ಕನ್ನಡಪ್ರಭ ವಾರ್ತೆ ಬೆಳಗಾವಿ

ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಶ್ರೀಮಂತ ಉದ್ಯಮಿಗಳನ್ನು ಗುರಿಯಾಗಿಸಿ ಹನಿಟ್ರ್ಯಾಪ್ ನಡೆಸುತ್ತಿದ್ದ ಮಹಿಳೆಯನ್ನು ಬೆಳಗಾವಿಯ ಟಿಳಕವಾಡಿ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮೂಲತಃ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ನಿವಾಸಿ ದೀಪಾ ಅವಟಗಿ (33) ಬಂಧಿತ ಆರೋಪಿ. ದೀಪಾ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂ ಮೂಲಕ ಶ್ರೀಮಂತ ಉದ್ಯಮಿಗಳು ಹಾಗೂ ವ್ಯಾಪಾರಸ್ಥರೊಂದಿಗೆ ಪರಿಚಯ ಬೆಳೆಸುತ್ತಿದ್ದಳು. ಆರಂಭದಲ್ಲಿ ಸ್ನೇಹದಿಂದ ಮಾತನಾಡಿ ವಿಶ್ವಾಸ ಗಳಿಸಿಕೊಂಡ ಬಳಿಕ, ಅವರನ್ನು ನಗರದ ಲಾಡ್ಜ್ ಅಥವಾ ಹೋಟೆಲ್‌ಗೆ ಕರೆಸಿಕೊಳ್ಳುತ್ತಿದ್ದಳು. ಅಲ್ಲಿ ವ್ಯಕ್ತಿಯೊಂದಿಗೆ ಕೆಲ ಸಮಯ ಕಳೆದ ಬಳಿಕ ಅವರು ಸ್ನಾನಕ್ಕೆ ಹೋಗುವ ಸಂದರ್ಭವನ್ನು ಕಾಯುತ್ತಿದ್ದಳು. ಆ ವೇಳೆ ಅವರ ಮೊಬೈಲ್ ಫೋನ್, ಹಣ, ಚಿನ್ನಾಭರಣಗಳು ಹಾಗೂ ಇತರೆ ಬೆಲೆಬಾಳುವ ವಸ್ತುಗಳನ್ನು ಕದ್ದು ಪರಾರಿಯಾಗುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಕೆಲವು ಪ್ರಕರಣಗಳಲ್ಲಿ ಹಣ ನೀಡದಿದ್ದರೆ ತಮ್ಮ ಮೇಲೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಪೊಲೀಸ್ ಠಾಣೆಗೆ ದೂರು ನೀಡುವುದಾಗಿ ಬೆದರಿಕೆ ಹಾಕುತ್ತಿದ್ದಳು ಎಂಬ ಸಂಗತಿಯೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಇದರಿಂದಾಗಿ ಕೆಲವು ಮಂದಿ ಭಯದಿಂದ ಹಣ ನೀಡಿರುವ ಸಾಧ್ಯತೆಯೂ ಇದೆ ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.

ಈ ಕೃತ್ಯಗಳಿಗೆ ಹುಕ್ಕೇರಿ ತಾಲೂಕಿನ ಶಿವಾನಂದ ಮಠಪತಿ ಎಂಬಾತ ಸಹಕಾರ ನೀಡುತ್ತಿದ್ದಾನೆ ಎನ್ನುವ ಬಗ್ಗೆಯೂ ತನಿಖೆಯಲ್ಲಿ ತಿಳಿದುಬಂದಿದೆ. ಇಬ್ಬರೂ ಸೇರಿ ಶ್ರೀಮಂತ ಉದ್ಯಮಿಗಳನ್ನು ಗುರಿಯಾಗಿಸಿಕೊಂಡು ಈ ರೀತಿಯ ಹನಿಟ್ರ್ಯಾಪ್ ಜಾಲ ನಡೆಸುತ್ತಿದ್ದರು ಎಂಬುದು ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ ಎಂದು ಹೇಳಿದ್ದಾರೆ.


ಇತ್ತೀಚೆಗೆ ನಗರದಲ್ಲಿನ ಉದ್ಯಮಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಬಳಿಕ, ಪೊಲೀಸರು ನಡೆಸಿದ ಗುಪ್ತಚರ ಕಾರ್ಯಾಚರಣೆ ವೇಳೆ ಬೆಳಗಾವಿಯ ಹೋಟೆಲ್‌ವೊಂದರಲ್ಲಿ ದೀಪಾ ಅವಟಗಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಯಿಂದ ಒಂದು ಫಾರ್ಚುನರ್ ಕಾರು, ಮಾರುತಿ ಸುಜುಕಿ ಕಾರು, 11 ಮೊಬೈಲ್ ಫೋನ್‌ಗಳು, ಒಂದು ಟ್ಯಾಬ್, ಡೊಂಗಲ್, ಮೂರು ಕಾರ್‌ಗಳ ಕೀಗಳು ಹಾಗೂ ₹ 14 ಸಾವಿರ ನಗದು ಸೇರಿ ಒಟ್ಟು ಸುಮಾರು ₹ 32.86 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕಾರ್ಯಾಚರಣೆಯನ್ನು ಟಿಳಕವಾಡಿ ಠಾಣೆಯ ಇನ್‌ಸ್ಪೆಕ್ಟರ್ ಪರಶುರಾಮ್ ಪೂಜೇರಿ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ನಡೆಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿರುವ ಶಿವಾನಂದ್ ಮಠಪತಿ ಪರಾರಿಯಾಗಿದ್ದು, ಆತನ ಬಂಧನಕ್ಕಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಹೆಚ್ಚಿನ ಮಾಹಿತಿಯನ್ನು ಪೊಲೀಸರು ಸಂಗ್ರಹಿಸುತ್ತಿದ್ದಾರೆ.