ಮಕ್ಕಳ ಸಮಗ್ರ ಬೆಳವಣಿಗೆಗೆ ಪಠ್ಯೇತರ ಚಟುವಟಿಕೆ ಅಗತ್ಯ

| Published : Feb 27 2024, 01:38 AM IST

ಮಕ್ಕಳ ಸಮಗ್ರ ಬೆಳವಣಿಗೆಗೆ ಪಠ್ಯೇತರ ಚಟುವಟಿಕೆ ಅಗತ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಮಕ್ಕಳಲ್ಲಿನ ವಿವಿಧ ರೀತಿಯ ಪ್ರತಿಭೆ, ಕಲೆ, ಕ್ರೀಡೆ ಹೀಗೆ ಪಠ್ಯೇತರ ಚಟುವಟಿಕೆಗಳು ಅವರ ಸಮಗ್ರ ಬೆಳವಣಿಗೆಗೆ ಪೂರಕವಾಗಿದ್ದು, ಶೈಕ್ಷಣಿಕ ಚಟುವಟಿಕೆಯೊಂದಿಗೆ ಇವಕ್ಕೂ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಇಂದಿನ ಮಕ್ಕಳೇ ಭವಿಷ್ಯದ ಪ್ರಜೆಗಳು. ಸಾಮಾನ್ಯವಾಗಿ ವಿದ್ಯಾರ್ಥಿಗಳ ಓದಿಗೆ ಹೆಚ್ಚಿನ ಒತ್ತು ಮತ್ತು ಒತ್ತಡ ಹಾಕುತ್ತೇವೆ. ಆದರೆ, ಶೈಕ್ಷಣಿಕ ಚಟುವಟಿಕೆ ಜೊತೆಗೆ ಪಠ್ಯೇತರ ಚಟುವಟಿಕೆಗಳ ಕಡೆ ಸಹ ಗಮನಹರಿಸುವುದೂ ಬಹುಮುಖ್ಯ ಎಂದು ಜಿಪಂ ಸಿಇಒ ಸ್ನೇಹಲ್ ಸುಧಾಕರ ಲೋಖಂಡೆ ಶಿವಮೊಗ್ಗದಲ್ಲಿ ಸಲಹೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗಮಕ್ಕಳಲ್ಲಿನ ವಿವಿಧ ರೀತಿಯ ಪ್ರತಿಭೆ, ಕಲೆ, ಕ್ರೀಡೆ ಹೀಗೆ ಪಠ್ಯೇತರ ಚಟುವಟಿಕೆಗಳು ಅವರ ಸಮಗ್ರ ಬೆಳವಣಿಗೆಗೆ ಪೂರಕವಾಗಿದ್ದು, ಶೈಕ್ಷಣಿಕ ಚಟುವಟಿಕೆಯೊಂದಿಗೆ ಇವಕ್ಕೂ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಎಂದು ಜಿಪಂ ಸಿಇಒ ಸ್ನೇಹಲ್ ಸುಧಾಕರ ಲೋಖಂಡೆ ಹೇಳಿದರು.

ನಗರದ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಶಿವಮೊಗ್ಗ ಹಾಗೂ ಧಾರವಾಡದ ಕರ್ನಾಟಕ ಬಾಲವಿಕಾಸ ಅಕಾಡೆಮಿ ಸಹಯೋಗದಲ್ಲಿ ಏರ್ಪಡಿಸಿದ್ದ ಮಕ್ಕಳ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ಮಕ್ಕಳೇ ಭವಿಷ್ಯದ ಪ್ರಜೆಗಳು. ಸಾಮಾನ್ಯವಾಗಿ ವಿದ್ಯಾರ್ಥಿಗಳ ಓದಿಗೆ ಹೆಚ್ಚಿನ ಒತ್ತು ಮತ್ತು ಒತ್ತಡ ಹಾಕುತ್ತೇವೆ. ಆದರೆ, ಶೈಕ್ಷಣಿಕ ಚಟುವಟಿಕೆ ಜೊತೆಗೆ ಪಠ್ಯೇತರ ಚಟುವಟಿಕೆಗಳ ಕಡೆ ಸಹ ಗಮನಹರಿಸುವುದೂ ಬಹುಮುಖ್ಯ. ಶಾಲೆಯಲ್ಲಿ ಶಿಕ್ಷಕರು ಮತ್ತು ಮನೆಗಳಲ್ಲಿ ಪೋಷಕರು ಮಕ್ಕಳಲ್ಲಿನ ಪ್ರತಿಭೆಯನ್ನು ಗುರುತಿಸುವ ಕೆಲಸ ಮಾಡಬೇಕು. ಅವರ ಆಸಕ್ತಿಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಮಕ್ಕಳೂ ಇಂತಹ ವೇದಿಕೆಗಳ ಸದುಪಯೋಗ ಪಡೆಯಬೇಕು ಎಂದು ಸಲಹೆ ನೀಡಿದರು.

ಡಿಡಿಪಿಐ ಸಿ.ಆರ್. ಪರಮೇಶ್ವರಪ್ಪ ಮಾತನಾಡಿ, ನಾವು ಸಾಮಾನ್ಯವಾಗಿ ಮಕ್ಕಳ ಓದಿನ ಬಗ್ಗೆ ಮಾತ್ರ ಒತ್ತಡ ಹಾಕುತ್ತೇವೆ. ಅವರಲ್ಲಿ ಸುಪ್ತಪ್ರತಿಭೆ, ಸೃಜನಶೀಲತೆ ಅಡಿಗಿದೆ. ಆದ್ದರಿಂದ ಸಹಪಠ್ಯ ಚಟುವಟಿಕೆಗಳಾದ ಸಂಗೀತ, ಸಾಹಿತ್ಯ, ಕ್ರೀಡೆ, ನೃತ್ಯ ಇತರೆ ಪ್ರತಿಭೆಗಳನ್ನು ಗುರುತಿಸಿದಲ್ಲಿ, ಅವರ ಮುಂದಿನ ಜೀವನಕ್ಕೆ ಸಹಕಾರಿಯಾಗಲಿದೆ ಎಂದು ಹೇಳಿದರು.

ರಂಗಾಯಣದ ಆಡಳಿತಾಧಿಕಾರಿ ಎ.ಸಿ. ಶೈಲಜಾ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಒತ್ತಡ ನಿರ್ವಹಣೆಗೆ ಪಠ್ಯೇತರ ಚಟುವಟಿಕೆ ಅನುಕೂಲ. ಅವರಲ್ಲಿರುವ ಪ್ರತಿಭೆಯನ್ನು ಮುಂದೆ ವೃತ್ತಿಯಾಗಿಸಬಹುದು. ರಂಗಾಯಣದಿಂದ ಯುವ ಪ್ರತಿಭೆಗಳನ್ನು ಸೆಳೆಯಲು ನಾಟಕ, ರಂಗಗೀತೆ ಹೀಗೆ ಹಲವಾರು ತರಬೇತಿ, ಶಿಬಿರಗಳನ್ನು ನಡೆಸಲಾಗುತ್ತಿದ್ದು ಆಸಕ್ತರು ಇದರ ಸದುಪಯೋಗ ಪಡೆಯಬೇಕು ಎಂದರು.

ಮಹಿಳಾ ಮತ್ತು ಮಹಿಳಾ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಬಿ.ಎಚ್. ಕೃಷ್ಣಪ್ಪ ಮಾತನಾಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ಡಾ.ಸಂತೋಷಕುಮಾರ್, ಸಿಡಿಪಿಗಳು, ಇತರೇ ಅಧಿಕಾರಿಗಳು, ಸಿಬ್ಬಂದಿ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

- - - ಬಾಕ್ಸ್‌ 400 ಮಕ್ಕಳು ಭಾಗಿ: ಶಶಿರೇಖಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಶಶಿರೇಖಾ ಪ್ರಾಸ್ತಾವಿಕವಾಗಿ ಮಾತನಾಡಿ, 6ರಿಂದ 16 ವರ್ಷದ ಮಕ್ಕಳಲ್ಲಿನ ಸೃಜನಾತ್ಮಕತೆ, ಪ್ರತಿಭೆ ಮತ್ತು ಕಲೆಯನ್ನು ಉತ್ತೇಜಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಚಿತ್ರಕಲೆ, ಕವನ, ಪದ್ಯ ವಾಚನ, ಜಾನಪದ ಗೀತೆ, ಜಾನಪದ ನೃತ್ಯ, ಜಾನಪದ ಗೀತೆ ಹಾಗೂ ಸಾಮೂಹಿಕ ವಿಭಾಗದಲ್ಲಿ ಜಾನಪದ ಕ್ರೀಡೆ (ಹಗ್ಗ ಜಗ್ಗಾಟ) ಸ್ಪರ್ಧೆಗಳನ್ನು ಆಯೋಜಿಸಿದ್ದು, ಎಲ್ಲ ತಾಲೂಕುಗಳಿಂದ ಸುಮಾರು 400 ಮಕ್ಕಳು ಪಾಲ್ಗೊಂಡಿದ್ದಾರೆ ಎಂದು ತಿಳಿಸಿದರು.

- - - -26ಎಸ್‌ಎಂಜಿಕೆಪಿ04:

ಶಿವಮೊಗ್ಗದ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಮಕ್ಕಳ ಹಬ್ಬ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ಪ್ರದರ್ಶಿಸಿದ ಕಂಸಾಳೆ ನೃತ್ಯ ಎಲ್ಲರ ಮನಸೆಳೆಯಿತು.