ಸಾರಾಂಶ
ಕನ್ನಡಪ್ರಭ ವಾರ್ತೆ ಸುತ್ತೂರುರೈತರು ಹೆಚ್ಚಾಗಿ ಸಾವಯವ ಗೊಬ್ಬರ ಹಾಗೂ ಹಸಿರೆಲೆ ಗೊಬ್ಬರವನ್ನು ರಸಗೊಬ್ಬರಗಳಿಗೆ ಪರ್ಯಾಯವಾಗಿ ಉಪಯೋಗಿಸಲು ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದ ವಿಸ್ತರಣಾ ನಿರ್ದೇಶಕ ಡಾ.ವಿ.ಎಲ್. ಮಧುಪ್ರಸಾದ್ ಕರೆ ನೀಡಿದರು. ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯ, ಹೈದರಾಬಾದ್ ನ ರಾಷ್ಟ್ರೀಯ ಕೃಷಿ ವಿಸ್ತರಣಾ ನಿರ್ವಹಣಾ ಸಂಸ್ಥೆ ಮತ್ತು ಸಿಬ್ಬಂದಿ ತರಬೇತಿ ಘಟಕ-ಸಮೇತಿ (ದಕ್ಷಿಣ), ವಿಸ್ತರಣಾ ನಿರ್ದೇಶನಾಲಯ, ಬೆಂಗಳೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಸುತ್ತೂರಿನ ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆ. 12ರವರೆಗೆ ರಸಗೊಬ್ಬರ ಮಾರಾಟಗಾರರಿಗೆ ಸಿಬ್ಬಂದಿ ತರಬೇತಿ ಘಟಕದ ಸರ್ಟಿಫಿಕೇಟ್ ಕೋರ್ಸ್ (ಸಿಸಿಐಎನ್ಎಂ) ಹಾಗೂ ಸಮಗ್ರ ಪೋಷಕಾಂಶಗಳ ನಿರ್ವಹಣೆ ಕುರಿತ 15 ದಿನಗಳ ತರಬೇತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಸ್ವಾತಂತ್ರ್ಯ ನಂತರದಲ್ಲಿ ಆಹಾರ ಧಾನ್ಯಗಳ ಕೊರೆತೆಯ ಕಾರಣ ಆಹಾರ ಧಾನ್ಯಗಳ ಉತ್ಪಾದನೆ ಹೆಚ್ಚಿಸಲು ರಸಗೊಬ್ಬರವನ್ನು ಡಾ.ಎಂ.ಎಸ್. ಸ್ವಾಮಿನಾಥನ್ ಅವರು ಪರಿಚಯಿಸಿದರು. ಆದರೆ, ಇತ್ತೀಚಿನ ದಿನಗಳಲ್ಲಿ ರಸಗೊಬ್ಬರವನ್ನು ಅವಶ್ಯಕತೆಗಿಂತ ಹೆಚ್ಚಾಗಿ ಬಳಸುವ ಕಾರಣ ಮಣ್ಣಿನ ಫಲವತ್ತತೆ ಕಡಿಮೆಯಾಗಿ ಇಳುವರಿ ಕುಂಠಿತವಾಗುತ್ತಿದೆ. ಈ ನಿಟ್ಟಿನಲ್ಲಿ ರೈತರು ಹೆಚ್ಚಾಗಿ ಸಾವಯವಗೊಬ್ಬರ ಹಾಗೂ ಹಸಿರೆಲೆ ಗೊಬ್ಬರವನ್ನು ರಸಗೊಬ್ಬರಗಳಿಗೆ ಪರ್ಯಾಯವಾಗಿ ಉಪಯೋಗಿಸುವಂತೆ ಅವರು ತಿಳಿಸಿದರು.ಮುಖ್ಯಅತಿಥಿಯಾಗಿ ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದ ಸಿಬ್ಬಂದಿ ತರಬೇತಿ ಘಟಕ-ಸಮೇತಿಯ ತರಬೇತಿ ಸಂಯೋಜಕರು ಹಾಗೂ ಮುಖ್ಯಸ್ಥರಾದ ಡಾ.ಕೆ. ಶಿವರಾಮು ಮಾತನಾಡಿ, ಮಣ್ಣು ಪರೀಕ್ಷೆಯ ಆಧಾರದ ಮೇಲೆ ರಸಗೊಬ್ಬರವನ್ನು ನೀಡುವುದರಿಂದ ಮಣ್ಣಿನ ಫಲವತ್ತತೆಯನ್ನು ಕಾಪಾಡಬಹುದು ಎಂದು ತಿಳಿಸಿದರು. ಆದ ಕಾರಣ, ರಸಗೊಬ್ಬರ ಖರೀದಿಗೆ ಬಂದ ರೈತರಿಗೆ ಮಣ್ಣು ಪರೀಕ್ಷೆ ಪತ್ರವನ್ನು ಕಡ್ಡಾಯ ಮಾಡಬೇಕು ಹಾಗೂ ಮಣ್ಣು ಪರೀಕ್ಷೆ ಆಧಾರದ ಮೇಲೆ ರಸಗೊಬ್ಬರ ಮಾರಾಟ ಮಾಡಲು ಶಿಬಿರಾರ್ಥಿಗಳಿಗೆ ತಿಳಿಸಿದರು. ಮೈಸೂರಿನ ತೋಟಗಾರಿಕೆ ಉಪನಿರ್ದೇಶಕ ಮಂಜುನಾಥ ಅಂಗಡಿ ಮಾತನಾಡಿ, ನಾವು ಬೆಳೆಯವ ಮಣ್ಣಿಗೆ ಜೀವವಿದೆ ಹಾಗೂ ಆಯಸ್ಸು ಇದೆ. ಮಣ್ಣಿನ ಆಯಸ್ಸನ್ನು ಹೆಚ್ಚಿಸಿಕೊಳ್ಳಲು ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳಬೇಕು. ಮಣ್ಣಿನಲ್ಲಿನ ಉಪ್ಪು ಲವಣಾಂಶವನ್ನು ಕಡಿಮೆ ಮಾಡಿಕೊಂಡು ಮಣ್ಣು ಪರೀಕ್ಷೆ ಆಧಾರದ ಮೇಲೆ ರಸಗೊಬ್ಬರವನ್ನು ಉಪಯೋಗಿಸಲು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಮೈಸೂರಿನ ಜೆಎಸ್ಎಸ್ ಮಹಾವಿದ್ಯಾಪೀಠದ ತೋಟಗಾರಿಕೆ ನಿರ್ದೇಶಕ ಎನ್.ಎಂ. ಶಿವಶಂಕರಪ್ಪ ಮಾತನಾಡಿ, ಉತ್ತಮ ಬೆಳೆಗೆ ಹೇಗೆ ಉತ್ತಮ ಬೀಜ ಅವಶ್ಯಕವೋ ಹಾಗೇ ಉತ್ತಮ ಮಣ್ಣು ಕೂಡ ಅವಶ್ಯಕ. ಮಣ್ಣಿನಲ್ಲಿ 16 ಪೋಷಕಾಂಶಗಳ ನಿರ್ವಹಣೆಯನ್ನು ತಜ್ಞರ ಮೂಲಕ ಮಾಹಿತಿ ಪಡೆದು ನಿರ್ವಹಣೆ ಮಾಡಬೇಕು. ಪ್ರತಿ ಸಲವೂ ಒಂದೇ ಬೆಳೆಯನ್ನು ಬೆಳೆಯದೆ ವಿವಿಧ ಬೆಳೆಗಳನ್ನು ಬೆಳೆದು ಹಸಿರೆಲೆಗೊಬ್ಬರ ಹಾಗೂ ಸಾವಯವ ಗೊಬ್ಬರವನ್ನು ಉಪಯೋಗಿಸಿಕೊಂಡು ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳಲು ರೈತರಿಗೆ ತಿಳಿಸಬೇಕಾಗಿ ತರಬೇತಿಗೆ ಆಗಮಿಸಿದ್ದ ರಸಗೊಬ್ಬರ ಮಾರಾಟಗಾರರ ಶಿಬಿರಾರ್ಥಿಗಳಿಗೆ ತಿಳಿಸಿದರು. ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು ಹಾಗೂ ತರಬೇತಿ ಸಹ ಸಂಯೋಜಕ ಡಾ.ಬಿ.ಎನ್. ಜ್ಞಾನೇಶ್ ಸ್ವಾಗತಿಸಿದರು, ವಿಷಯ ತಜ್ಞರಾದ ಡಾ.ವೈ.ಪಿ. ಪ್ರಸಾದ್ ನಿರೂಪಿಸಿದರು. ಅನುವುಗಾರರಾದ ಜೆ.ಜಿ. ರಾಜಣ್ಣ ವಂದಿಸಿದರು.