ವಚನ ಸಾಹಿತ್ಯಕ್ಕೆ ಫ.ಗು.ಹಳಕಟ್ಟಿ ಕೊಡುಗೆ ಅಪಾರ: ಡಾ.ಸಿದ್ದಣ್ಣ ಬಾಡಗಿ

| Published : Aug 12 2025, 12:33 AM IST

ವಚನ ಸಾಹಿತ್ಯಕ್ಕೆ ಫ.ಗು.ಹಳಕಟ್ಟಿ ಕೊಡುಗೆ ಅಪಾರ: ಡಾ.ಸಿದ್ದಣ್ಣ ಬಾಡಗಿ
Share this Article
  • FB
  • TW
  • Linkdin
  • Email

ಸಾರಾಂಶ

ವಿಶ್ವಗುರು ಬಸವಣ್ಣನವರು ಸೇರಿದಂತೆ ಅನುಭವ ಮಂಟಪದ ಎಲ್ಲಾ ಶಿವಶರಣರು ರಚಿಸಿದ ಮೂಲ ವಚನಗಳನ್ನು ಸಂಗ್ರಹಿಸಿ, ಮುದ್ರಿಸಿ, ಮುಂದಿನ ಪೀಳಿಗೆಗೆ ಪರಿಚಯಿಸಿ, ಪಸರಿಸುವ ಮಹತ್ವಪೂರ್ಣ ಸಾಧನೆಗೈದ ಡಾ.ಫಕೀರಪ್ಪ ಗುರುಬಸಪ್ಪ ಹಳಕಟ್ಟಿ ಅವರು ಸರ್ವಕಾಲಕ್ಕೂ ಸ್ಮರಣೀಯಾರ್ಹರಾಗಿದ್ದಾರೆ ಎಂದು ವಚನ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷ ಡಾ.ಸಿದ್ದಣ್ಣ ಬಾಡಗಿ ಹೇಳಿದರು.

ಕನ್ನಡಪ್ರಭ ವಾರ್ತೆ ಮುಧೋಳ

ವಿಶ್ವಗುರು ಬಸವಣ್ಣನವರು ಸೇರಿದಂತೆ ಅನುಭವ ಮಂಟಪದ ಎಲ್ಲಾ ಶಿವಶರಣರು ರಚಿಸಿದ ಮೂಲ ವಚನಗಳನ್ನು ಸಂಗ್ರಹಿಸಿ, ಮುದ್ರಿಸಿ, ಮುಂದಿನ ಪೀಳಿಗೆಗೆ ಪರಿಚಯಿಸಿ, ಪಸರಿಸುವ ಮಹತ್ವಪೂರ್ಣ ಸಾಧನೆಗೈದ ಡಾ.ಫಕೀರಪ್ಪ ಗುರುಬಸಪ್ಪ ಹಳಕಟ್ಟಿ ಅವರು ಸರ್ವಕಾಲಕ್ಕೂ ಸ್ಮರಣೀಯಾರ್ಹರಾಗಿದ್ದಾರೆ ಎಂದು ವಚನ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷ ಡಾ.ಸಿದ್ದಣ್ಣ ಬಾಡಗಿ ಹೇಳಿದರು.

ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ, ವಚನ ಸಾಹಿತ್ಯ ಪರಿಷತ್ತು, ಹಾಗೂ ಹಿರಿಯ ನಾಗರಿಕರ ವೇದಿಕೆ ತಾಲೂಕಾ ಘಟಕಗಳ ಸಂಯುಕ್ತಾಶ್ರಯದಲ್ಲಿ ಭಾನುವಾರ ಸಂಜೆ ನಗರದ ಹೇಮರಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪದ ಆವರಣದಲ್ಲಿ ಆಯೋಜಿಸಿದ್ದ ವಚನ ಸಂಶೋಧನಾ ಪಿತಾಮಹ ಡಾ.ಪ.ಗು.ಹಳಕಟ್ಟಿ ಅವರ 145ನೇ ಜನ್ಮದಿನೋತ್ಸವ ನಿಮಿತ್ತ ವಚನ ಸಾಹಿತ್ಯ ಸಂರಕ್ಷಣಾ ದಿನ ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸಕರಾಗಿ ಮಾತನಾಡಿ, ಭಾರತೀಯ ಸಾಹಿತ್ಯ ಕ್ಷೇತ್ರದಲ್ಲಿ ವಚನ ಸಾಹಿತ್ಯ ತನ್ನದೇ ಆದ ಶ್ರೇಷ್ಠತೆ ಉಳಿಸಿಕೊಂಡಿದೆ. 12ನೇ ಶತಮಾನ ವಚನ ಸಾಹಿತ್ಯ ಚಳವಳಿಯ ಯುಗವಾಗಿದ್ದು, ಸಾಮಾಜಿಕ, ವೈಚಾರಿಕ ಹಾಗೂ ವೈಜ್ಞಾನಿಕವಾಗಿ ಹೊಸ ಸಮಾಜ ಕಟ್ಟಲು ನೆರವಾಯಿತು. ತಾಳೆಗರಿ, ಓಲೆಗರಿ, ಒಡ್ಡೋಲಗಳಲ್ಲಿ ಕೈಬರಹದಲ್ಲಿದ್ದ ವಚನಗಳನ್ನು ಸಂಗ್ರಹಿಸಿ, ಸಂಶೋಧನೆ ಮಾಡಿ, ಮುದ್ರಿಸಿ ಇಂದು ನಮ್ಮೆಲ್ಲರಿಗೂ ದೊರಕುವ ಕೆಲಸವನ್ನು ಹಳಕಟ್ಟಿಯವರು ಮಾಡಿದ್ದಾರೆ. ವೃತ್ತಿಯಲ್ಲಿ ವಕೀಲರಾಗಿದ್ದರೂ ವಚನಗಳನ್ನು ಸಂಗ್ರಹಿಸುವ ಅಸಕ್ತಿ ಬೆಳೆಸಿಕೊಂಡು ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ ಫ.ಗು. ಹಳಕಟ್ಟಿ ಅವರ ವ್ಯಕ್ತಿತ್ವ, ಪರಿಶ್ರಮ, ತ್ಯಾಗ ನಮಗೆಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಹೇಳಿದರು.

ತುಳಸಿಗೇರಿ ಪೂಣಾನಂದ ಮಹಾಮುನಿ ಆಶ್ರಮದ ರಾಮಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ನಮ್ಮ ಅಂತರಂಗ, ದಿವ್ಯಚೇತನ ಬಡಿದೆಬ್ಬಿಸಿದ ಕೀರ್ತಿ ವಚನಗಳಿಗೆ ಸಲ್ಲುತ್ತದೆ, ಮನುಷ್ಯನ ಜೀವನವನ್ನು ಪ್ರಜ್ಞಾಪೂರ್ವಕವಾಗಿ ಸಾತ್ವಿಕದೆಡೆಗೆ ಕೊಂಡೊಯ್ಯುವ ಶಕ್ತಿ ವಚನಗಳಿಗೆ ಇದೆ. ಇಂತಹ 22 ಸಾವಿರಕ್ಕೂ ಹೆಚ್ಚು ವಚನಗಳನ್ನು ಸಂಗ್ರಹಿಸಿ, ಸಂರಕ್ಷಿಸಿ, ಮುದ್ರಿಸಿ ಮುಂದಿನ ತಲೆಮಾರಿಗೂ ಪಸರಿಸುವ ಕಾರ್ಯವನ್ನು ಹಳಕಟ್ಟಿಯವರು ಮಾಡಿದ್ದಾರೆಂದರು.

ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹಾದೇವಪ್ಪ ಮಡಿವಾಳ ಅಧ್ಯಕ್ಷತೆ ವಹಿಸಿ ಸಾಂದರ್ಭಿಕವಾಗಿ ಮಾತನಾಡಿದರು. ಡಾ.ಎಸ್.ಆರ್. ದಿವಾಣ ಪ್ರಾಸ್ತಾವಿಕವಾಗಿ ಮಾತನಾಡಿದರು, ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ಕಲ್ಲಪ್ಪ ಸಬರದ, ಸರ್ಕಾರಿ ಹಾಗೂ ಅರೆಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಮಹಾದೇವ ದಾಸರಡ್ಡಿ, ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ವಿಜಯಾ ಹಂಗರಗಿ, ಕ.ಸಾ.ಪ ಅಧ್ಯಕ್ಷ ಆನಂದ ಪೂಜಾರಿ, ಹಿ.ನಾ.ವೇ ಉಪಾಧ್ಯಕ್ಷ ಪಿ.ಶ್ಯಾಮಸುಂದರ, ಪತ್ರಕರ್ತ ವಿಶ್ವನಾಥ ಮುನವಳ್ಳಿ ವೇದಿಕೆ ಮೇಲೆ ಉಪಸ್ಥಿತರಿದ್ದರು.

ಹಿ.ನಾ.ವೇ. ಕಾರ್ಯದರ್ಶಿ ಬಸವರಾಜ ಜಲಗೇರಿ ನಿರೂಪಿಸಿ, ವಂದಿಸಿದರು, ಶ.ಸಾ.ಪ ಕಾರ್ಯದರ್ಶಿ ರುದ್ರಪ್ಪ ಜಾಡರ ಸ್ವಾಗತಿಸಿದರು, ಹಣಮಂತ ಸೋರಗಾಂವಿ ಸಂಗಡಿಗರು ವಚನ ಗಾಯನ ಹೇಳಿದರು.ಶ.ಸಾ.ಪ, ಕ.ಮ.ವೇ, ವ.ಸಾ.ಪ, ಕ.ಸಾ.ಪ, ಹಿ.ನಾ.ವೇ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.