ಸಾರಾಂಶ
ವ್ಯಾಪಾರದ ಕೇಂದ್ರವನ್ನಾಗಿ ಮಾಡಿ ಅಕ್ಷರಗಳನ್ನು ಆಯಾ ಸಂಸ್ಥೆಯವರು ತಕ್ಕಡಿಯಲ್ಲಿ ಮಾರಾಟಕ್ಕಿಟ್ಟಿದ್ದಾರೆ. ಸರ್ಕಾರದ ಸಂವಿಧಾನಾತ್ಮಕ ಉಚಿತ ಹಾಗೂ ಕಡ್ಡಾಯ ಶಿಕ್ಷಣ ಸಮರ್ಪಕವಾಗಿ ಜಾರಿಯಾಗದೇ ನೂರಾರು ಸರ್ಕಾರಿ ಶಾಲಾ-ಕಾಲೇಜುಗಳನ್ನು ಮುಚ್ಚಲಾಗುತ್ತಿದೆ.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಕೆಲ ಖಾಸಗಿ ಶಾಲೆಗಳು ಸರ್ಕಾರದ ನಿಯಮಗಳನ್ನು ಪಾಲಿಸದೆ ದುಬಾರಿ ಶುಲ್ಕ ವಿಧಿಸಿ ಪೋಷಕರ ಸುಲಿಗೆ ಮಾಡುತ್ತಿವೆ. ಇಂತಹ ಶಾಲೆಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ತಾಲೂಕು ಜಯ ಕರ್ನಾಟಕ ಸಂಘಟನೆ ಪದಾಧಿಕಾರಿಗಳು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್.ಸೀತಾರಾಮ್ ಅವರಿಗೆ ಮನವಿ ಸಲ್ಲಿಸಿದರು.ಪಟ್ಟಣದಲ್ಲಿ ಬಿಇಒ ಸೀತಾರಾಮ್ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಸಂಘಟನೆ ತಾಲೂಕು ಅಧ್ಯಕ್ಷ ಹೊನ್ನೇನಹಳ್ಳಿ ಸೋಮಶೇಖರ್, ಸರ್ಕಾರಿ ಶಿಕ್ಷಣ ವ್ಯವಸ್ಥೆ ಬಹುತೇಕ ಹದಗೆಟ್ಟಿದೆ. ಪ್ರತಿ ವರ್ಷ ನಾಯಿ ಕೊಡೆಗಳಂತೆ ಖಾಸಗಿ ಶಿಕ್ಷಣ ಸಂಸ್ಥೆಗಳು ತಲೆ ಎತ್ತಿ ಬಡ ಮತ್ತು ಮಧ್ಯಮ ವರ್ಗದ ಮಕ್ಕಳ ಶಿಕ್ಷಣಕ್ಕೆ ಕಂಟಕವಾಗುತ್ತಿವೆ ಎಂದು ದೂರಿದರು.
ವ್ಯಾಪಾರದ ಕೇಂದ್ರವನ್ನಾಗಿ ಮಾಡಿ ಅಕ್ಷರಗಳನ್ನು ಆಯಾ ಸಂಸ್ಥೆಯವರು ತಕ್ಕಡಿಯಲ್ಲಿ ಮಾರಾಟಕ್ಕಿಟ್ಟಿದ್ದಾರೆ. ಸರ್ಕಾರದ ಸಂವಿಧಾನಾತ್ಮಕ ಉಚಿತ ಹಾಗೂ ಕಡ್ಡಾಯ ಶಿಕ್ಷಣ ಸಮರ್ಪಕವಾಗಿ ಜಾರಿಯಾಗದೇ ನೂರಾರು ಸರ್ಕಾರಿ ಶಾಲಾ-ಕಾಲೇಜುಗಳನ್ನು ಮುಚ್ಚಲಾಗುತ್ತಿದೆ ಎಂದು ಆರೋಪಿಸಿದರು.ಬಲಿಷ್ಠ ರಾಜಕಾರಣಿಗಳು ಮತ್ತು ಶ್ರೀಮಂತರು ಶಿಕ್ಷಣ ಕ್ಷೇತ್ರದಲ್ಲಿ ಬಂಡವಾಳ ಹೂಡಿ ಪ್ರಾರಂಭಿಸಿದ ಅನೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ಬಡವರ ರಕ್ತ ಹೀರಿ ಜೀವಿಸುತ್ತಿವೆ. ಡೊನೇಷನ್, ದುಬಾರಿ ಶುಲ್ಕ, ಕಿರುಕುಳ, ಕಡಿಮೆ ಅಂಕ ಎಂದು ಮುಗ್ದ ಮಕ್ಕಳ ಪೋಷಕರಿಗೆ ಮಾನಸಿಕ ಹಿಂಸೆ ನೀಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವೈಜ್ಞಾನಿಕ ಶಿಕ್ಷಣಕ್ಕೆ ಒತ್ತು ನೀಡದೆ ವ್ಯಾಪಾರದ ಕೇಂದ್ರಗಳಾಗಿ ಬದಲಾಗುತ್ತಿವೆ. ಸರ್ಕಾರದ ನಿಯಮಾವಳಿಗಳನ್ನು ಗಾಳಿಗೆ ತೂರಿರುವ ಖಾಸಗಿ ಶಾಲೆಗಳಿಗೆ ಶೀಘ್ರವೇ ಕಡಿವಾಣ ಹಾಕಬೇಕು. ಶೈಕ್ಷಣಿಕ ವರ್ಷದಲ್ಲಾದರೂ ಖಾಸಗಿ ಶಾಲೆಗಳ ದುಬಾರಿ ಶುಲ್ಕ ದಂಧೆಯಿಂದ ಪೋಷಕರನ್ನು ರಕ್ಷಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ನೀಡಿ ಆಗ್ರಹಿಸಿದರು.ಈ ವೇಳೆ ಸಂಘಟನೆ ತಾಲೂಕು ಯುವ ಘಟಕದ ಅಧ್ಯಕ್ಷ ಕಾಮನಹಳ್ಳಿ ಮಹೇಶ್, ಕಾರ್ಯಾಧ್ಯಕ್ಷ ಕೆರೆಕೋಡಿ ಆನಂದ, ಉಪಾಧ್ಯಕ್ಷ ಯೋಗೇಶ್, ಶಂಕರ್, ಅರುಣ್, ಶಶಿ, ಶಿವು ಮೋಹನ್, ದಿಲೀಪ್, ಸೇರಿದಂತೆ ಇತರರಿದ್ದರು.