ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ದಸರಾ ಮಹೋತ್ಸವದ ಆಕರ್ಷಣೆಯನ್ನು ಹೆಚ್ಚಿಸಿ, ಅಸಂಖ್ಯಾತ ಜನರ ಕಣ್ಮನಗಳನ್ನು ಸೆಳೆದಿರುವ ದಸರಾ ವಿದ್ಯುತ್ ದೀಪಾಲಂಕಾರಕ್ಕೆ ಭಾನುವಾರ ಅದ್ಧೂರಿ ತೆರೆಬಿದ್ದಿತು.ಈ ಬಾರಿ ದಸರಾ ಆರಂಭಗೊಂಡ ಸೆ.22 ರಿಂದ ಅ.12 ರವರೆಗೆ ಒಟ್ಟು 21 ದಿನಗಳವರೆಗೂ ಮೈಸೂರು ಮಾತ್ರವಲ್ಲದೇ ದೇಶ- ವಿದೇಶಗಳಿಂದ ಬಂದಿದ್ದ ಲಕ್ಷಾಂತರ ಪ್ರವಾಸಿಗರನ್ನು ದೀಪಾಲಂಕಾರ ಆಕರ್ಷಿಸಿತ್ತು. ಪ್ರತಿ ಬಾರಿಯಂತೆ ಈ ವರ್ಷವೂ ದೀಪಾಲಂಕಾರದ ನಿರ್ವಹಣೆ ಜವಾಬ್ದಾರಿ ಹೊತ್ತಿದ್ದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಗಮಿತ(ಸೆಸ್ಕ್) ಹಿಂದಿನ ವರ್ಷಕ್ಕಿಂತಲ್ಲೂ ಅತ್ಯಂತ ಆಕರ್ಷಣೀಯವಾಗಿ ದೀಪಾಲಂಕಾರವನ್ನು ಮಾಡುವಲ್ಲಿ ಯಶಸ್ವಿಯಾಗಿತ್ತು.
136 ಕಿ.ಮೀ ದೀಪಾಲಂಕಾರಈ ಬಾರಿ ನಗರದ 136 ಕಿ.ಮೀ ವ್ಯಾಪ್ತಿಯ ರಸ್ತೆಗಳು ಹಾಗೂ 118 ವೃತ್ತಗಳಲ್ಲಿ ದೀಪಾಲಂಕಾರ ಮಾಡಲಾಗಿತ್ತು. ನಗರದ ಪ್ರಮುಖ ಕಡೆಗಳಲ್ಲಿ ಎಲ್ಇಡಿ ಬಲ್ಬ್ ಗಳಿಂದ ನಿರ್ಮಿಸಲಾದ 80 ವಿವಿಧ ಪ್ರತಿಕೃತಿಗಳು ದೀಪಾಲಂಕಾರದ ಅಂದವನ್ನು ಹೆಚ್ಚು ಮಾಡುವುದರ ಜತೆಗೆ ನೋಡುಗರನ್ನು ಆಕರ್ಷಿಸಿತ್ತು. ಸೆ.22 ರಂದು ನಗರದ ಸಯ್ಯಾಜಿರಾವ್ ರಸ್ತೆಯಲ್ಲಿರುವ ಹಸಿರು ಚಪ್ಪರದ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ದೀಪಾಲಂಕಾರಕ್ಕೆ ವಿಧ್ಯುಕ್ತ ಚಾಲನೆಯನ್ನು ನೀಡಿದ್ದರು.
ದೀಪಾಲಂಕಾರದ ಆಕರ್ಷಣೆ ಹೆಚ್ಚಿಸುವ ಸಲುವಾಗಿ ಸೆಸ್ಕ್ ವತಿಯಿಂದ ಈ ಬಾರಿ ಸಾಕಷ್ಟು ಹೊಸತನದ ಪ್ರಯತ್ನಗಳನ್ನು ಮಾಡಲಾಗಿತ್ತು. ಅದರಂತೆ ಈ ಬಾರಿ ಕೊಲ್ಕತ್ತಾ ಮಾದರಿ ಲೈಟಿಂಗ್ ಗಳನ್ನು ನಗರದ ಹಲವು ಕಡೆಗಳಲ್ಲಿ ಅಳವಡಿಸಲಾಗಿತ್ತು. ಇದರಿಂದಾಗಿ ನಗರದ ಹಲವು ಕಡೆಗಳಲ್ಲಿ ಬಣ್ಣ ಬಣ್ಣದ ದೀಪಗಳಿಂದ ಅಲಂಕೃತಗೊಂಡಿದ್ದ ರಸ್ತೆ ಹಾಗೂ ವೃತ್ತಗಳು ದಸರಾ ವಿದ್ಯುತ್ ದೀಪಾಲಂಕಾರದ ಮೆರಗು ಹೆಚ್ಚಿಸಿತ್ತು.ದಸರಾ ದೀಪಾಲಂಕಾರದ ಒಂದು ಭಾಗವಾಗಿದ್ದ ಡ್ರೋನ್ ಪ್ರದರ್ಶನದ ಮೂಲಕ ಸೆಸ್ಕ್ ಈ ಬಾರಿ ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸಿತ್ತು. ನಾಲ್ಕು ದಿನಗಳು ನಡೆದ ಡ್ರೋನ್ ಪ್ರದರ್ಶನದಲ್ಲಿ ಮೂಡಿದ ಆಕರ್ಷಕ ಕಲಾಕೃತಿಗಳು ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆದಿತ್ತು.
ದಸರಾ ವಿದ್ಯುತ್ ದೀಪಾಲಂಕಾರದಲ್ಲಿ ಸೆಸ್ಕ್ ವತಿಯಿಂದ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಲಾಗಿತ್ತು. ದೀಪಾಲಂಕಾರದ ಕಂಬಗಳನ್ನು ಮುಟ್ಟದೆ, ಅಂತರ ಕಾಯ್ದುಕೊಳ್ಳುವುದು, ಕಂಬಗಳ ಹತ್ತಿರ ನಿಂತು ಫೋಟೋ/ ವಿಡಿಯೋ ಶೂಟ್ ಮಾಡುವುದನ್ನು ತಪ್ಪಿಸುವುದು ಸೇರಿದಂತೆ ಹಲವು ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವಂತೆ ಸಾರ್ವಜನಿಕರಿಗೆ ಸೂಚನೆ ನೀಡಲಾಗಿತ್ತು.ದೀಪಾಲಂಕಾರ ವೀಕ್ಷಿಸಿದ ಸಿಎಂ
ಸ್ಥಳೀಯರು, ಪ್ರವಾಸಿಗರಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಈ ಬಾರಿಯ ದಸರಾ ದೀಪಾಲಂಕಾರವನ್ನು ವೀಕ್ಷಿಸಿದರು. ಅಂಬಾರಿ ಬಸ್ಸಿನ ಮೂಲಕ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ ಮುಖ್ಯಮಂತ್ರಿಗಳು ವಿದ್ಯುತ್ ದೀಪಾಲಂಕಾರವನ್ನು ಕಣ್ತುಂಬಿಕೊಂಡರು. ಆ ಮೂಲಕವಾಗಿ ಸೆಸ್ಕ್ ಪ್ರಯತ್ನಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು.----
ಬಾಕ್ಸ್...ಮುಖ್ಯ ಕಾರ್ಯದರ್ಶಿಗಳ ಮೆಚ್ಚುಗೆ
ದಸರಾ ದೀಪಾಲಂಕಾರಕ್ಕೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದಸರಾ ಮಹೋತ್ಸವವನ್ನು ಯಾವುದೇ ಆಡಚಣೆಯಿಲ್ಲದೆ ನಡೆಸುವಲ್ಲಿ ಮೈಸೂರು ಜಿಲ್ಲಾಡಳಿತ ಒಗ್ಗೂಡಿದ ಶಕ್ತಿ, ನಿಷ್ಠೆ ಮತ್ತು ವೃತ್ತಿಪರತೆಯನ್ನು ಮತ್ತೊಮ್ಮೆ ಪ್ರಪಂಚದ ಮುಂದೆ ಪ್ರದರ್ಶಿಸಿದೆ. ದಸರಾ ಸಂದರ್ಭದಲ್ಲಿ ನಗರದಾದ್ಯಂತ ಅದ್ಭುತ ಬೆಳಕು ಪುದರ್ಶನವನ್ನು ನೀಡುವುದರ 3000 ಡ್ರೋನ್ ಗಳ ಪ್ರದರ್ಶನವನ್ನು ಆಯೋಜಿಸಿದ್ದ ಅದ್ಭುತವಾದ ಕೊಡುಗೆಯಾಗಿದೆ. ತಾಂತ್ರಿಕತೆಯ ಜತೆಗೆ ಸಂಪ್ರದಾಯವನ್ನು ಸುಂದರವಾಗಿ ಮೇಲ್ವಿಸಿದ ಈ ಸಿಂಕ್ರೊನೈಜ್ಡ್ ಡ್ರೋನ್ ಶೋಗೆ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಲಭಿಸಿರುವುದು ಅತ್ಯಂತ ಗಮನಾರ್ಹ ಸಾಧನೆಯಾಗಿದೆ. ದಸರಾ ಯಶಸ್ಸಿಗೆ ಕಾರಣರಾದ ನಿಮ್ಮ ಕರ್ತವ್ಯ ನಿಷ್ಠೆಗೆ ಅಭಿನಂದನೆಗಳನ್ನು ಸಲ್ಲಿಸಿ ಡಾ. ಶಾಲಿನಿ ರಜನೀಶ್ ಅವರು ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ. ಮುನಿಗೋಪಾಲ್ ರಾಜು ಅವರಿಗೆ ಬರೆದಿರುವ ಪ್ರಶಂಸನಾ ಪತ್ರದಲ್ಲಿ ತಿಳಿಸಿದ್ದಾರೆ.