ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರುಮಲೆಮಹದೇಶ್ವರ ಬೆಟ್ಟದಲ್ಲಿ ಮಹಾಶಿವರಾತ್ರಿ ಜಾತ್ರಾ ಮಹೋತ್ಸವದ ಪ್ರಯುಕ್ತ ಮಹಾ ರಥೋತ್ಸವವು ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು. ಸೋಮವಾರ ಬೆಳಗ್ಗೆ 9.40ಕ್ಕೆ ಪ್ರಾರಂಭಗೊಂಡ ಮಹಾರಥೋತ್ಸವ ಪೂಜಾ ಕಾರ್ಯಕ್ರಮಗಳು ಧಾರ್ಮಿಕ ವಿಧಿ ವಿಧಾನಗಳೊಂದಿಗೆ 10.10 ರವರೆಗೆ ರಥೋತ್ಸವ ಜರುಗಿತು. ಬಲಿ ಅನ್ನ ಹಾಗೂ ಬಿಳಿ ಆನೆ ಉತ್ಸವ ಮೂರ್ತಿ ಮೆರವಣಿಗೆ ಮಹಾ ರಥೋತ್ಸವಕ್ಕೆ ಕುಂಕುಮ ಮಿಶ್ರಿತ ಅನ್ನವನ್ನು ಪ್ರಸಾದ ರೂಪದಲ್ಲಿ ತಯಾರಿಸಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಪ್ರದಕ್ಷಿಣೆ ಹಾಕಿ ರಥದ ಚಕ್ರಗಳ ಮುಂದೆ ಇಟ್ಟು ಪೂಜೆ ಸಲ್ಲಿಸಿದರು. ಬೇಡಗಂಪಣರ ಹೆಣ್ಣು ಮಕ್ಕಳಿಂದ ಬೆಲ್ಲದ ಆರತಿ ಬೆಳಗಿಸಿ ನಂತರ ಬಿಳಿ ಆನೆ ಉತ್ಸವಮೂರ್ತಿಗೆ ಪೂಜೆ ಸಲ್ಲಿಸಿ ದೇವಾಲಯವನ್ನು ಪ್ರದಕ್ಷಿಣೆ ಹಾಕಲಾಯಿತು. ಮಹಾರಥೋತ್ಸವದ ಮುಂಭಾಗದಲ್ಲಿ ಸಾಲೂರು ಬೃಹನ್ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮಿಗಳು ಮಹಾರಥೋತ್ಸವಕ್ಕೆ ಧಾರ್ಮಿಕವಾಗಿ ಪದ್ಧತಿಯಂತೆ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿದರು. ಬೂದ ಕುಂಬಳಕಾಯಿ ಒಡೆಯುವ ಮೂಲಕ ಮಹಾ ರಥೋತ್ಸವಕ್ಕೆ ಪೂಜೆ ಸಲ್ಲಿಸಿ ದೇವಾಲಯದ ಸುತ್ತಲು ಮಹಾ ರಥೋತ್ಸವ ಪ್ರದಕ್ಷಿಣೆ ಹಾಕುವ ಮೂಲಕ ದೇಗುಲದ ಮುಖ್ಯ ದ್ವಾರದಿಂದ ವಾದ್ಯ ಮೇಳಗಳೊಂದಿಗೆ ಛತ್ರಿಚಾಮರ ನಂದಿ ಧ್ವಜ, ಮಂಗಳ ವಾದ್ಯಗಳೊಂದಿಗೆ ಹುಲಿವಾಹನ ಬಸವನ, ರುದ್ರಾಕ್ಷಿ ವಾಹನವು ಇದೇ ಸಂದರ್ಭದಲ್ಲಿ ನಡೆಯಿತು. ವೀರಗಾಸೆ ಕುಣಿತ ಭಕ್ತಾದಿಗಳ ಗಮನ ಸೆಳೆಯಿತು. ರಥೋತ್ಸವ ವೇಳೆ ತೆರಿಗೆ ಹಣ್ಣುಜವನ ದವಸ ಧಾನ್ಯ ನಾಣ್ಯಗಳನ್ನು ಎಸೆದು ಲಕ್ಷಾಂತರ ಭಕ್ತರು ಮಹಾ ರಥೋತ್ಸವಕ್ಕೆ ಸಾಕ್ಷಿಯಾದರು. ಮಹಾ ರಥೋತ್ಸವದಲ್ಲಿ ಪಾಲ್ಗೊಂಡ ಶಾಸಕ: ಮಹಾ ರಥೋತ್ಸವದಲ್ಲಿ ಶಾಸಕ ಎಂ.ಆರ್. ಮಂಜುನಾಥ್ ಸಾಲೂರು ಬೃಹನ್ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮಿ, ಕೊಳ್ಳೇಗಾಲ ಡಿವೈಎಸ್ಪಿ ಧರ್ಮೇಂದರ್, ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಇ. ರಘು, ಉಪ ಕಾರ್ಯದರ್ಶಿ ಚಂದ್ರಶೇಖರ್ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ರಥೋತ್ಸವ ನಂತರ ಮಾದೇಶ್ವರನಿಗೆ ಪೂಜೆ: ಮಹಾಶಿವರಾತ್ರಿಯ ಮಹಾ ರಥೋತ್ಸವ ನಂತರ ದೇವಾಲಯದಲ್ಲಿ ಮಹದೇಶ್ವರನಿಗೆ ಪೂಜೆ ಸಲ್ಲಿಸಿ, ಮಹದೇಶ್ವರನ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿ, ನಂತರ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.ಭಕ್ತರ ದಂಡು: ಮಲೆ ಮಹದೇಶ್ವರ ಬೆಟ್ಟದಲ್ಲಿ ಕಳೆದ ಐದು ದಿನಗಳಿಂದ ನಡೆಯುತ್ತಿರುವ ಜಾತ್ರಾ ಮಹೋತ್ಸವದ ಪ್ರಯುಕ್ತ ಸೋಮವಾರ ಮಹಾರಥೋತ್ಸವಕ್ಕೆ ರಾಜ್ಯದ ನಾನಾ ಭಾಗಗಳಿಂದ ಹಾಗೂ ತಮಿಳುನಾಡಿನಿಂದಲೂ ಅಪಾರ ಸಂಖ್ಯೆಯ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ಇಷ್ಟಾರ್ಥ ಸಿದ್ಧಿಸುವಂತೆ ಹಣ್ಣು ಜವನ ಎಸೆದು ಉಘೇ ಉಘೇ ಎಂದು ಜೈಕಾರಗಳನ್ನು ಕೂಗಿದರು.ಪೊಲೀಸ್ ಬಂದೋಬಸ್ತ್: ಕೊಳ್ಳೇಗಾಲ ಡಿವೈಎಸ್ಪಿ ನೇತೃತ್ವದಲ್ಲಿ ಮಹಾರಥೋತ್ಸವ ವೇಳೆ ಯಾವುದೇ ಅಹಿತಕರ ಘಟನೆ ಜರುಗದಂತೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಿಂದ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ನಿಯೋಜನೆ ಮಾಡುವ ಮೂಲಕ ರಥೋತ್ಸವ ವೇಳೆ ಮುನ್ನೆಚ್ಚರಿಕೆ ಕ್ರಮವಾಗಿ ರಥ ಚಲಿಸುವ ವೇಳೆಯಲ್ಲಿ ಹೆಚ್ಚಿನ ಭದ್ರತೆ ಕೈಗೊಳ್ಳಲಾಗಿತ್ತು.
ಕಳೆದ ಐದು ದಿನಗಳಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ಮಹಾಶಿವರಾತ್ರಿ ಹಬ್ಬಕ್ಕೆ ರಾಜ್ಯದ ನಾನಾ ಭಾಗಗಳಿಂದ ಆರರಿಂದ ಏಳು ಲಕ್ಷ ಭಕ್ತಾದಿಗಳು ಆಗಮಿಸಿ ದೇವರ ದರ್ಶನ ಪಡೆದಿದ್ದಾರೆ. ಈ ಬಾರಿ ದೇವಾಲಯದ ಹುಂಡಿಯಲ್ಲಿ ಮೂರು ಕೋಟಿ ಸೇರುವ ನಿರೀಕ್ಷೆ ಇದೆ. ಭಕ್ತಾದಿಗಳಿಗೆ ಸಕಲ ಸೌಕರ್ಯಗಳನ್ನು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕ್ರಮ ಕೈಗೊಳ್ಳುವ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಶೌಚಾಲಯ ವ್ಯವಸ್ಥೆ ಸ್ವಚ್ಛತೆಗೆ ಆದ್ಯತೆ ನೀಡಲಾಗಿದ್ದು, ಹೆಚ್ಚಿನ ಸಿಬ್ಬಂದಿಯನ್ನು ನಿಯೋಜನೆಗೊಳಿಸುವ ಮೂಲಕ ಹಿರಿಯ ನಾಗರಿಕರಿಗೂ ವ್ಯವಸ್ಥಿತವಾಗಿ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಕೋಟ್.....ಶ್ರೀ ಕ್ಷೇತ್ರ ಪ್ರಾಧಿಕಾರದ ಅಧ್ಯಕ್ಷ, ಸಿಎಂ, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಡಳಿತ, ಪೊಲೀಸ್ ಇಲಾಖೆ ಪ್ರಾಧಿಕಾರದ ಅಧಿಕಾರಿ ಸಿಬ್ಬಂದಿ, ಬೇಡಗಂಪಣ ಸರದಿ ಅರ್ಚಕರು, ಮಾಧ್ಯಮದವರ ಸಹಕಾರದಿಂದ ಮಹಾಶಿವರಾತ್ರಿಯ ಜಾತ್ರಾ ಮಹೋತ್ಸವ ಯಶಸ್ವಿಯಾಗಿದೆ. ಶ್ರೀ ಕ್ಷೇತ್ರಕ್ಕೆ ಬರುವ ಭಕ್ತಾದಿಗಳು ಕ್ಷೇತ್ರದಲ್ಲಿ ಪ್ಲಾಸ್ಟಿಕ್ ಮುಕ್ತಗೊಳಿಸಿರುವುದರಿಂದ ಸಹಕಾರ ನೀಡುವುದರ ಮೂಲಕ ಸಹಕರಿಸಬೇಕು.
ಎ.ಈ. ರಘು, ಕಾರ್ಯದರ್ಶಿ, ಶ್ರೀ ಮಾದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ, ಮಲೆಮಹದೇಶ್ವರ ಬೆಟ್ಟ.