ಸಾರಾಂಶ
2025ರ ರಾಜ್ಯಮಟ್ಟದ ಮಕ್ಕಳ ಬೈಕ್ ರ್‍ಯಾಲಿಯನ್ನು ಮಂಗಳೂರು ಪಟ್ಟಣದಲ್ಲಿ ಏರ್ಪಡಿಸಲಾಗಿತ್ತು. ಹೊಸಹಳ್ಳಿಯ ಸೂರ್‍ಯ ಯಾದವ್ ರ್ಯಾಲಿಯಲ್ಲಿ ಪ್ರಥಮ ಸ್ಥಾನ ಪಡೆದು ತಾಲೂಕಿನ ಜನ ಹೆಮ್ಮೆ ಪಡುವಂತೆ ಮಾಡಿದ್ದಾನೆ.
ಕನ್ನಡಪ್ರಭ ವಾರ್ತೆ ಕುದೂರು
ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತೆ ಮಕ್ಕಳ ಬೈಕ್ ರೇಸಿನಲ್ಲಿ ಐದೂವರೆ ವರ್ಷದ ಹುಡುಗನೊಬ್ಬ ಭಾಗವಹಿಸಿ ಮೊದಲ ಸ್ಥಾನ ಪಡೆದು ನೋಡುಗರನ್ನು ಹುಬ್ಬೇರಿಸುವಂತೆ ಮಾಡಿದ್ದಾನೆ.ಹೋಬಳಿಯ ಹೊಸಹಳ್ಳಿ ಗ್ರಾಮದ ಸೂರ್ಯಯಾದವ್ ವಿದ್ಯಾಸ್ಫೂರ್ತಿ ಶಾಲೆಯಲ್ಲಿ ಯುಕೆಜಿ ಓದುತ್ತಿದ್ದಾನೆ. ತಂದೆ ವಿನಯ್ ಶ್ರೀಗಿರಿಪುರ ಗ್ರಾಪಂ ಸದಸ್ಯರು.
ಸೂರ್ಯಯಾದವ್ ಸಾಹಸಗಾಥೆಗೆ ಊರಿಗೇ ಊರೇ ಸಂಭ್ರಮಿಸುತ್ತಿದೆ. ಮಗನಿಗೆ ಬೈಕ್ ಬಗೆಗಿನ ಆಸಕ್ತಿಯನ್ನು ಗುರುತಿಸಿದ ವಿನಯ್, ಬೈಕ್ ರ್‍ಯಾಲಿಗಳ ಖ್ಯಾತ ತರಬೇತುದಾರ ಅರುಣ್ ಬಳಿ ಬೈಕ್ ತರಬೇತಿ ಕೊಡಿಸಿದ್ದಾರೆ. ನಿತ್ಯವೂ ಸಂಜೆ ಶಾಲೆಯಿಂದ ಬಂದ ಮೇಲೆ ಎರಡು ಗಂಟೆ ತರಬೇತಿ ಮುಗಿಸಿ ಓದಲು ಕೂರುತ್ತಾನೆ ಸೂರ್ಯಯಾದವ್.2025ರ ರಾಜ್ಯಮಟ್ಟದ ಮಕ್ಕಳ ಬೈಕ್ ರ್‍ಯಾಲಿಯನ್ನು ಮಂಗಳೂರು ಪಟ್ಟಣದಲ್ಲಿ ಏರ್ಪಡಿಸಲಾಗಿತ್ತು. ಹೊಸಹಳ್ಳಿಯ ಸೂರ್‍ಯ ಯಾದವ್ ರ್ಯಾಲಿಯಲ್ಲಿ ಪ್ರಥಮ ಸ್ಥಾನ ಪಡೆದು ತಾಲೂಕಿನ ಜನ ಹೆಮ್ಮೆ ಪಡುವಂತೆ ಮಾಡಿದ್ದಾನೆ.
ಮಗನ ತರಬೇತಿಗೆ ತಂದೆ ವಿನಯ್ ತಮ್ಮ ಹೊಲದಲ್ಲೇ ಟ್ರಾಕ್ ನಿರ್ಮಾಣ ಮಾಡಿಕೊಟ್ಟಿದ್ದಾರೆ. ನಿತ್ಯವೂ ಮಗನ ಜೊತೆಗೆ ನಿಂತು ಅಭ್ಯಾಸ ಮಾಡಿಸುತ್ತಾರೆ. ಮಗ ಅಭ್ಯಾಸ ಮಾಡುವಾಗ ಸಾಕಷ್ಟು ಬಾರಿ ಎದ್ದು ಬಿದ್ದು ಛಲವನ್ನು ಬಿಡದೆ ಆಸಕ್ತಿಯಿಂದ ಅಭ್ಯಾಸ ಮಾಡಿದ್ದರ ಫಲ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಬರಲು ಸಾಧ್ಯವಾಯಿತು. ಈಗ ರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ತರಬೇತಿ ಪಡೆಯುತ್ತಿದ್ದಾನೆ ಎಂದು ತಿಳಿಸಿದ್ದಾರೆ.-------
‘ಹೊಸಹಳ್ಳಿ ಗ್ರಾಮದ ಸೂರ್ಯಯಾದವ್ ಎಂಬ ಹುಡುಗನ ಸಾಧನೆ ಕೇಳಿ ನಾನು ಅಕ್ಷರಶಃ ಆಶ್ಚರ್‍ಯ ಪಟ್ಟೆ. ನಮ್ಮ ತಾಲೂಕಿಗೆ ಇಂತಹ ಸಾಧನೆ ಅಪರೂಪ. ಕೇವಲ 6 ವರ್ಷದ ಹುಡುಗ ಬೈಕ್ ಓಡಿಸುವುದೆಂದರೆ ಮತ್ತು ಸಿನೆಮಾ ಸ್ಟಂಟ್ ಮಾಸ್ಟರ್‌ಗಳ ರೀತಿಯಲ್ಲಿ ಅದನ್ನು ಎಗರಿಸಿಕೊಂಡು ರ್‍ಯಾಲಿಯಲ್ಲಿ ಭಾಗವಹಿಸಿದ ವೀಡಿಯೋ ನೋಡಿ ಬಹಳ ಆಶ್ಚರ್‍ಯವಾಯಿತು. ಈ ಬಾರಿಯ ಕನ್ನಡ ರಾಜ್ಯೋತ್ಸವದಲ್ಲಿ ಆತನನ್ನು ವಿಶೇಷವಾಗಿ ಅಭಿನಂದಿಸುತ್ತೇವೆ. ಸೂರ್ಯ ನಮ್ಮ ತಾಲೂಕಿನ ಹೆಮ್ಮೆ’.ಎಚ್.ಸಿ.ಬಾಲಕೃಷ್ಣ. ಶಾಸಕರು, ಮಾಗಡಿ