ಸಾರಾಂಶ
ಶಾಲೆಗಳಲ್ಲಿ ಶಿಕ್ಷಕರು ಕೇವಲ ಪಾಠ ಬೋಧನೆ ಮಾಡಿದರೆ ಸಾಲದು. ಮಕ್ಕಳಲ್ಲಿ ಹುದುಗಿರುವ ಕೌಶಲ ಗುರ್ತಿಸುವುದೂ ಅಗತ್ಯವಾಗಿದೆ. ಮಗುವಿನ ಕೌಶಲ್ಯಗಳನ್ನು ಗುರುತಿಸಲು ಪಠ್ಯೇತರ ಚಟುವಟಿಕೆಗಳಿಂದ ಮಾತ್ರ ಸಾಧ್ಯ ಎಂದು ಇಲ್ಲಿನ ವೆಂಕಟೇಶ ಕನ್ನಡ ಮಾಧ್ಯಮ ಶಾಲೆಯ ವಿಶ್ರಾಂತ ಮುಖ್ಯೋಪಾಧ್ಯಾಯ ರಘು ಕಾಟವಾ ಹೇಳಿದರು.
ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ಶಾಲೆಗಳಲ್ಲಿ ಶಿಕ್ಷಕರು ಕೇವಲ ಪಾಠ ಬೋಧನೆ ಮಾಡಿದರೆ ಸಾಲದು. ಮಕ್ಕಳಲ್ಲಿ ಹುದುಗಿರುವ ಕೌಶಲ ಗುರ್ತಿಸುವುದೂ ಅಗತ್ಯವಾಗಿದೆ. ಮಗುವಿನ ಕೌಶಲ್ಯಗಳನ್ನು ಗುರುತಿಸಲು ಪಠ್ಯೇತರ ಚಟುವಟಿಕೆಗಳಿಂದ ಮಾತ್ರ ಸಾಧ್ಯ ಎಂದು ಇಲ್ಲಿನ ವೆಂಕಟೇಶ ಕನ್ನಡ ಮಾಧ್ಯಮ ಶಾಲೆಯ ವಿಶ್ರಾಂತ ಮುಖ್ಯೋಪಾಧ್ಯಾಯ ರಘು ಕಾಟವಾ ಹೇಳಿದರು.ಅವರು ಪಟ್ಟಣದ ಪಿಇ ಟ್ರಸ್ಟಿನ ಅಂತಾರಾಷ್ಟ್ರೀಯ ಶಾಲೆಯ ಹೂಡಿಕೆ ಹಾಗೂ ಪಠ್ಯೇತರ ಚಟುವಟಿಕೆಗಳ ಉದ್ಘಾಟನೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಶಾಲೆಯಲ್ಲಿ ಮಕ್ಕಳ ಶಿಸ್ತು ಹಾಗೂ ಸಂಸ್ಕಾರದ ಬಗ್ಗೆ ಹೆಚ್ಚಿನ ಮಹತ್ವ ನೀಡಬೇಕು. ಶಿಕ್ಷಕ ವೃಂದ ಅಚ್ಚುಕಟ್ಟಾದ ಮಾರ್ಗದರ್ಶನ ಮಾಡುತ್ತಿರಬೇಕು. ಇವುಗಳ ಜೊತೆಗೆ ಮಗುವಿನ ಕೌಶಲಗಳನ್ನು ಗುರುತಿಸಲು ಪಠ್ಯೇತರ ಚಟುವಟಿಕೆಗಳನ್ನು ಮೇಲಿಂದ ಮೇಲೆ ಹಮ್ಮಿಕೊಳ್ಳಬೇಕು. ಪಠ್ಯೇತರ ಚಟುವಟಿಕೆಗಳಿಂದ ಮಾತ್ರ ಮಗುವಿನ ಕೌಶಲ್ಯ ಗುರ್ತಿಸಲು ಸಾಧ್ಯ ಎಂದರು.
ಪಿಇ ಟ್ರಸ್ಟಿನ ಗೌರವ ಕಾರ್ಯದರ್ಶಿ ರವೀಂದ್ರ ಪಟ್ಟಣಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಾಲೆಯ ಉತ್ತಮ ಬೆಳವಣಿಗೆಯಲ್ಲಿ ಶಾಲೆಯ ಆಡಳಿತ ಮಂಡಳಿ ಹಾಗೂ ಶಾಲಾ ಶಿಕ್ಷಕ ವೃಂದದವರ ತ್ಯಾಗ ಅಪಾರವಾಗಿದೆ ಎಂದು ಹೇಳಿದರು.ಇದೇ ಸಂದರ್ಭದಲ್ಲಿ, ಶಾಲಾ ಸಂಸತ್ತಿನ ಚುನಾವಣೆಯಲ್ಲಿ ಚುನಾಯಿತ ಪ್ರತಿನಿಧಿಗಳಿಗೆ ಎಸ್.ಎಸ್.ನಾಯನೇಗಲಿ ಪ್ರಮಾಣವಚನ ಸ್ವೀಕರಿಸಿದರು. ಶಾಲೆಯ ಚೇರಮನ್ ಪುರುಷೋತ್ತಮ ಝಂವರ್ ಅಧ್ಯಕ್ಷತೆವಹಿಸಿ ಮಾತನಾಡಿದರು. ಶಾಲೆಯ ಆಡಳಿತ ಮಂಡಳಿಯ ಸದಸ್ಯ ಎಸ್. ಎಸ್. ನಾಯನೇಗಲಿ, ಲಕ್ಷ್ಮಿ ನಿವಾಸ ಕಾಬರಾ, ಅಮಾತೆಪ್ಪ ಕೊಪ್ಪಳ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.