ಪತ್ರಕರ್ತರೆಂದು ಹೆದರಿಸಿ ಹಣ ವಸೂಲಿ

| Published : Apr 02 2024, 01:04 AM IST / Updated: Apr 02 2024, 01:05 AM IST

ಸಾರಾಂಶ

ಈ ಕುರಿತು ಯಲ್ಲಾಪುರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಯಲ್ಲಾಪುರ: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತರೊಬ್ಬರನ್ನು ಮೂವರು ವ್ಯಕ್ತಿಗಳು ಪತ್ರಕರ್ತರೆಂದು ಬೆದರಿಸಿ ಜೆಸಿಬಿ, ಟ್ರ್ಯಾಕ್ಟರ್‌ ಹಾಗೂ ನಗದನ್ನು ಕಿತ್ತುಕೊಂಡು ಹೋಗಿರುವ ಘಟನೆ ತಾಲೂಕಿನ ಕನ್ನಡಗಲ್‌ ಗ್ರಾಮದಲ್ಲಿ ಭಾನುವಾರ ನಡೆಸಿದೆ.

ತಾಲೂಕಿನ ಕೊಡಸೆ ಗ್ರಾಮದ ಸುಬ್ರಾಯ ಚೂಡಾ ಕೈಟ್ಕರ್ ಎಂಬವರು ಕನ್ನಡಗಲ್ ಗ್ರಾಮದ ತಮ್ಮ ಜಮೀನಿನಲ್ಲಿ ಜೆಸಿಬಿ ಹಾಗೂ ಟ್ರ್ಯಾಕ್ಟರ್ ಬಳಸಿ ಭೂಮಿಯ ಮಣ್ಣನ್ನು ಸಮತಟ್ಟು ಮಾಡುತ್ತಿದ್ದರು. ಆಗ ಏಕಾಏಕಿ ಅಕ್ರಮ ಪ್ರವೇಶ ಮಾಡಿದ ಪಟ್ಟಣದ ಶಂಸುದ್ದೀನ್ ಮಾರ್ಕರ್, ತಾರಾನಾಥ ನಾಯ್ಕ ಹಾಗೂ ವಿನಾಯಕ ಭೋವಿವಡ್ಡರ ಎಂಬವರು ತಾವು ಪತ್ರಕರ್ತರಿದ್ದು, ನೀವು ಸರ್ಕಾರಿ ಜಮೀನನ್ನು ಅತಿಕ್ರಮಣ ಮಾಡುತ್ತಿದ್ದಿರಿ, ನೀವು ಇಲ್ಲಿ ಮಣ್ಣು ಸಮತಟ್ಟು ಮಾಡಲು ಇಲಾಖೆಯ ಅನುಮತಿ ಪಡೆದಿದ್ದಿರಾ ಎಂದೆಲ್ಲ ಪ್ರಶ್ನಿಸಿದ್ದಾರೆ. ಅಲ್ಲದೇ ಹಣವನ್ನು ನೀಡಬೇಕು, ಇಲ್ಲವಾದರೆ ಕೇಸ್ ಮಾಡಬೇಕಾಗುತ್ತದೆ ಎಂದು ಬೆದರಿಸಿದ್ದಾರೆ. ಆಗ ರೈತ ಹೆದರಿ ತಮ್ಮ ಬಳಿ ಇದ್ದ ₹೬೦೦೦ ನಗದು ಹಾಗೂ ₹೨೫೦೦೦ ಮೌಲ್ಯದ ಚಿನ್ನದ ಉಂಗುರವನ್ನು ನೀಡಿದ್ದಾರೆ. ಅಲ್ಲದೇ ಉಳಿದ ಹಣ ಕೊಟ್ಟು ಜೆಸಿಬಿ ಮತ್ತು ಟ್ರ್ಯಾಕ್ಟರ್‌ಗಳನ್ನು ವಾಪಸ್ ಪಡೆಯಿರಿ ಎಂದು ಹೇಳಿ, ವಾಹನಗಳನ್ನು ಕೊಂಡೊಯ್ದಿದ್ದಾರೆ. ವಾಹನಗಳನ್ನು ಕೇಳಲು ಹೋದ ಶ್ರೀಕಾಂತ ಬಾಬು ಮರಾಠಿ ಎಂಬವರಿಂದಲೂ ₹೧೦೦೦೦ ನಗದನ್ನು ಪಡೆದಿದ್ದಾರೆ.

ಈ ಕುರಿತು ಯಲ್ಲಾಪುರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.ಯುವತಿಗೆ ಚಾಕು ಇರಿತ: ದೂರು ದಾಖಲು

ಕಾರವಾರ: ಸಾಕುನಾಯಿಯೊಂದಿಗೆ ಭಾನುವಾರ ರಾತ್ರಿ ವಾಕಿಂಗ್ ಮಾಡಲು ಬಂದಿದ್ದ ಯುವತಿಯ ಎದೆಗೆ ವ್ಯಕ್ತಿಯೋರ್ವ ಚಾಕು ಇರಿದ ಕುರಿತು ಇಲ್ಲಿನ ನಗರ‌ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಇಲ್ಲಿನ ನಂದನಗದ್ದಾದ ರವಿ ಹುಲಸ್ವಾರ ಆರೋಪಿಯಾಗಿದ್ದು, ನಿಧಿ ಗುರುರಾಜ ಹಲ್ಲೆಗೆ ಒಳಗಾದವರು. ಈ ಯುವತಿಯನ್ನು ಅವಳು ಕೆಲಸ‌ ಮಾಡುತ್ತಿದ್ದ ಖಾಸಗಿ ಸಂಸ್ಥೆಗೆ ತನ್ನ ಆಟೋದಲ್ಲಿ ಬಿಡುತ್ತಿದ್ದ. ಹೀಗಾಗಿ ಇಬ್ಬರಲ್ಲಿಯೂ ಸ್ನೇಹ ಬೆಳೆದಿದ್ದು, ಆಗಾಗ ಕರೆ ಮಾಡಿ ತನ್ನೊಂದಿಗೆ ಬರಲು ಒತ್ತಾಯಿಸುತ್ತಿದ್ದ. ಇದರಿಂದ ಬೇಸತ್ತು ಅವನ ಕರೆಗೆ ಸ್ಪಂದಿಸದಿದ್ದಕ್ಕೆ ಜೀವ ಬೆದರಿಕೆ ಕೂಡ ಹಾಕಿದ್ದ. ಭಾನುವಾರ ರಾತ್ರಿ ಸಾಕುನಾಯಿಯೊಂದಿಗೆ ವಾಕಿಂಗ್ ಮಾಡುತ್ತಿದ್ದ ವೇಳೆ ಬಂದ ರವಿ, ಏಕಾಏಕಿ ನನ್ನ ಎದೆಗೆ ಚಾಕು ಇರಿದಿದ್ದಾನೆ ಎಂದು ಯುವತಿಯು ದೂರು ನೀಡಿದ್ದಾಳೆ. ಗಾಯಾಳು ಯುವತಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.