ಕನ್ನಡಪ್ರಭ ವಾರ್ತೆ ಬಾಗಲಕೋಟೆಜಿಲ್ಲೆಯ ಎಲ್ಲಾ 10 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಸರ್ಕಾರ ಘೋಷಿಸಿರುವ ಹಿನ್ನೆಲೆಯಲ್ಲಿ ರೈತರ ಬೆಳೆ ಸಾಲ, ಹೈನುಗಾರಿಕೆ, ಮೀನುಗಾರಿಕೆ, ರೇಷ್ಮೆ ಹಾಗೂ ಇತರೆ ಕೃಷಿ ಆಧಾರಿತ ಉದ್ಯಮಗಳ ಸಾಲಗಳ ಮರುಪಾವತಿ ಅವಧಿಯನ್ನು ಸಹ ವಿಸ್ತರಣೆ ಮಾಡಿದೆ ಎಂದು ಜಿಲ್ಲಾಧಿಕಾರಿ ಸಂಗಪ್ಪ ಹೇಳಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಜಿಲ್ಲೆಯ ಎಲ್ಲಾ 10 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಸರ್ಕಾರ ಘೋಷಿಸಿರುವ ಹಿನ್ನೆಲೆಯಲ್ಲಿ ರೈತರ ಬೆಳೆ ಸಾಲ, ಹೈನುಗಾರಿಕೆ, ಮೀನುಗಾರಿಕೆ, ರೇಷ್ಮೆ ಹಾಗೂ ಇತರೆ ಕೃಷಿ ಆಧಾರಿತ ಉದ್ಯಮಗಳ ಸಾಲಗಳ ಮರುಪಾವತಿ ಅವಧಿಯನ್ನು ಸಹ ವಿಸ್ತರಣೆ ಮಾಡಿದೆ ಎಂದು ಜಿಲ್ಲಾಧಿಕಾರಿ ಸಂಗಪ್ಪ ಹೇಳಿದರು.ಜಿಲ್ಲಾ ಪಂಚಾಯತ ಸಭಾಭವನದಲ್ಲಿ ನಡೆದ ಜಿಲ್ಲಾ ಮಟ್ಟದ ಸಲಹಾ ಸಮಿತಿ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 2026ರ ಆಗಸ್ಟ್ 27 ರವರೆಗೆ ಪ್ರಮಾಣಿತ ಸ್ಥಿತಿಯಲ್ಲಿದ್ದು, 30 ದಿನಗಳಿಗಿಂತ ಹೆಚ್ಚು ಬಾಕಿ ಇಲ್ಲದ ಸಾಲ ಖಾತೆಗಳಿಗೆ ಈ ಸೌಲಭ್ಯ ಅನ್ವಯವಾಗಲಿದೆ. ರೈತರಿಂದ ಪ್ರತ್ಯೇಕ ಅರ್ಜಿ ನಿರೀಕ್ಷಿಸದೆ ಬ್ಯಾಂಕುಗಳು ಸ್ವಯಂಪ್ರೇರಿತವಾಗಿ ಸಾಲ ಮರುರಚನೆ ಪ್ರಕ್ರಿಯೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು. ಬರಗಾಲದ ಹಿನ್ನೆಲೆಯಲ್ಲಿ ರೈತರ ಮೇಲೆ ಯಾವುದೇ ಬಲವಂತದ ಅಥವಾ ಕಠಿಣ ಸಾಲ ವಸೂಲಾತಿ ಕ್ರಮ ಕೈಗೊಳ್ಳದಂತೆ ಬ್ಯಾಂಕುಗಳಿಗೆ ಸೂಚಿಸಿದರು. ಇಂತಹ ದೂರುಗಳು ಬಂದಲ್ಲಿ ಜಿಲ್ಲಾಡಳಿತ ತಕ್ಷಣ ಮಧ್ಯಪ್ರವೇಶಿಸಿ ಕ್ರಮ ಕೈಗೊಳ್ಳಲಿದೆ ಎಂದರು.
ಯಾವುದೇ ವಸೂಲಾತಿ ಕ್ರಮ ಕೈಗೊಳ್ಳುವ ಮುನ್ನ ಜಿಲ್ಲಾಡಳಿತ ಅಥವಾ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಗಮನಕ್ಕೆ ತರುವುದು ಕಡ್ಡಾಯವಾಗಿದೆ. ರೈತರು ಅನಧಿಕೃತ ಲೇವಾದೇವಿಗಾರರ ಮೊರೆ ಹೋಗದಂತೆ ಬ್ಯಾಂಕುಗಳು ಕರುಣಾಪೂರ್ವಕ ಹಾಗೂ ಸೂಕ್ಷ್ಮ ನಡವಳಿಕೆಯಿಂದ ಸೇವೆ ಒದಗಿಸುವಂತೆ ಸೂಚಿಸಿದರು. ಸಾಲ ಮರುರಚನೆ ಮಾಡಿದ ನಂತರವೂ ರೈತರು ಕೃಷಿ ಹಾಗೂ ಇತರೆ ಜೀವನಾಧಾರ ಚಟುವಟಿಕೆಗಳನ್ನು ಮುಂದುವರಿಸಲು ಅಗತ್ಯವಿರುವ ಹೊಸ ಸಾಲಗಳನ್ನು ನೀಡುವಂತೆ ಬ್ಯಾಂಕುಗಳಿಗೆ ತಿಳಿಸಿದರು. ಬೆಳೆ ವಿಮೆ ಪರಿಹಾರ ಮೊತ್ತಕ್ಕಾಗಿ ಕಾಯದೆ ತಕ್ಷಣವೇ ಸಾಲ ಮರುರಚನೆ ಪ್ರಕ್ರಿಯೆ ಕೈಗೊಳ್ಳುವಂತೆ ನಿರ್ದೇಶನ ನೀಡಿದರು. ಜಿಪಂ ಸಿಇಒ, ತಾಪಂ, ಗ್ರಾ, ರೈತ ಸಂಪರ್ಕ ಕೇಂದ್ರಗಳು ಮತ್ತು ಬ್ಯಾಂಕ್ ಶಾಖೆಗಳ ಮೂಲಕ ಈ ಪರಿಹಾರ ಯೋಜನೆಯ ಮಾಹಿತಿಯನ್ನು ರೈತರಿಗೆ ತಲುಪಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕು. ಪ್ರತಿ ವಾರ ಬ್ಯಾಂಕಗಳ ಪರಿಹಾರ ಪ್ರಗತಿಯನ್ನು ಪರಿಶೀಲಿಸಲಾಗುವುದೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.ಸಭೆಯಲ್ಲಿ ಜಿ.ಪಂ ಸಿಇಒ ಗಜಾನನ ಬಾಲೆ, ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಟಿ.ಎನ್, ತೋಟಗಾರಿಕೆ ಉಪನಿರ್ದೇಶಕ ರವೀಂದ್ರ ಹಕಾಟಿ, ಜಿಲ್ಲಾ ಅಗ್ರಣಿ ಬ್ಯಾಂಕಿನ ವ್ಯವಸ್ಥಾಪಕ ರಾಜಕುಮಾರ ಹೂಗಾರ, ನಬಾರ್ಡ ಡಿಡಿಎಂ ವಿಷ್ಣುವರ್ಧನ, ಪಶು ಇಲಾಖೆಯ ಉಪನಿರ್ದೇಶಕ ಎಸ್.ಎಚ್.ಕರಡಿಗುಡ್ಡ, ಮೀನುಗಾರಿಕೆ ಇಲಾಖೆಯ ಉಪನಿನಿರ್ದೇಶಕಿ ಅಂಜನಾದೇವಿ ಟಿ, ಸೇರಿದಂತೆ ವಿವಿಧ ಬ್ಯಾಂಕಿನ ಪ್ರತಿನಿಧಿಗಳು ಇದ್ದರು.ಬರ ಹಿನ್ನಲೆಯಲ್ಲಿ ರೈತರ ಸಾಲ ಮರುಪಾವತಿ ಅವಧಿ ವಿಸ್ತರಿಸಿರುವ ಬಗ್ಗೆ ವಿವರಣೆ ನೀಡಿದ ಅವರು, ತೀವ್ರ ಬರಪೀಡಿತ ತಾಲೂಕುಗಳಲ್ಲಿ 12 ತಿಂಗಳ ಮೊರಟೋರಿಯಂ ಹಾಗೂ ಒಟ್ಟು ಸಾಲ ಮರುಪಾವತಿ ಅವಧಿಯನ್ನು 60 ತಿಂಗಳವರೆಗೆ ವಿಸ್ತರಣೆ ಮಾಡಲಾಗಿದೆ. -ಸಂಗಪ್ಪ, ಜಿಲ್ಲಾಧಿಕಾರಿ