ಸಾರಾಂಶ
ನಾಟಕ ಪಠ್ಯ-ರಂಗಪಠ್ಯಗಳ ಓದು: ತಾತ್ವಿಕ ಸ್ವರೂಪ; ಒಂದು ದಿನದ ವಿಚಾರ ಸಂಕಿರಣ
ಕನ್ನಡಪ್ರಭ ವಾರ್ತೆ ಸಂಡೂರುಮಕ್ಕಳಿಗೆ ಪಾಠ ಬೋಧನೆಯ ಜೊತೆಗೆ ಪಠ್ಯೇತರ ಚಟುವಟಿಕೆಗಳು ಮುಖ್ಯವಾಗಿವೆ. ಮಕ್ಕಳಿಗೆ ಕಥೆ, ಕವನ, ನಾಟಕ ಹಾಗೂ ಸಂಗೀತ ಬೋಧನೆಯಿಂದ ಅವರ ಬುದ್ಧಿ ಚುರುಕಾಗುತ್ತದೆ ಹಾಗೂ ಏಕಾಗ್ರತೆ ಹೆಚ್ಚುತ್ತದೆ ಎಂದು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ. ಮುನಿರಾಜು ಹೇಳಿದರು. ತಾಲೂಕಿನ ನಂದಿಹಳ್ಳಿಯ ಸ್ನಾತಕೋತ್ತರ ಕೇಂದ್ರದ ಸ್ಕಂದಗಿರಿ ಸಭಾಂಗಣದಲ್ಲಿ ಕರ್ನಾಟಕ ನಾಟಕ ಅಕಾಡೆಮಿ, ಬೆಂಗಳೂರು, ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗ ಹಾಗೂ ನಂದಿಹಳ್ಳಿಯ ಸ್ನಾತಕೋತ್ತರ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ನಾಟಕ ಪಠ್ಯ ಮತ್ತು ರಂಗಪಠ್ಯಗಳ ಓದು: ತಾತ್ವಿಕ ಸ್ವರೂಪ ಎಂಬ ಒಂದು ದಿನದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಮಕ್ಕಳನ್ನು ಟಿವಿ, ಮೊಬೈಲ್ ಗೀಳಿನಿಂದ ಹೊರತರಲು ಮತ್ತು ಅವರನ್ನು ಓದುವ ಪ್ರವೃತ್ತಿಗೆ ಇಳಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಆಯೋಜನೆಗೊಳ್ಳುತ್ತಿರಬೇಕು. ಈ ಭಾಗದ ಖನಿಜ ಸಂಪತ್ತು ದೇಶದಲ್ಲಿ ಪ್ರಮುಖವಾಗಿದ್ದು, ಇಂತಹ ಸ್ಥಳದಲ್ಲಿ ಸಾಂಸ್ಕೃತಿಕ ಕೇಂದ್ರ ಆರಂಭವಾದರೆ, ನಾಟಕ, ಸಂಗೀತ ಹಾಗೂ ಕಲೆ ಸಮೃದ್ಧಿಗೊಳ್ಳಲಿದೆ. ಇಲ್ಲಿ ನಾಟಕ ತರಬೇತಿ ಕೇಂದ್ರವನ್ನು ಪ್ರಾರಂಭಿಸಿದರೆ, ಕಲ್ಯಾಣ ಕರ್ನಾಟಕ ಭಾಗದ ಮಕ್ಕಳಿಗೆ ತುಂಬಾ ಅನುಕೂಲವಾಗಲಿದೆ ಎಂದರು.
ಕೇಂದ್ರದಲ್ಲಿ ಸ್ಕೂಲ್ ಆಫ್ ಮಿನರಲ್ ಸೈನ್ಸ್, ಇಂಟರ್ ನ್ಯಾಷನಲ್ ಸ್ಪೋರ್ಟ್ಸ್ ಅಕಾಡೆಮಿ ಆರಂಭಿಸುವ ಹಾಗೂ ಹೊಸ ಕೋರ್ಸಗಳನ್ನು ತರುವ ಪ್ರಯತ್ನದಲ್ಲಿದ್ದೇನೆ. ಈ ಕೇಂದ್ರವನ್ನು ಒಂದು ಒಳ್ಳೆಯ ವಸತಿಯುತ ವಿಶ್ವವಿದ್ಯಾಲಯವನ್ನಾಗಿ ರೂಪಿಸುವ ಮತ್ತು ನಂದಿಹಳ್ಳಿಯ ಕ್ಯಾಂಪಸ್ ಅನ್ನು ನಂಬರ್ ಒನ್ ಕ್ಯಾಂಪಸ್ ಆಗಿ ರೂಪಿಸುವ ಆಸೆ ಇಟ್ಟುಕೊಂಡಿದ್ದೇನೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.ವಿಶ್ವವಿದ್ಯಾಲಯದ ನಾಟಕ ವಿಭಾಗದ ಮುಖ್ಯಸ್ಥ ಪ್ರೊ. ಶಾಂತನಾಯ್ಕ ಶಿರಗಾನಹಳ್ಳಿ ಮಾತನಾಡಿ, ಭಾರತೀಯರು ನಾಟಕಕ್ಕೆ ಕೊಟ್ಟ ಕೊಡುಗೆಯನ್ನು ಬೇರೆ ಯಾವ ಪಾಶ್ಚಾತ್ಯರೂ ಕೊಟ್ಟಿಲ್ಲ. ರಂಗದ ಮೇಲಿನ ನಾಟಕಕ್ಕೆ ತುಂಬಾ ಮಹತ್ವವಿದೆ. ನಾಟಕಗಳು ಸಮಾಜಕ್ಕೆ ಹಿಡಿದ ಕೈಗನ್ನಡಿ ಎಂದರು.
ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷ ಡಾ. ಕೆ.ವಿ. ನಾಗರಾಜಮೂರ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಕರ್ನಾಟಕದ ಶ್ರೀಮಂತ ಕಲೆ ಎಂದರೆ ರಂಗ ಕಲೆ. ರಂಗಕಲೆಯಲ್ಲಿ ನಾಟಕ ಪಠ್ಯ ಮತ್ತು ರಂಗಪಠ್ಯಗಳ ಓದು ಮಕ್ಕಳಿಗೆ ಮುಖ್ಯವಾದದ್ದು. ಗ್ರಾಮೀಣ ಭಾಗದ ಕಲಾವಿದರು ರಂಗಕಲೆಯನ್ನು ಉಳಿಸುತ್ತಾ ಬೆಳೆಸುತ್ತಾ ಬಂದಿದ್ದಾರೆ. ಬಳ್ಳಾರಿ ಜಿಲ್ಲೆ ಕಲೆಗಳ ತವರೂರು. ವಿಶ್ವವಿದ್ಯಾಲಯದ ಕುಲಪತಿಗಳು ವರದಿ ನೀಡಿದರೆ, ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದಲ್ಲಿ ರಂಗಕಲೆಯ ಕೇಂದ್ರವನ್ನು ಆರಂಭಿಸಲು ಪ್ರಯತ್ನಿಸುತ್ತೇನೆ ಎಂದು ತಿಳಿಸಿದರು.ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯ ಶಿವನಾಯಕ ದೊರೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿಚಾರ ಸಂಕಿರಣದ ಸಂಚಾಲಕ ಡಾ. ಮಲ್ಲಯ್ಯ ಸಂಡೂರು ಸ್ವಾಗತಿಸಿ ನಿರೂಪಿಸಿದರು. ಕನ್ನಡ ವಿಷಯದ ಅಧ್ಯಾಪಕ ಗುಡ್ಡಪ್ಪ ವಂದಿಸಿದರು.
ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕಲಾನಿಕಾಯದ ಡೀನ ರಾಬರ್ಟ್ ಜೋಸ್, ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ. ರವಿ ಬಿ., ವಿಶ್ವವಿದ್ಯಾಲಯ ಮುಖ್ಯ ಆವರಣದ ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥ ಸಂತೋಷ್ ಕುಮಾರ ಜಿ.ಕೆ., ಹಿರಿಯ ಚಿತ್ರಕಲಾವಿದ ನಾಡೋಜ ಡಾ.ವಿ.ಟಿ. ಕಾಳೆ, ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತ ಮರಿಯಮ್ಮನಹಳ್ಳಿಯ ಡಾ. ಕೆ. ನಾಗರತ್ನಮ್ಮ, ಕೇಂದ್ರದ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.