ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರ ಸಹೋದರ ಎಂ.ಪಿ.ದಾರುಕೇಶ್ವರಯ್ಯ ಅವರು ಬೇಡ ಜಂಗಮ ಪರಿಶಿಷ್ಟ ಜಾತಿ ಪ್ರಮಾಣ ಪತ್ರದ ಬಳಕೆ ಮಾಡಲು ವಿಧಿಸಲಾಗಿರುವ ನಿರ್ಬಂಧ ಆದೇಶವನ್ನು ಏ.16ರವರೆಗೆ ವಿಸ್ತರಿಸಿ ಹೈಕೋರ್ಟ್ ಬುಧವಾರ ಆದೇಶಿಸಿದೆ.ಎಂ.ಪಿ.ದಾರುಕೇಶ್ವರಯ್ಯ ಅವರು ಬೇಡ ಜಂಗಮ ಜಾತಿಯ ಪ್ರಮಾಣ ಪತ್ರ ಆಧಾರದ ಮೇಲೆ ಪರಿಶಿಷ್ಟ ಜಾತಿಗೆ ಮೀಸಲಾದ ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿ ದಾಸರಹಳ್ಳಿಯ ಎಂ.ಚಂದ್ರ ಬಿನ್ ಮುನಿಯಪ್ಪ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದಾರೆ.
ಅರ್ಜಿ ಕುರಿತು ಕೆಲ ಕಾಲ ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ, ದಾರುಕೇಶ್ವರಯ್ಯ ಅವರು ಬೇಡ ಜಂಗಮ ಪರಿಶಿಷ್ಟ ಜಾತಿ ಪ್ರಮಾಣ ಪತ್ರದ ಬಳಕೆ ಮಾಡಲು ವಿಧಿಸಲಾಗಿರುವ ನಿರ್ಬಂಧ ಆದೇಶವನ್ನು ಏ.16ರವರೆಗೆ ವಿಸ್ತರಿಸಿ ವಿಚಾರಣೆ ಮುಂದೂಡಿತು.ವಿಚಾರಣೆ ವೇಳೆ ಸರ್ಕಾರದ ಪರ ಹಾಜರಾಗಿದ್ದ ವಕೀಲ ಸಿ.ಜಗದೀಶ್, ದಾರುಕೇಶ್ವರಯ್ಯ ಅವರು ಪರಿಶಿಷ್ಟ ಜಾತಿಗೆ ಒಳಪಡುವ ಬೇಡ ಜಂಗಮ ಜಾತಿಗೆ ಸೇರಿಲ್ಲ. ಆದರೂ ಈ ಮೊದಲು ಬೆಂಗಳೂರು ಉತ್ತರ ತಹಸೀಲ್ದಾರ್ ಅವರಿಂದ ಬೇಡ ಜಂಗಮ ಜಾತಿ ಪ್ರಮಾಣ ಪತ್ರ ಪಡೆದುಕೊಂಡಿದ್ದರು. ಅದು ಸಹ ರದ್ದಾಗಿತ್ತು. ಈಗ ಬೆಂಗಳೂರು ದಕ್ಷಿಣ ತಹಸೀಲ್ದಾರ್ ಅವರಿಂದ ಇದೇ ರೀತಿಯ ಜಾತಿ ಪ್ರಮಾಣ ಪತ್ರವನ್ನು ಪಡೆದಿದ್ದಾರೆ. ಎರಡೆರಡು ಬಾರಿ ಸುಳ್ಳು ಜಾತಿ ಪ್ರಮಾಣಪತ್ರ ಪಡೆದಿದ್ದಾರೆ. ಇದರಿಂದ ಪರಿಶಿಷ್ಟ ಜಾತಿಯವರಿಗೆ ಅನ್ಯಾಯವಾಗಲಿದೆ ಎಂದು ದೂರಿದರು.
ಆ ವಾದವನ್ನು ಅಲ್ಲಗಳೆದ ದಾರುಕೇಶ್ವರಯ್ಯ ಪರ ವಕೀಲರು ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಸಮಯ ಕೋರಿದರು.ಆ ಮನವಿ ಪರಿಗಣಿಸಿದ ನ್ಯಾಯಪೀಠ ಏ.16ಕ್ಕೆ ವಿಚಾರಣೆ ಮುಂದೂಡಿತು. ದಾರುಕೇಶ್ವರಯ್ಯ ಅವರು ಬೇಡ ಜಂಗಮ ಜಾತಿಯ ಪ್ರಮಾಣ ಪತ್ರವನ್ನು ಬಳಕೆ ಮಾಡಲು ನಿರ್ಬಂಧ ಹೇರಿ ಏ.8ರಂದು ಹೈಕೋರ್ಟ್ ಮಧ್ಯಂತರ ಆದೇಶ ಮಾಡಿತ್ತು.