿಕಾರ ಹಿಡಿಯುವಷ್ಟು ಬಹುಮತ ಬಿಜೆಪಿಗಿದ್ದರೂ ಕೆಲವರ ಸ್ವಾರ್ಥ ಹಾಗೂ ಪಕ್ಷವಿರೋಧಿ ನೀತಿಯಿಂದ ಅಧಿಕಾರ ವಂಚಿತವಾಯಿತೆಂದು ಬಾಗಲಕೋಟೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಶಾಂತಗೌಡ ಪಾಟೀಲ ವಿಷಾದ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಕೆರೂರ
ಪ.ಪಂ ಅಧಿಕಾರ ಹಿಡಿಯುವಷ್ಟು ಬಹುಮತ ಬಿಜೆಪಿಗಿದ್ದರೂ ಕೆಲವರ ಸ್ವಾರ್ಥ ಹಾಗೂ ಪಕ್ಷವಿರೋಧಿ ನೀತಿಯಿಂದ ಅಧಿಕಾರ ವಂಚಿತವಾಯಿತೆಂದು ಬಾಗಲಕೋಟೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಶಾಂತಗೌಡ ಪಾಟೀಲ ವಿಷಾದ ವ್ಯಕ್ತಪಡಿಸಿದರು.ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷವು ನಂಬಿದ ಬಂಡಾಯ ಅಭ್ಯರ್ಥಿಯೆಂದು ಹೇಳಿಕೊಂಡು ಅಧ್ಯಕ್ಷರಾಗಿ ಆಯ್ಕೆಯಾದ ನಿರ್ಮಲಾ ಮದಿ, ಪರಶುರಾಮ ಮಲ್ಲಾಡದ, ಗೋಪಾಲ ಪೂಜಾರ, ಶಂಕರ ಕೆಂದೂಳಿ ಭಾರತಿ ಪರದೇಶಿ ಇವರ ಪಕ್ಷ ವಿರೋಧಿ ಚಟುವಟಿಕೆ ಪಕ್ಷ ಸಹಿಸುವುದಿಲ್ಲ. ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆಯೆಂದು ಹೇಳಿದರು. ಮಂಗಳವಾರ ರಾತ್ರಿಯವರೆಗೂ ನಾವು ಪಕ್ಷದೊಂದಿಗೆ ಇದ್ದೇವೆಂದು ಹೇಳುತ್ತಾ ಬಂದು ತಮ್ಮ ಸ್ವಾರ್ಥದ ನಿಜವಾದ ಬಣ್ಣವನ್ನು ಬುಧವಾರ ಆಯ್ಕೆ ಪ್ರಕ್ರಿಯೆಯಲ್ಲಿ ತೋರಿಸಿದ್ದಾರೆಂದು ಬಿಜೆಪಿ ಧುರೀಣ ಎನ್.ಬಿ.ಬನ್ನೂರ ಹೇಳುತ್ತಾ ಪಕ್ಷ ಅವರ ಮೇಲೆ ಯೋಗ್ಯ ಕ್ರಮ ಕೈಗೊಳ್ಳುತ್ತದೆಂದರು.ಬಾದಾಮಿ ತಾಲೂಕು ಬಿಜೆಪಿ ಅಧ್ಯಕ್ಷ ನಾಗರಾಜ ಕಾಚೆಟ್ಟಿ ಮಾತನಾಡಿ ಅಧಿಕಾರ ವಂಚಿತರಾದೆವೆಂದು ಹತಾಸೆ ನಮಗಿಲ್ಲ. ನಾವು ಪ.ಪಂದಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ಜನರಿಗೆ ಸಿಗುವಂತೆ ಮಾಡುವದರ ಜೊತೆಗೆ ಪಕ್ಷವನ್ನು ತಳಮಟ್ಟದಿಂದ ಭದ್ರಗೊಳಿಸುವ ಪ್ರಾಮಾಣಿಕ ಪ್ರಯತ್ನಮಾಡುತ್ತೇವೆಂದರು.
ಈ ಸಂದರ್ಭದಲ್ಲಿ ಸದಸ್ಯರಾದ ಪ್ರಮೋದ ಪೂಜಾರ, ಕುಮಾರ ಐಹೊಳ್ಳಿ , ಸಿದ್ದು ಕೊಣ್ಣೂರ ಪ್ರಮುಖರಾದ ನಾಗೇಶ ಛತ್ರಬಾಣ, ರಾಚಪ್ಪ ಶೆಟ್ಟರ, ಹಣಮಂತ್ ಪ್ರಭಾಕರ ಸೇರಿದಂತೆ ಹಲವಾರು ಪ್ರಮುಖರಿದ್ದರು.---
ಮೊದಲು ಸಂಸದರನ್ನು ಉಚ್ಚಾಟನೆ ಮಾಡಲಿಬಿಜೆಪಿ ಸಂಸದ ಪಿ.ಸಿ.ಗದ್ದಿಗೌಡರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಮಲ್ಲಪ್ಪ ಹಡಪದ ಇವರ ಆಯ್ಕೆಗೆ ಕೈ ಎತ್ತಿದ್ದಾರೆ. ನಮ್ಮನ್ನು ಉಚ್ಚಾಟನೆ ಮಾಡುತ್ತೇವೆಂದು ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಹೇಳಿದ್ದಾರೆ. ಮೊದಲು ಕಾಂಗ್ರೆಸ್ ಬೆಂಬಲಿಸಿದ ಪಿ.ಸಿ ಗದ್ದಿಗೌಡರನ್ನು ಉಚ್ಚಾಟನೆ ಮಾಡಲೆಂದು ಪ.ಪಂ. ಅಧ್ಯಕ್ಷರಾಗಿ ಆಯ್ಕೆಗೊಂಡ ನಿರ್ಮಲಾ ಮದಿ ಅವರ ಪತಿ ಪ.ಪಂ ಮಾಜಿ ಅಧ್ಯಕ್ಷ ಸದಾನಂದ ಮದಿ ಪಕ್ಷದ ರಾಜ್ಯಾಧ್ಯಕ್ಷರಿಗೆ ಒತ್ತಾಯಿಸಿದ್ದಾರೆ.
ಅವರು ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನಾವು ಬಿಜೆಪಿಯಲ್ಲಿ ನಿಷ್ಠಾವಂತ ಕಾರ್ಯಕರ್ತರಾಗಿ ಕೆಲಸ ಮಾಡುತ್ತಾ ಬಂದಿದ್ದೆವು. ಅಲ್ಲಿ ನಿಷ್ಠಾವಂತರಿಗೆ ಜಾಗ ಇಲ್ಲವೆಂದು ತಿಳಿದು ಕಾಂಗ್ರೆಸ್ ಬೆಂಬಲ ಕೋರಿದೆವು. ಶಾಸಕರು ನಮ್ಮನ್ನು ಗೆಲ್ಲಿಸಿದ್ದಾರೆ. ಹೊಟ್ಟೆಕಿಚ್ಚಿನ ಮಾತು ಬೇಡಾ ಅಭಿವೃದ್ಧಿಗೆ ಬೆಂಬಲಿಸಬೇಕೆಂದರು.