ಸಾರಾಂಶ
ಶಿವಮೊಗ್ಗ: ಕಾಂಗ್ರೆಸ್ ಸರ್ಕಾರ ಕರ್ನಾಟಕ ಜನರ ಬದುಕಿಗೆ ಶಾಪವಾದ ವಸೂಲಿ ಸರ್ಕಾರ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿದರು.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ಕರ್ನಾಟಕ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ 8 ಪುಟದ ಚಾರ್ಜ್‌ಶೀಟ್ ಅನ್ನು ಬಿಡುಗಡೆಗೊಳಿಸಿ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.ಭ್ರಷ್ಟಾಚಾರದ ಕೂಪವಾದ ಕರ್ನಾಟಕ ಸರ್ಕಾರದಿಂದ ಸಾರ್ವಜನಿಕರ ಹಣ ಹೇಗೆ ಲೂಟಿ ಮಾಡುವುದು? ಅವರ ಜೇಬಿಗೆ ಹೇಗೆ ಕತ್ತರಿ ಹಾಕುವುದು, ಮತ್ತು ಅವರನ್ನು ಹೇಗೆ ಮೋಸ ಮಾಡುವುದು ಎಂಬುದನ್ನು ಈ ಭಂಡ ಸರ್ಕಾರ ತಿಳಿಸಿಕೊಟ್ಟಿದೆ. ಜನರು ಈ ಬಗ್ಗೆ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದು, ಬಿಜೆಪಿ ಕೂಡ ಸದನದ ಒಳಗೆ ಮತ್ತು ಹೊರಗೆ ಹಲವು ಹೋರಾಟಗಳ ಮೂಲಕ ಪ್ರತಿಭಟಿಸುತ್ತಿದೆ. ಇದೀಗ ಅಭಿವೃದ್ಧಿಶೂನ್ಯ ಸರ್ಕಾರದ ಚಾರ್ಜ್‌ಶೀಟ್ ಅನ್ನು ಬಿಡುಗಡೆ ಮಾಡಿ ರಾಜ್ಯಾದ್ಯಂತ ಮನೆಮನೆಗೆ ತಲುಪಿಸುವ ಕಾರ್ಯ ಮಾಡುತ್ತಿದೆ ಎಂದರು.
ಜನರು ಬಹುಮತ ಕೊಟ್ಟಿದ್ದಾರೆ ಎಂಬ ದುರಹಂಕಾರದಿಂದ ತಮಗೆ ಬೇಕಾದ ಬಿಲ್‌ಗಳನ್ನು ಪಾಸ್ ಮಾಡಿಕೊಂಡು ದುರ್ವರ್ತನೆ ತೋರುತ್ತಿದ್ದಾರೆ. ಧ್ವನಿ ಎತ್ತಿದ 18 ಶಾಸಕರನ್ನು ಸಸ್ಪೆಂಡ್ ಮಾಡಿರುವುದು ಇವರ ಆಡಳಿತದ ಕೈಗನ್ನಡಿಯಾಗಿದೆ ಎಂದು ಕಿಡಿಕಾರಿದರು.ಒಂದೆಡೆ 2 ಸಾವಿರ ರು. ಕೊಡುತ್ತಿದ್ದೇವೆ ಎಂದು ಹೇಳಿ ನೀರು, ಹಾಲು, ಪೆಟ್ರೋಲ್, ಡೀಸೆಲ್, ವಿದ್ಯುತ್, ಮೆಟ್ರೋ ರೈಲು, ಸ್ಮಾರ್ಟ್ ಮೀಟರ್, ಸ್ಟಾಂಪ್ ಡ್ಯೂಟಿ, ಅಫಿಡವಿಟ್ ಶುಲ್ಕ, ಎಂಜಿನಿಯರಿಂಗ್ ಕಾಲೇಜ್ ಶುಲ್ಕ, ಮದ್ಯದ ಬೆಲೆ, ಸಾಮಾನ್ಯ ವಾರ್ಡ್ ಶುಲ್ಕ, ಆಸ್ಪತ್ರೆಯ ಹೊರ ರೋಗಿ ಶುಲ್ಕ, ವಾಹನ ನೋಂದಣಿ ಶುಲ್ಕ, ಜನನ ಮತ್ತು ಮರಣ ಪ್ರಮಾಣ ಪತ್ರ ಶುಲ್ಕ ಎಲ್ಲವನ್ನೂ ಏರಿಸಿದ್ದು, ಹುಟ್ಟಿನಿಂದ ಸಾವಿನವರೆಗೆ ಈ ಕಾಂಗ್ರೆಸ್ ಸರ್ಕಾರ ಸರ್ವವ್ಯಾಪಿ ಬೆಲೆ ಹೆಚ್ಚಳ ಮಾಡಿ ಭ್ರಷ್ಟಾಚಾರ ಮಾಡುತ್ತಾ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸ್ವತಃ ಗುತ್ತಿಗೆದಾರರೇ ಈ ಸರ್ಕಾರ 60 ಪಸೆಂಟ್ ಸರ್ಕಾರ ಎಂದು ದಾಖಲೆ ಸಮೇತ ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಅಬಕಾರಿ ಸಚಿವರ ವಿರುದ್ಧ ವಾರ್ಷಿಕ 500 ಕೋಟಿ ರು. ಮದ್ಯ ವ್ಯಾಪಾರಿಗಳಿಂದ ಲಂಚ ವಸೂಲಿ ಆರೋಪದ ಆಡಿಯೋ ಸಾಕ್ಷ್ಯ ಬಹಿರಂಗಗೊಂಡಿದೆ. ವಾಲ್ಮೀಕಿ ನಿಗಮದ ಹಗರಣ, ಮುಡಾ ಹಗರಣ, ಸ್ಮಾರ್ಟ್ ಮೀಟರ್ ಹಗರಣ ಸೇರಿದಂತೆ ಅನೇಕ ಹಗರಣಗಳು ನಡೆದಿದ್ದು, ಗೃಹಲಕ್ಷ್ಮಿ ಹಣಕ್ಕೆ ಸತಾಯಿಸಲಾಗುತ್ತಿದೆ. ಅನ್ನಭಾಗ್ಯದ ಅಕ್ಕಿಯಲ್ಲಿ ಕಲ್ಲು, ನ್ಯಾಯಬೆಲೆ ಅಂಗಡಿಗಳಲ್ಲಿ ನೋಸ್ಟಾಕ್ ಬೋರ್ಡ್, ಗೃಹಜ್ಯೋತಿ ಹೆಸರಿನಲ್ಲಿ ಅಧಿಕ ವಿದ್ಯುತ್ ಬಿಲ್ ವಸೂಲಿಯಾಗುತ್ತಿದ್ದು, ಶೂನ್ಯ ಅಭಿವೃದ್ಧಿ ಮತ್ತು ದುರಾಡಳಿತದಿಂದಾಗಿ ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ. ಬಹುತೇಕ ಯೋಜನೆಗಳು ಸ್ಥಗಿತಗೊಂಡಿವೆ ಎಂದರು.ಜನರ ಮೇಲೆ ಹೆಚ್ಚುವರಿ ತೆರಿಗೆ ಹೇರಿ ಹಗಲು ದರೋಡೆಗೆ ಕೈಹಾಕಿದ ಈ ಸರ್ಕಾರದ ವಿರುದ್ಧ ಜನಜಾಗೃತಿ ಮೂಡಿಸಲು ಇಂದಿನಿಂದ ಚಾರ್ಜ್‌ಶೀಟ್ ಬಿಡುಗಡೆಗೊಳಿಸಿ ಅಭಿಯಾನ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್, ಶಾಸಕ ಡಿ.ಎಸ್.ಅರುಣ್, ಪ್ರಮುಖರಾದ ಜ್ಯೋತಿಪ್ರಕಾಶ್, ಶಿವರಾಜ್, ಅಣ್ಣಪ್ಪ, ಮಾಲತೇಶ್, ಚಂದ್ರಶೇಖರ್ ಮತ್ತಿತರರಿದ್ದರು.