ಸಾರಾಂಶ
ಬಾಂಗ್ಲಾ ದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಕೊಲೆ, ದೌರ್ಜನ್ಯ, ಮಹಿಳೆಯರ ಮೇಲೆ ಅತ್ಯಾಚಾರ ಹಾಗೂ ಹಿಂದೂ ದೇವಸ್ಥಾನಗಳ ಮೇಲೆ ಆಕ್ರಮಣ, ಆಸ್ತಿಪಾಸ್ತಿ ಹಾನಿ ಪಡಿಸಿರುವುದನ್ನು ತೀವ್ರವಾಗಿ ಖಂಡಿಸಿ ಭಟ್ಕಳ ಪಟ್ಟಣದಲ್ಲಿ ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಭಟ್ಕಳ: ಬಾಂಗ್ಲಾ ದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಕೊಲೆ, ದೌರ್ಜನ್ಯ, ಮಹಿಳೆಯರ ಮೇಲೆ ಅತ್ಯಾಚಾರ ಹಾಗೂ ಹಿಂದೂ ದೇವಸ್ಥಾನಗಳ ಮೇಲೆ ಆಕ್ರಮಣ, ಆಸ್ತಿಪಾಸ್ತಿ ಹಾನಿ ಪಡಿಸಿರುವುದನ್ನು ತೀವ್ರವಾಗಿ ಖಂಡಿಸಿ ಶನಿವಾರ ಪಟ್ಟಣದಲ್ಲಿ ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ, ಸಹಾಯಕ ಆಯುಕ್ತರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಮನವಿಯಲ್ಲಿ ಬಾಂಗ್ಲಾ ದೇಶದಲ್ಲಿ ನಡೆದ ವಿದ್ಯಾರ್ಥಿ ಸಂಘನೆಗಳ ಪ್ರತಿಭಟನೆಯ ಮುಖವಾಡದ ಹಿಂದೆ ಅಲ್ಲಿನ ದುಷ್ಟ ಮತಾಂಧ ಶಕ್ತಿಗಳು ಹಾಗೂ ಪಾಕಿಸ್ಥಾನ ಬೆಂಬಲಿತ ಅಘೋಷಿತ ಸಂಘಟನೆಗಳ ಪಿತೂರಿಯಿದೆ. ಸರ್ಕಾರದ ವಿರುದ್ಧ ದಂಗೆ ಎಬ್ಬಿಸಿ, ಅಲ್ಲಿನ ಪ್ರಧಾನಿ ರಾಜೀನಾಮೆ ಕೊಟ್ಟು ದೇಶ ಬಿಟ್ಟು ಹೋಗುವಂತೆ ಮಾಡಿದ್ದಾರೆ. ಇದೇ ಸೂಕ್ತ ಸಮಯವೆಂದು ಅಲ್ಪಸಂಖ್ಯಾತ ಹಿಂದೂಗಳನ್ನು ಗುರಿಯಾಗಿಸಿಕೊಂಡು ಹಿಂದೂ ಧರ್ಮದ ಧಾರ್ಮಿಕ ಕೇಂದ್ರಗಳನ್ನು ಭಗ್ನಗೊಳಿಸುತ್ತಿರುವುದಲ್ಲದೇ ಅಮಾಯಕ ಹಿಂದೂ ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯ ಹಾಗೂ ಹಿಂದೂಗಳ ಕಗ್ಗೊಲೆ, ಆಸ್ತಿ-ಪಾಸ್ತಿ ನಾಶದಂತಹ ಪ್ರಕರಣಗಳು ನಿರಂತರವಾಗಿ ನಡೆಯುತ್ತಿದೆ. ಅಲ್ಲಿನ ಅಲ್ಪಸಂಖ್ಯಾತ ಹಿಂದೂ ಸಮಾಜವು ಧ್ವನಿ ಎತ್ತಲಾರದೇ ಸಂಕಷ್ಟದ ಜೀವನ ನಡೆಸುತ್ತಿದ್ದಾರೆ. ಭಾರತದಲ್ಲಿ ಅಲ್ಪಸಂಖ್ಯಾತರ ಮೇಲೆ ಸಣ್ಣ ಹಲ್ಲೆಯಾದರೂ ಡೋಂಗಿ ಜಾತ್ಯತೀತವಾದಿ ಪಕ್ಷಗಳು, ಬುದ್ಧಿಜೀವಿಗಳು ಹಾಗೂ ಪ್ರಗತಿಪರರ ಹೆಸರಿನಲ್ಲಿ ಹಿಂದೂ ಧರ್ಮೀಯರ ವಿರುದ್ಧ ಬಾಯಿಗೆ ಬಂದಂತೆ ಮಾತನಾಡುವ ಜತೆಗೆ ಮಾನವ ಹಕ್ಕಿನ ಪ್ರತಿಪಾದನೆ ಮಾಡುತ್ತಿದ್ದರು. ಆದರೆ ಇವರೆಲ್ಲರೂ ಇಂದು ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ಇಷ್ಟೊಂದು ದೊಡ್ಡ ಮಟ್ಟದಲ್ಲಿ ದೌರ್ಜನ್ಯ, ಅತ್ಯಾಚಾರ, ಕೊಲೆ ನಡೆಯುತ್ತಿದ್ದರೂ ಜಾಣ ಮೌನ ವಹಿಸುವುದರ ಮೂಲಕ ತಮ್ಮ ಸೋಗಲಾಡಿತನವನ್ನು ಪ್ರದರ್ಶಿಸುತ್ತಿದ್ದಾರೆ. ಬಾಂಗ್ಲಾ ದೇಶದ ಅಲ್ಪಸಂಖ್ಯಾತ ಹಿಂದೂ ಧರ್ಮದವರ ರಕ್ಷಣೆಗೆ ನಿಲ್ಲಬೇಕಿದ್ದು, ಆ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ವಿಶ್ವಸಂಸ್ಥೆ ಮತ್ತು ಅಂತಾರಾಷ್ಡ್ರೀಯ ಮಾನವ ಹಕ್ಕು ಆಯೋಗದ ಮೂಲಕ ಸೂಕ್ತ ತನಿಖೆಗೆ ಒತ್ತಾಯಿಸಿ, ಮತಾಂಧ ಶಕ್ತಿಗಳ ಷಡ್ಯಂತ್ರಕ್ಕೆ ಕಡಿವಾಣ ಹಾಕಿ ಬಾಂಗ್ಲಾದ ಈಗಿನ ಸರ್ಕಾರಕ್ಕೆ ಕಟ್ಟುನಿಟ್ಟಿನ ಎಚ್ಚರಿಕೆ ಕೊಡಬೇಕು ಎಂದು ಆಗ್ರಹಿಸಲಾಗಿದೆ.ವಿಶ್ವ ಹಿಂದೂ ಪರಿಷತ್ತಿನ ಪ್ರಮುಖ ರಾಮಕೃಷ್ಣ ನಾಯ್ಕ, ದೇವೇಂದ್ರ, ಕೃಷ್ಣ ನಾಯ್ಕ ಆಸರಕೇರಿ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ ನಾಯ್ಕ, ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಶಿವಾನಿ ಶಾಂತರಾಮ ಭಟ್ಕಳ ಮಾತನಾಡಿದರು.
ಸಹಾಯಕ ಆಯುಕ್ತೆ ಡಾ. ನಯನಾ ಮನವಿ ಸ್ವೀಕರಿಸಿದರು. ಪ್ರಮುಖರಾದ ಈಶ್ವರ ಎನ್. ನಾಯ್ಕ, ಸುಬ್ರಾಯ ದೇವಾಡಿಗ, ರಾಜೇಶ ನಾಯ್ಕ, ಶ್ರೀನಿವಾಸ ನಾಯ್ಕ, ದಿನೇಶ ನಾಯ್ಕ, ಈಶ್ವರ ದೊಡ್ಮನೆ, ಮೋಹನ ನಾಯ್ಕ, ಕುಮಾರ ಹೆಬಳೆ, ಶ್ರೀನಿವಾಸ ನಾಯ್ಕ, ಹನುಮಾನ ನಗರ, ಕೇಶವ ನಾಯ್ಕ, ದೀಪಕ ನಾಯ್ಕ ಪಾಲ್ಗೊಂಡಿದ್ದರು.