ಸಾರಾಂಶ
ಕಾರಟಗಿ: ತಾಲೂಕಿನ ಮರ್ಲಾನಹಳ್ಳಿಯಲ್ಲಿ ಮಂಗಳವಾರ ನಸುಕಿನ ಜಾವ ಎಕ್ಸಿಸ್ ಬ್ಯಾಂಕ್ ಶಾಖೆಯ ಭಾರಿ ಕಳ್ಳತನ ಯತ್ನ ವಿಫಲವಾಗಿದೆ.
ಗಂಗಾವತಿ-ಸಿಂಧನೂರು ರಾಜ್ಯ ಹೆದ್ದಾರಿಯಲ್ಲಿ ಇರುವ ಗ್ರಾಮದ ಬ್ಯಾಂಕ್ ಶಾಖೆಯಲ್ಲಿ ಮಂಗಳವಾರ ನಸುಕಿನ ಜಾವ ಈ ಪ್ರಯತ್ನ ನಡೆದಿದ್ದು, ಕಟ್ಟಡದ ಮಾಲಿಕರ ಸಂಬಂಧಿಕರೊಬ್ಬರನ್ನು ನೋಡಿದ ಕಳ್ಳರು ಸ್ಥಳದಿಂದ ಎಲ್ಲವನ್ನೂ ಬಿಟ್ಟು ಪರಾರಿಯಾಗಿದ್ದಾರೆ. ಈ ಘಟನೆಯಲ್ಲಿ ಬ್ಯಾಂಕಿನ ಕಟ್ಟಡ ಮತ್ತು ಬ್ಯಾಂಕಿಗೆ ಯಾವುದೇ ರೀತಿಯ ಹಾನಿಯಾಗಿಲ್ಲವೆಂದು ಶಾಖೆಯ ವ್ಯವಸ್ಥಾಪಕರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.ಬ್ಯಾಂಕ್ ಕಳ್ಳತನಕ್ಕಾಗಿ ಹಿಂಬದಿಯ ರಸ್ತೆಯ ಕಾಂಪೌಂಡ್ ಗೋಡೆ ಹತ್ತಿ ಕಟ್ಟಡಕ್ಕೆ ಕನ್ನ ಹಾಕುತ್ತಿದ್ದರು. ಅದಕ್ಕಾಗಿ ಪಕ್ಕದ ಮನೆಯಿಂದ ವೈರ್ ಎಳೆದು ವಿದ್ಯುತ್ ಸಂಪರ್ಕ ತೆಗೆದುಕೊಂಡಿದ್ದರು. ಕಳ್ಳರು ವಿವಿಧ ಯಂತ್ರ ಮತ್ತು ಸಲಕರಣೆ ಬಳಸಿ ಬ್ಯಾಂಕ್ ಗೋಡೆ ಕೊರೆಯುತ್ತಿದ್ದ ಶಬ್ದ ಕೇಳಿದ ಕಟ್ಟಡದ ಮಾಲೀಕರ ಸಂಬಂಧಿಯ ಮನೆಯಲ್ಲಿ ಬಾಡಿಗೆ ಇರುವ ಮದನ್ ಎಚ್ಚರಗೊಂಡ ಏನೋ ಶಬ್ದ ಬರುತ್ತಿರುವುದನ್ನು ಅರಿತು ಹೊರ ಬಂದಿದ್ದಾರೆ.ಇವರನ್ನು ನೋಡಿದ ತಕ್ಷಣವೇ ಕಳ್ಳರ ತಂಡ ಅಲ್ಲಿಂದ ಪರಾರಿಯಾಗಿದೆ ಎನ್ನಲಾಗಿದೆ.
ಬ್ಯಾಂಕ್ ಕಟ್ಟಡದ ಮಾಲೀಕ ಶ್ರೀಹರಿ ಎನ್ನುವವರು ಶಾಖೆ ವ್ಯವಸ್ಥಾಪಕರಿಗೆ ಬೆಳಗಿನ ನಾವವೇ ದೂರವಾಣಿ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಬ್ಯಾಂಕ್ ವ್ಯವಸ್ಥಾಪಕರು ಶಾಖೆಗೆ ಬಂದು ವೀಕ್ಷಿಸಿದಾಗ ಪಲಾಯನದ ವೇಳೆ ಕಳ್ಳರು ಕೃತ್ಯಕ್ಕೆ ತಂದಿದ್ದ ಕಟಿಂಗ್ ಮಿಷನ್, ಕಟಿಂಗ್ ಪ್ಲೇಯರ್, ಕರೆಂಟ್ ವೈಯರ್, ಜಿಯೋ ಡೊಂಗಲ್ ಹಾಗೂ ಕಪ್ಪು ಬಣ್ಣದ ಬ್ಯಾಗ್ ಸೇರಿ ಇತರೆ ವಸ್ತುಗಳನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕೆಲ ವಸ್ತುಗಳನ್ನು ಕಳ್ಳರು ಚಿತ್ರದುರ್ಗ ಜಿಲ್ಲೆಯಲಿಂದ ಖರೀದಿಸಿದ ಬಿಲ್‌ಗಳು ಬ್ಯಾಗ್‌ನಲ್ಲಿ ದೊರೆತಿವೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.ಈ ಕುರಿತು ಎಕ್ಸಿಸ್ ಬ್ಯಾಂಕ್ ವ್ಯವಸ್ಥಾಪಕ ಪ್ರಕಾಶ ವಾಲಿ ಮಂಗಳವಾರ ರಾತ್ರಿ ಕಾರಟಗಿ ಪೊಲೀಸ್ ಠಾಣೆಯಲ್ಲಿ ಪ್ರಕಣ ದಾಖಲಿಸಿದ್ದಾರೆ. ಸ್ಥಳಕ್ಕೆ ಬೆರಳ್ಳಚ್ಚು ತಜ್ಞರು, ಶ್ವಾನ ದಳ ಆಗಮಿಸಿದ್ದು, ಕಳ್ಳರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ ಎಂದು ಪಿಐ ಸಿದ್ರಾಮಯ್ಯ ಹಿರೇಮಠ ತಿಳಿಸಿದ್ದಾರೆ. ಕಾರಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.