ಸಾರಾಂಶ
ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಮನುಷ್ಯನ ಅಂಗಾಂಗಗಳಲ್ಲಿ ಕಣ್ಣು ಅತ್ಯಂತ ಸೂಕ್ಷ್ಮ ಹಾಗೂ ಮಹತ್ವದ ಅಂಗವಾಗಿದ್ದು, ಅದರ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ಮಾಡಬೇಕು ಎಂದು ನಂದಾದೀಪ ನೇತ್ರಾಲಯದ ಕಾರ್ಯನಿರ್ವಾಹಕ ಆನಂದ ತುಪ್ಪದ ಹೇಳಿದರು.ಪಟ್ಟಣದ ಸಾಂಗ್ಲಿಯ ಸುಪ್ರಸಿದ್ಧ ಡಾ.ಪಟವರ್ಧನ್ ಅವರ ನಂದಾದೀಪ ನೇತ್ರಾಲಯ ಹಾಗೂ ಕರ್ನಾಟಕ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಸಂಘದ ಬೈಲಹೊಂಗಲ ತಾಲೂಕು ಘಟಕದ ಆಶ್ರಯದಲ್ಲಿ ಹಿರಿಯ ನಾಗರಿಕರಿಗಾಗಿ ಪ್ರಾಥಮಿಕ ನೇತ್ರ ಉಚಿತ ತಪಾಸಣೆ ಶಿಬಿರದಲ್ಲಿ ಮಾತನಾಡಿದ ಅವರು, 55 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲ ಹಿರಿಯ ನಾಗರಿಕರಿಗೆ ಉಚಿತ ಪ್ರಾಥಮಿಕ ನೇತ್ರ ತಪಾಸಣೆ ಫೆ.1 ರಿಂದ ಮಾ.31 ರವರೆಗೆ ಪಟ್ಟಣದ ನಂದಾದೀಪ ನೇತ್ರಾಲಯದಲ್ಲಿ ಲಭ್ಯವಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.ನೌಕರ ಸಂಘದ ಅಧ್ಯಕ್ಷ ಬಿ.ಎಸ್.ತೆಗೂರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ವಯೋವೃದ್ಧ ವಯಸ್ಸಿನ ತಂದೆ-ತಾಯಿಯ ಆರೋಗ್ಯ ರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕು. ವಯಸ್ಸಾಗುತ್ತಿದ್ದಂತೆ ಕಣ್ಣಿನ ದೃಷ್ಟಿಗೆ ಹೆಚ್ಚಿನ ಕಾಳಜಿವಹಿಸಬೇಕು. ಈ ನಿಟ್ಟಿನಲ್ಲಿ ನಿವೃತ್ತ ನೌಕರರ ಸಂಘದ ಆಶ್ರಯದಲ್ಲಿ ಕಣ್ಣು ತಪಾಸಣೆ ಜರುಗಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.ಸಂಘದ ಉಪಾಧ್ಯಕ್ಷ, ಎಸ್.ಎಂ.ಪಟ್ಟಿಹಾಳ, ಪ್ರಧಾನ ಕಾರ್ಯದರ್ಶಿ ಎಚ್.ಬಿ.ಸುಂಕದ, ನೇತ್ರತಜ್ಞರಾದ ಡಾ.ಜ್ಯೋತ್ಸ್ನಾಪಾಟೀಲ, ನಿವೃತ್ತ ನೌಕರರ ಸಂಘದ ಸದಸ್ಯ ಡಿ.ಎಂ.ಕುಲಕರ್ಣಿ, ಶಿವಶರಣ ಬೆಟ್ಟದ, ಸಾಗರ ಬಡಿಗೇರ, ಚನಬಸು, ಮಲ್ಲಿಕಾರ್ಜುನ, ವಿದ್ಯಾ, ಐಶ್ವಯ್ಯ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.
55 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲ ಹಿರಿಯ ನಾಗರಿಕರಿಗೆ ಉಚಿತ ಪ್ರಾಥಮಿಕ ನೇತ್ರ ತಪಾಸಣೆ ಫೆ.1 ರಿಂದ ಮಾ.31 ರವರೆಗೆ ಪಟ್ಟಣದ ನಂದಾದೀಪ ನೇತ್ರಾಲಯದಲ್ಲಿ ಲಭ್ಯವಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು.
-ಆನಂದ ತುಪ್ಪದ, ನಂದಾದೀಪ ನೇತ್ರಾಲಯದ ಕಾರ್ಯನಿರ್ವಾಹಕರು.