ಮತ ಬ್ಯಾಂಕ್ ಮೇಲೆ ಕಣ್ಣು; ಶ್ರದ್ಧಾ ಕೇಂದ್ರಗಳಿಗೆ ಶರಣು

| Published : Mar 28 2024, 12:53 AM IST

ಮತ ಬ್ಯಾಂಕ್ ಮೇಲೆ ಕಣ್ಣು; ಶ್ರದ್ಧಾ ಕೇಂದ್ರಗಳಿಗೆ ಶರಣು
Share this Article
  • FB
  • TW
  • Linkdin
  • Email

ಸಾರಾಂಶ

ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಚುನಾವಣೆ ಪ್ರಚಾರ ಕ್ಷೇತ್ರದ ಮಠ, ಮಂದಿರದಂತಹ ಶ್ರದ್ಧಾ ಕೇಂದ್ರಗಳ ಸುತ್ತ ಗಿರಕಿ ಹೊಡೆಯತೊಡಗಿದೆ.

ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಚುನಾವಣೆ ಪ್ರಚಾರ ಕ್ಷೇತ್ರದ ಮಠ, ಮಂದಿರದಂತಹ ಶ್ರದ್ಧಾ ಕೇಂದ್ರಗಳ ಸುತ್ತ ಗಿರಕಿ ಹೊಡೆಯತೊಡಗಿದೆ.

ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಳ್ಳುತ್ತಿದ್ದಂತೆ ಬಿಡುವಿಲ್ಲದ ಬಿಡುವಿನಲ್ಲಿಯೂ ಪ್ರಮುಖ ರಾಜಕೀಯ ಪಕ್ಷಗಳ ಸ್ಪರ್ಧಾಕಾಂಕ್ಷಿಗಳು ಮತದಾರರನ್ನು ಓಲೈಸಿಕೊಳ್ಳಲು ಮಠ, ಮಂದಿರ, ದರ್ಗಾ ಹಾಗೂ ಚರ್ಚ್ ಗಳಿಗೆ ಭೇಟಿ ನೀಡಿ ಆಶೀರ್ವಾದ ಪಡೆಯಲಾರಂಭಿಸಿದ್ದಾರೆ.

ಚುನಾವಣೆ ಪ್ರಚಾರ ರಂಗೇರತೊಡಗಿದಂತೆ ಜಿಲ್ಲೆಯ ಬಹುತೇಕ ಮಠ, ಮಂದಿರಗಳಿಗೆ ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು, ಅವರ ಪರ ಚುನಾವಣೆ ಪ್ರಚಾರ ಕೈಗೊಳ್ಳುತ್ತಿರುವ ಮುಖಂಡರು ದೇವರ ದರ್ಶನ ಪಡೆದು ಇಲ್ಲವೇ ಆಯಾಯ ಊರಿನಲ್ಲಿರುವ ಮಠಾಧೀಶರು, ದೇವಸ್ಥಾನ, ದರ್ಗಾ, ಚರ್ಚ್‌ಗಳಲ್ಲಿ ಆಶೀರ್ವಾದ ಪಡೆದು ಪ್ರಚಾರ ಕೈಗೊಳ್ಳುತ್ತಿರುವುದು ಸಾಮಾನ್ಯವಾಗಿದೆ.

ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಮತ್ತು ಬಿಜೆಪಿ - ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್ .ಮಂಜುನಾಥ್ ರವರು ಒಕ್ಕಲಿಗ ಸಮುದಾಯಕ್ಕೆ ಸೇರಿದವರು. ಕ್ಷೇತ್ರದಲ್ಲಿ ಸಂಖ್ಯೆ ಲೆಕ್ಕಚಾರದಲ್ಲಿ ಶೇಕಡ 32ರಷ್ಟು ಒಕ್ಕಲಿಗ ಮತದಾರರು ಇದ್ದಾರೆ. ಈ ಮತಗಳು ಇಬ್ಬರು ಅಭ್ಯರ್ಥಿಗಳಿಗೂ ಹರಿದು ಹಂಚಿ ಹೋಗುವ ಲೆಕ್ಕಚಾರ ಹಾಕಿರುವ ರಾಜಕೀಯ ಪಕ್ಷಗಳು ಇತರೆ ಸಮುದಾಯದ ಮತಗಳ ಮೇಲೆ ಕಣ್ಣು ಹಾಕಿವೆ.

ಒಕ್ಕಲಿಗ ಜನಾಂಗ ಸೇರಿದಂತೆ ಶೋಷಿತ, ಅಲ್ಪಸಂಖ್ಯಾತ ಸಮುದಾಯದ ಮತ ಗಳಿಕೆಯ ಲೆಕ್ಕಚಾರದಲ್ಲಿ ತೊಡಗಿರುವ ಅಭ್ಯರ್ಥಿಗಳು ಮತ್ತು ಮುಖಂಡರು ಕ್ಷೇತ್ರ ಪ್ರವಾಸ ಸಂದರ್ಭದಲ್ಲಿ ಸಿಗುವ ಮಠ ಮಂದಿರಗಳಿಗೆ ಲಗ್ಗೆ ಇಟ್ಟು, ಮಠಾಧೀಶರ ಆಶೀರ್ವಾದ ಪಡೆದು ಫೋಟೋಗೆ ಸ್ಮೈಲ್ ಕೊಟ್ಟು ಪ್ರಚಾರ ಪಡೆಯುತ್ತಿದ್ದಾರೆ.

ಕೈ-ಕಮಲ ದಳ ಅಭ್ಯರ್ಥಿಯ ಟಂಪಲ್ ರನ್:

ಬಿಜೆಪಿ ಟಿಕೆಟ್ ಘೋಷಣೆ ಆಗುತ್ತಿದ್ದಂತೆ ಡಾ.ಸಿ.ಎನ್ .ಮಂಜುನಾಥ್ ರವರು ತುಮಕೂರಿನ ಶ್ರೀ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಲಿಂಗೈಕ್ಯರಾದ ಶ್ರೀ ಡಾ.ಶಿವಕುಮಾರಸ್ವಾಮೀಜಿರವರ ದರ್ಶನ ಪಡೆದು ಪೀಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ ದಿವ್ಯಾಶೀರ್ವಾದ ಪಡೆದರು.

ರಾಜರಾಜೇಶ್ವರಿ ನಗರದ ಕೈಲಾಸಾಶ್ರಮದ ಶ್ರೀ ಜಯೇಂದ್ರ ಪುರಿ ಸ್ವಾಮೀಜಿ ಹಾಗೂ ಕುಣಿಗಲ್ ತಾಲೂಕಿನ ಹುಲಿಯೂರುದುರ್ಗದ ಶ್ರೀ ಕ್ಷೇತ್ರ ಅಂಕನಹಳ್ಳಿ ಗವಿಮಠಕ್ಕೆ ಭೇಟಿ ನೀಡಿ ಶ್ರೀ ಫಿರಂಗಿಸ್ವಾಮಿ ಸುಕ್ಷೇತ್ರದ ಮಠಾಧ್ಯಕ್ಷರಾದ ಶ್ರೀ ಶಿವರುದ್ರ ಶಿವಾಚಾರ್ಯ ಸ್ವಾಮೀಜಿಗಳನ್ನು ಮಂಜುನಾಥ್ ರವರು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡಿದ್ದಾರೆ.

ಇನ್ನು ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ ಶ್ರೀ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಕನಕಪುರದ ಮರಳೆಗವಿಮಠದ ಶ್ರೀ ಶಿವರುದ್ರ ಮಹಾಸ್ವಾಮಿ ಸೇರಿದಂತೆ ನಾನಾ ಮಠಗಳ ಶ್ರೀಗಳಿಂದ ಆಶೀರ್ವಾದ ಪಡೆದಿದ್ದಾರೆ. ಜೊತೆಗೆ ಪಕ್ಷದ ಹಿರಿಯ ನಾಯಕರಾದ ಸಿ.ಎಂ.ಲಿಂಗಪ್ಪ,ಎಚ್.ಎಂ.ರೇವಣ್ಣ, ಸೈಯದ್ ಜಿಯಾವುಲ್ಲಾ ಸೇರಿದಂತೆ ಅನೇಕರ ಕಾಲಿಗೆ ಬಿದ್ದು ಆಶೀರ್ವಾದ ಕೋರಿದ್ದಾರೆ.

ಜಿಲ್ಲೆಯಲ್ಲಿ ಒಕ್ಕಲಿಗ ಮಠಗಳ ಜೊತೆಗೆ ಇತರೆ ಸಮುದಾಯಗಳನ್ನು ಪ್ರತಿನಿಧಿಸುವ ಮಠಗಳು, ದರ್ಗಾಗಳು, ಚರ್ಚ್ ಗಳು ನೆಲೆ ಕಂಡುಕೊಂಡಿವೆ. ಈ ಎಲ್ಲ ಶ್ರದ್ಧಾ ಕೇಂದ್ರಗಳು ತಮ್ಮದೇ ಆದ ಭಕ್ತರನ್ನು ಹೊಂದಿವೆ.

ಮಠ, ಮಂದಿರ, ದರ್ಗಾ, ಚರ್ಚ್ ಗಳಲ್ಲಿ ಆಶೀರ್ವಾದ ಪಡೆದರೆ ಆಯಾಯ ಸಮುದಾಯಗಳ ಮತಗಳನ್ನು ಸುಲಭವಾಗಿ ಗಳಿಸಬಹುದು ಎಂಬುದು ಅಭ್ಯರ್ಥಿಗಳ ತಂತ್ರಗಾರಿಕೆಯ ಭಾಗವಾಗಿದೆ.(ಚಿಕ್ಕಹಾಗಡೆ ಫೋಟೊ ಕೋಟ್‌ಗೆ ಬಳಸಿ)

ಕೋಟ್ ...

ನನಗೆ ಮಠಗಳ ಬಗ್ಗೆ ಗೌರವವಿದೆ. ಚುನಾವಣೆ ಸಮಯದಲ್ಲಿ ಜಾತಿ , ಧರ್ಮದ ಹೆಸರಿನಲ್ಲಿ ಮಠಗಳ ಮಠಾಧೀಶರನ್ನು ರಾಜಕೀಯವಾಗಿ ಬಳಸಿಕೊಳ್ಳುವುದು ಸರಿಯಲ್ಲ. ಅಭ್ಯರ್ಥಿಗಳು ಚುನಾವಣೆಗಾಗಿ ಮಠಗಳನ್ನು ಬಳಸಿಕೊಳ್ಳುವುದನ್ನು ಬಿಟ್ಟು ಪ್ರಜಾಪ್ರಭುತ್ವ ಉಳಿಸುವ ಕೆಲಸ ಮಾಡಬೇಕು. ನಾನೆಂದೂ ಜಾತಿ ಆಧಾರದ ಮೇಲೆ ಮತ ಕೇಳಿದವನಲ್ಲ. ಜಾತಿ ವ್ಯವಸ್ಥೆ ಗಟ್ಟಿಗೊಳಿಸುವ ಬದಲು ಸಹೋದರತ್ವ ಸಮಾಜ ನಿರ್ಮಾಣ ಮಾಡುವುದು ಬಿಎಸ್ಪಿ ಉದ್ದೇಶ.

-ಡಾ.ಚಿನ್ನಪ್ಪ ವೈ.ಚಿಕ್ಕಹಾಗಡೆ, ಬಿಎಸ್ಪಿ ಅಭ್ಯರ್ಥಿ, ಬೆಂಗಳೂರು ಗ್ರಾಮಾಂತರ ಕ್ಷೇತ್ರ(27ಕೆಆರ್ ಎಂಎನ್ 4.ಜೆಪಿಜಿ - ಡಾ.ಚಿನ್ನಪ್ಪ ವೈ.ಚಿಕ್ಕಹಾಗಡೆ)27ಕೆಆರ್ ಎಂಎನ್ 2,3.ಜೆಪಿಜಿ

2.ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಚುಂಚನಗಿರಿ ಮಠಾಧೀಶ ಶ್ರೀ ನಿರ್ಮಲಾನಂದ ಸ್ವಾಮೀಜಿಗಳಿಂದ ಆಶೀರ್ವಾದ ಪಡೆದರು.

3.ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್ .ಮಂಜುನಾಥ್ ದಂಪತಿ ತುಮಕೂರಿನ ಶ್ರೀ ಸಿದ್ದಗಂಗಾ ಮಠ ಪೀಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿಗಳ ಆಶೀರ್ವಾದ ಪಡೆದರು.