ಸಾರಾಂಶ
ಮಂಡ್ಯ ಮಂಜುನಾಥ
ಕನ್ನಡಪ್ರಭ ವಾರ್ತೆ ಮಂಡ್ಯನಗರಸಭೆ ಆಸ್ತಿ ತೆರಿಗೆ ಪಾವತಿಗೆ ನೀಡಲಾಗುವ ತೆರಿಗೆ ವಿನಾಯ್ತಿ ಅವಧಿಯನ್ನು ರಾಜ್ಯ ಸರ್ಕಾರ ಜು.೩೧ರವರೆಗೆ ವಿಸ್ತರಿಸಿರುವುದರಿಂದ ಮೂರು ತಿಂಗಳಲ್ಲಿ ೭.೪೯ ಕೋಟಿ ರು. ಸಂಗ್ರಹವಾಗಿರುವುದು ಹೊಸ ದಾಖಲೆಯಾಗಿದೆ.
ನಗರ ವ್ಯಾಪ್ತಿಯಲ್ಲಿ ೩೧೯೪೫ ಒಟ್ಟು ಆಸ್ತಿ ಇದ್ದು, ವಸತಿ, ವಾಣಿಜ್ಯ, ಕೈಗಾರಿಕೆ ಆಸ್ತಿಗಳಿಂದ ೧೮.೧೩ ಕೋಟಿ ರು. ಒಟ್ಟು ತೆರಿಗೆ ಸಂಗ್ರಹ ಬೇಡಿಕೆಯಲ್ಲಿ, ೧೬.೫೯ ಕೋಟಿ ರು. ತೆರಿಗೆ ಸಂಗ್ರಹಿಸುವ ಗುರಿ ಹೊಂದಲಾಗಿದೆ. ಇದರಲ್ಲಿ ೧.೫೩ ಕೋಟಿ ರು. ಬಾಕಿ ಉಳಿದುಕೊಂಡಿದೆ.ತೆರಿಗೆ ವಿನಾಯ್ತಿ ಪರಿಣಾಮ ಏಪ್ರಿಲ್‌ನಲ್ಲಿ ೨.೪೬ ಕೋಟಿ ರು., ಮೇ ತಿಂಗಳಲ್ಲಿ ೩.೫೬ ಕೋಟಿ ರು., ಜೂನ್ ತಿಂಗಳಲ್ಲಿ ೧.೪೬ ಕೋಟಿ ರು. ತೆರಿಗೆ ಸಂಗ್ರಹ ಮಾಡುವುದರೊಂದಿಗೆ ಶೇ.೪೧.೩೨ರಷ್ಟು ಸಾಧನೆ ಮಾಡಿದೆ. ಈ ಸಾಲಿನಲ್ಲಿ ಇನ್ನೂ ೧೦.೬೩ ಕೋಟಿ ರು. ತೆರಿಗೆ ವಸೂಲಿ ಬಾಕಿ ಇದೆ.
೨೦೨೦-೨೧ನೇ ಸಾಲಿನಲ್ಲಿ ಮಾರ್ಚ್‌ನಿಂದ ಜೂನ್ ತಿಂಗಳವರೆಗೆ ೩.೦೫ ಕೋಟಿ ರು., ೨೦೨೧-೨೨ನೇ ಸಾಲಿನಲ್ಲಿ ೧.೯೨ ಕೋಟಿ ರು., ೨೦೨೨-೨೩ನೇ ಸಾಲಿನಲ್ಲಿ ೫.೦೯ ಕೋಟಿ ರು., ೨೦೨೩-೨೪ನೇ ಸಾಲಿನಲ್ಲಿ ೫.೯೪ ಕೋಟಿ ರು. ಸಂಗ್ರಹಿಸಲಾಗಿತ್ತು. ಸಾಮಾನ್ಯವಾಗಿ ಪ್ರತಿ ವರ್ಷ ಏ.೩೧ರವರೆಗೆ ಮಾತ್ರ ಶೇ.೫ರಷ್ಟು ವಿನಾಯಿತಿ ಇರುತ್ತಿತ್ತು. ಆದರೆ, ಈ ವರ್ಷ ಲೋಕಸಭೆ ಚುನಾವಣೆ ನೀತಿ ಸಂಹಿತೆ ಕಾರಣದಿಂದ ತೆರಿಗೆ ಪಾವತಿಸಲು ಅಡಚಣೆಯಾಗಿದ್ದರಿಂದ ಈ ಬಾರಿ ಜು.೩೧ರವರೆಗೆ ವಿಸ್ತರಣೆ ಮಾಡಿ ಸರ್ಕಾರ ಆದೇಶ ಹೊರಡಿಸಿರುವುದು ತೆರಿಗೆ ಪಾವತಿದಾರರಿಗೆ ಅನುಕೂಲವಾಗಿದೆ.ಆಟೋ ಪ್ರಚಾರ:
ನಗರಸಭೆ ಆಸ್ತಿ ತೆರಿಗೆ ಪಾವತಿಗೆ ಶೇ.೫ರಷ್ಟು ವಿನಾಯ್ತಿಯನ್ನು ಜು.೩೧ರವರೆಗೆ ವಿಸ್ತರಿಸಿರುವುದರಿಂದ ನಗರಸಭೆ ಆಯುಕ್ತ ಆರ್.ಮಂಜುನಾಥ್ ಅವರು ಆಟೋ ಮೂಲಕ ನಗರದ ೩೫ ವಾರ್ಡ್‌ಗಳಲ್ಲೂ ವ್ಯಾಪಕ ಪ್ರಚಾರ ನೀಡಿ ತೆರಿಗೆ ಪಾವತಿಗೆ ಜನರು ಮುಂದಾಗುವಂತೆ ಜಾಗೃತಿ ಮೂಡಿಸುತ್ತಿದ್ದಾರೆ. ಆಸ್ತಿ ತೆರಿಗೆ ವಿನಾಯ್ತಿಯ ಲಾಭ ಪಡೆದುಕೊಳ್ಳುವಂತೆ ಮನವಿ ಮಾಡುತ್ತಿದ್ದಾರೆ. ತೆರಿಗೆ ವಿನಾಯ್ತಿಗೆ ಆಕರ್ಷಿತರಾಗಿರುವ ಜನರು ಆಸ್ತಿ ತೆರಿಗೆ ಪಾವತಿಗೆ ಹೆಚ್ಚಿನ ಉತ್ಸಾಹ ತೋರುತ್ತಿರುವುದು ಕಂಡುಬಂದಿದೆ.೨೦೨೧-೨೨ನೇ ಸಾಲಿನ ಆಸ್ತಿ ತೆರಿಗೆ ಬೇಡಿಕೆಗೆ ಸಂಬಂಧಿಸಿದಂತೆ ಆಸ್ತಿ ತೆರಿಗೆಯೊಂದಿಗೆ ಉಪಕರಗಳನ್ನು ಸೇರಿಸಿ ಬೇಡಿಕೆ ನೀಡಲಾಗುತ್ತಿದ್ದು, ಆದರೆ, ಆ ವರ್ಷದಲ್ಲಿ ಉಪಕರಗಳನ್ನು ಹೊರತುಪಡಿಸಿ ಆಸ್ತಿ ತೆರಿಗೆಯನ್ನು ಮಾತ್ರ ವಸೂಲಾತಿಯಲ್ಲಿ ನಮೂದಿಸಲಾಗಿತ್ತು. ಆ ವರ್ಷದಲ್ಲಿ ೨.೩೦ ಕೋಟಿ ರು. ಉಪಕರ ವಸೂಲಿಯಾಗಿರುವುದರಿಂದ ಆ ಸಾಲಿನ ಒಟ್ಟು ವಸೂಲಿ ೧೧.೧೪ ಕೋಟಿ ರು.ಗಳಾಗಿದೆ. ಬಾಕಿ ೧.೩೨ ಕೋಟಿ ರು. ಸೆಸ್ ಕಳೆದು ೯೮.೨೫ ಕೋಟಿ ರು. ಬಾಕಿ ಇತ್ತೆಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ.
ನಗರ ವ್ಯಾಪ್ತಿಯಲ್ಲಿರುವ ೨೪೧೭೬ ವಸತಿಗಳಪೈಕಿ ೧೧೨೧೮ ವಸತಿ ಹೊಂದಿರುವವರು ಆಸ್ತಿ ತೆರಿಗೆ ಪಾವತಿಸಿದ್ದು, ಇನ್ನೂ ೧೨೯೫೮ ಮಂದಿ ಆಸ್ತಿ ತೆರಿಗೆ ಪಾವತಿಸಬೇಕಿದೆ. ೫೧೦೬ ಖಾಲಿ ನಿವೇಶನದಾರರಲ್ಲಿ ೨೨೪೦ ಮಂದಿ ಆಸ್ತಿ ತೆರಿಗೆ ಪಾವತಿಸಿದ್ದರೆ, ೨೮೬೬ ಮಂದಿ ಪಾವತಿಸಬೇಕಿದೆ. ೨೫೯೨ ವಾಣಿಜ್ಯದಾರರಲ್ಲಿ ೧೩೬೨ ಮಂದಿ ತೆರಿಗೆ ಪಾವತಿಸಿದ್ದು, ೧೨೩೦ ಮಂದಿ ತೆರಿಗೆ ಪಾವತಿ ಮಾಡಬೇಕಿದೆ. ೭೧ ಕೈಗಾರಿಕೆಗಳ ಮಾಲೀಕರಲ್ಲಿ ೨೨ ಮಂದಿ ತೆರಿಗೆ ಪಾವತಿಸಿದ್ದರೆ, ೪೯ ಮಂದಿ ತೆರಿಗೆ ಕಟ್ಟಬೇಕಿದೆ. ಒಟ್ಟು ಆಸ್ತಿ ಸಂಖ್ಯೆಯಲ್ಲಿ ೨೫೮ ಆಸ್ತಿಗಳಿಗೆ ತೆರಿಗೆ ವಿನಾಯ್ತಿ ನೀಡಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.ಈ ಸಾಲಿನಲ್ಲಿ ಜು.೩೧ರವರೆಗೆ ತೆರಿಗೆ ವಿನಾಯ್ತಿ ನೀಡಿರುವುದರಿಂದ ಕಳೆದ ನಾಲ್ಕು ವರ್ಷಗಳಲ್ಲಿ ಆದ ನಗರಸಭೆ ಆಸ್ತಿ ತೆರಿಗೆ ಸಂಗ್ರಹಕ್ಕಿಂತ ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ. ತೆರಿಗೆ ಸಂಗ್ರಹದಲ್ಲಿ ನಗರಸಭೆ ಅಧಿಕಾರಿಗಳು ನಿರೀಕ್ಷಿತ ಗುರಿ ತಲುಪಿ ಹೊಸ ದಾಖಲೆ ಸೃಷ್ಟಿಸಬಹುದೆಂದು ನಿರೀಕ್ಷಿಸಲಾಗಿದೆ.
ನಗರ ವ್ಯಾಪ್ತಿಯ ಜನರು ಆಸ್ತಿ ತೆರಿಗೆ ಪಾವತಿಸಲು ಸರ್ಕಾರ ಜು.೩೧ರವರೆಗೆ ತೆರಿಗೆ ವಿನಾಯ್ತಿಯನ್ನು ವಿಸ್ತರಣೆ ಮಾಡಿದೆ. ಪ್ರತಿ ವರ್ಷ ಏ.೩೧ರವರೆಗೆ ಮಾತ್ರ ತೆರಿಗೆ ವಿನಾಯ್ತಿ ಇರುತ್ತಿತ್ತು. ಈ ಬಾರಿ ಲೋಕಸಭಾ ಚುನಾವಣೆ ಎದುರಾಗಿದ್ದರಿಂದ ತೆರಿಗೆ ವಿನಾಯ್ತಿ ಅವಧಿಯನ್ನು ವಿಸ್ತರಿಸಿದೆ. ಸಾರ್ವಜನಿಕರು ಶೀಘ್ರ ತೆರಿಗೆ ಪಾವತಿ ಮಾಡುವುದರೊಂದಿಗೆ ನಗರದ ಅಭಿವೃದ್ಧಿಗೆ ಸಹಕಾರಿಯಾಗಬೇಕಿದೆ.- ಆರ್.ಮಂಜುನಾಥ್, ಆಯುಕ್ತರು, ನಗರಸಭೆ