ವಿಜೃಂಭಣೆಯ ಉಜ್ಜಯಿನಿ ಮರುಳಸಿದ್ದೇಶ್ವರ ರಥೋತ್ಸವ

| Published : May 13 2024, 12:01 AM IST / Updated: May 13 2024, 12:02 AM IST

ವಿಜೃಂಭಣೆಯ ಉಜ್ಜಯಿನಿ ಮರುಳಸಿದ್ದೇಶ್ವರ ರಥೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಪಂಚಪೀಠಗಳಲ್ಲಿ ಒಂದಾದ ಉಜ್ಜಯಿನಿ ಸದ್ಧರ್ಮ ಪೀಠದ ಮರುಳಸಿದ್ದೇಶ್ವರ ಸ್ವಾಮಿಯ ಮಹಾರಥೋತ್ಸವವು ಈ ಸಾಲಿನಲ್ಲಿ ಉಳಿದೆಲ್ಲ ರಥೋತ್ವವಗಳ ಪೈಕಿ ಕೊನೆಯ ರಥೋತ್ಸವವಾಗಿದೆ.

ಕೊಟ್ಟೂರು: ಲಕ್ಷಾಂತರ ಭಕ್ತರ ಆರಾಧ್ಯದೈವ ಉಜ್ಜಯಿನಿ ಸದ್ಧರ್ಮ ಪೀಠದ ಒಡೆಯ ಶ್ರೀಗುರು ಮರುಳಸಿದ್ದೇಶ್ವರ ಸ್ವಾಮಿಯ ಮಹಾ ರಥೋತ್ಸವವು ಭಾನುವಾರ ಸಂಜೆ ವಿಜೃಂಭಣೆಯಿಂದ ೨.೫೦ ಲಕ್ಷಕ್ಕೂ ಅಧಿಕ ಭಕ್ತ ಸಾಗರದ ಮಧ್ಯೆ ನೆರವೇರಿತು.ಪಂಚಪೀಠಗಳಲ್ಲಿ ಒಂದಾದ ಉಜ್ಜಯಿನಿ ಸದ್ಧರ್ಮ ಪೀಠದ ಮರುಳಸಿದ್ದೇಶ್ವರ ಸ್ವಾಮಿಯ ಮಹಾರಥೋತ್ಸವವು ಈ ಸಾಲಿನಲ್ಲಿ ಉಳಿದೆಲ್ಲ ರಥೋತ್ವವಗಳ ಪೈಕಿ ಕೊನೆಯ ರಥೋತ್ಸವವಾಗಿದೆ. ಪುನರ್ವಸು ನಕ್ಷತ್ರದಲ್ಲಿ ಈ ಪ್ರಕ್ರಿಯೆ ಜರುಗಿತು. ಇದಕ್ಕೂ ಮೊದಲು ಶ್ರೀಗುರು ಮರುಳಸಿದ್ದೇಶ್ವರ ಸ್ವಾಮಿಗೆ ವಿಶೇಷ ಪೂಜಾ ಕೈಕರ್ಯಗಳು ನೆರವೇರಿದ ನಂತರ ಸಂಜೆ ೫:೩೦ ರ ವೇಳೆಗೆ ಸ್ವಾಮಿಯ ಉತ್ಸವ ಮೂರ್ತಿಯನ್ನು ಪಲ್ಲಕ್ಕಿ ಮಹೋತ್ಸವದೊಂದಿಗೆ ಸದ್ಧರ್ಮ ಪೀಠದ ಬಿರುದಾವಳಿಗಳೊಂದಿಗೆ ಹೊರತರಲಾಯಿತು. ನಂತರ ಉತ್ಸವ ಮೂರ್ತಿಯನ್ನು ರಥದೊಳಗೆ ಕುಳ್ಳಿರಿಸಲಾಯಿತು. ೧೦೦೮ ಜಗದ್ಗುರು ಸಿದ್ದಲಿಂಗರಾಜ ದೇಶಿ ಕೇಂದ್ರ ಶಿವಾಚಾರ್ಯ ರಥವೇರಿ ಆಶೀರ್ವದಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.

ಪಟಾಕಿ ಸವಾಲು:

ಇದಕ್ಕೂ ಮೊದಲು ಸ್ವಾಮಿಯ ರಥದ ಪಟಾಕಿ ಸವಾಲು ಪ್ರಕ್ರಿಯೆ ನಡೆಯಿತು. ಪಟಾಕಿಯನ್ನು ₹೨.೦೧ ಲಕ್ಷಕ್ಕೆ ಚಿತ್ರದುರ್ಗ ಜಿಲ್ಲೆ ಸಿದ್ದಾಪುರ ಗ್ರಾಮದ ಪ್ರವೀಣ ಕೂಗಿ ತನ್ನದಾಗಿಸಿಕೊಂಡು ಶ್ರೀಸ್ವಾಮಿಗೆ ನಮಿಸಿದರು.

ಶ್ರೀ ಸ್ವಾಮಿಯ ಹೂವಿನ ಹಾರದ ಹರಾಜನ್ನು ₹೮೦ ಸಾವಿರಕ್ಕೆ ಶ್ರೀಶೈಲ ಕೊಟ್ರೇಶ್ ಎಂಬುವರು ಪಡೆದುಕೊಂಡರು.

ನಂತರ ಸ್ವಾಮಿಯ ರಥೋತ್ಸವಕ್ಕೆ ಚಾಲನೆ ದೊರಕುತ್ತಿದ್ದಂತೆ ನೆರೆದಿದ್ದ ಭಕ್ತರು ಬಾಳೆಹಣ್ಣು, ಸೂರುಬೆಲ್ಲ, ದವನಗಳನ್ನು ರಾಶಿಯೋಪಾದಿಯಲ್ಲಿ ತೋರಿ ನಮಿಸಿ ಭಕ್ತಿ ಸಮರ್ಪಸಿದರು. ಭಕ್ತರು ರಥವನ್ನು ಬನ್ನಿಮರದ ಬಳಿಯತ್ತಾ ಎಳೆದೊಯ್ಯುವತ್ತ ತೊಡಗಿಸಿಕೊಂಡರು. ಪಾದಗಟ್ಟೆ ಮೂಲಕ ಗಂಭೀರ ನಡೆಯೊಂದಿಗೆ ಸಾಗಿದ ರಥವನ್ನು ಭಕ್ತರು ಎಳೆದೊಯ್ಯಲು ಮುಗಿಬಿದ್ದರು.

ಸಮಾಳದ ಆರ್ಭಟ, ನಂದಿಕೋಲುಗಳ ಕುಣಿತ ಮತ್ತಿತರ ವಾದ್ಯಗಳ ನಿನಾದದೊಂದಿಗೆ ರಥೋತ್ಸವ ಸಾಗಿ ಮುಖ್ಯ ಬಜಾರ ಮುಖಾಂತರ ಗ್ರಾಪಂ ಕಾರ್ಯಾಲಯ ಮುಂಭಾಗದ ಸ್ವಸ್ಥಾನದಲ್ಲಿ ಸಂಜೆ ೭.೩೦ರ ಸುಮಾರಿಗೆ ನೆಲೆ ನಿಂತಿತು.

ಸುಮಾರು ೨.೫೦ ಲಕ್ಷಕ್ಕೂ ಅಧಿಕ ಭಕ್ತಸ್ತೋಮ ಪಾಲ್ಗೊಂಡು ರಥೋತ್ಸವನ್ನು ಕಣ್ತುಂಬಿಕೊಂಡು ಸಂಭ್ರಮಿಸಿದರು. ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮೀಜಿ ಪಾದಗಟ್ಟೆಯಲ್ಲಿ ಆಸೀನರಾಗಿದ್ದರು. ನೂರಾರು ಸಂಖ್ಯೆಯ ವಿವಿಧ ಮಠಾಧೀಶರುಗಳು ರಥೋತ್ಸವಕ್ಕೆ ಸಾಕ್ಷಿಯಾಗಿದರು.