ಸಾರಾಂಶ
ಕನ್ನಡಪ್ರಭ ವಾರ್ತೆ ಮಾಲೂರು
ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ಎಲ್ಲಾ ವಿದ್ಯಾರ್ಥಿಗಳು ಪರೀಕ್ಷೆಯ ಸಮಯದಲ್ಲಿ ಹೆದರದೆ ಧೈರ್ಯದಿಂದ ಎದುರಿಸಿ, ನಿಮಗಾಗಿ ಉತ್ತಮ ಭವಿಷ್ಯ ಕಾಯುತ್ತಿದೆ ಎಂದು ಎಂದು ಬಿಇಒ ಎಚ್.ಎಸ್.ಚಂದ್ರಕಲಾ ಹೇಳಿದರು.ತಾಲೂಕಿನ ವಿವಿಧ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಕೆಲವೊಂದು ಟಿಪ್ಸ್ ನೀಡಿ ಪ್ರೋತ್ಸಾಹಿಸಿ, ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಮಕ್ಕಳಿಗೆ ಪ್ರಮುಖ ಘಟ್ಟವಾಗಿದೆ. ಪರೀಕ್ಷೆಯ ಸಮಯದಲ್ಲಿ ಯಾರೂ ಸಹ ಹೆದರಬಾರದು. ಪ್ರತಿಯೊಬ್ಬರೂ ಕೇಂದ್ರಕ್ಕೆ ಕಡ್ಡಾಯವಾಗಿ ಪ್ರವೇಶ ಪತ್ರವನ್ನು ತೆಗೆದುಕೊಂಡು ಹೋಗಬೇಕು. ಉತ್ತಮವಾದ ಪೆನ್ ಜತೆಗೆ ನೀರಿನ ಬಾಟಲ್‌ಅನ್ನು ತೆಗೆದುಕೊಂಡು ಹೋಗಬೇಕು. ಪ್ರಶ್ನೆಗಳಿಗೆ ಉತ್ತರಿಸುವಾಗ ಆಚೆ ಈಚೆ ನೋಡಬೇಡಿ. ಮೊದಲು ಸುಲಭವಾಗುವ ಪ್ರಶ್ನೆಗಳಿಗೆ ಉತ್ತರಿಸಿ. ಯಾವ ವಿದ್ಯಾರ್ಥಿಯೂ ಸಹ ಪರೀಕ್ಷೆಗೆ ಮೊಬೈಲ್ ತೆಗೆದುಕೊಂಡು ಹೋಗಬೇಡಿ ಎಂದು ಎಚ್ಚರಿಸಿದರು.
ಪರೀಕ್ಷೆಯಲ್ಲಿ ನೀವು ಬರೆಯುವ ಅಕ್ಷರಗಳು ಅರ್ಥವಾಗುವಂತೆ ಸುಂದರವಾಗಿ, ಕಾಗುಣಿತ ದೋಷವಿಲ್ಲದೆ, ಸ್ಪೆಲ್ಲಿಂಗ್ ಮಿಸ್ಟೇಕ್ ಗಳು ಇಲ್ಲದಂತೆ ಬರೆಯಬೇಕು ಎಂದ ಬಿಇಒ ಅವರು, ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಆಚೆ- ಇಚೆ ನೋಡದೆ ಪರೀಕ್ಷೆ ಬರೆಯಬೇಕು ಎಂದರು.ಪರೀಕ್ಷೆಯ ಮುನ್ನಾ ದಿನ ನಿದ್ದೆಗೆಟ್ಟು ಓದಬೇಡಿ. ಹನ್ನೊಂದು ಗಂಟೆಯವರೆಗೆ ಓದಿ, ಮಲಗಿ ನಿದ್ದೆ ಮಾಡಿ. ಮತ್ತೆ ಐದು ಗಂಟೆಗೆ ಎದ್ದು ಅಭ್ಯಾಸ ಮಾಡಿಕೊಳ್ಳಬೇಕು. ಮನೆಯಲ್ಲಿ ಊಟ, ತಿಂಡಿ ಮಾಡಿ ಹೋಗಿ ಎಂದರು.
ವಿದ್ಯಾರ್ಥಿಗಳೇ ಇದು ಕೇವಲ ಪರೀಕ್ಷೆಯಾಗಿದೆ. ಜೀವನವೆಂಬ ಪರೀಕ್ಷೆಯ ಮುಂದೆ ಇದೇನು ಅಲ್ಲವೇ ಅಲ್ಲ. ಪರೀಕ್ಷಾ ಫಲಿತಾಂಶ ಬಂದ ನಂತರ ಹತಾಶರಾಗುವುದು, ಕಡಿಮೆ ಅಂಕ ಬಂದವೆಂದು ಆತ್ಮಹತ್ಯೆ ಮಾಡಿಕೊಳ್ಳುವುದು ಮೂರ್ಖತನ ಎಂದರು.ಮಾನವ ಜನ್ಮ ಬಲು ಶ್ರೇಷ್ಠವಾಗಿದ್ದು, ಇದ್ದು ಸಾಧಿಸಬೇಕು. ಅದು ನಿಜವಾದ ಜೀವನ. ಹೇಡಿಗಳಂತೆ ನಿರ್ಧಾರ ತೆಗೆದುಕೊಳ್ಳಬಾರದು. ಮನೆಯಲ್ಲಿ ಪೋಷಕರು ಸಹ ಮಕ್ಕಳಿಗೆ ಒತ್ತಡ ಹೇರಬೇಡಿ. ಒತ್ತಡ ಸಾವಿಗೆ ಸಮವಾದುದು. ಅದು ಆಯುಷ್ಯ, ಆರೋಗ್ಯವನ್ನೂ ನುಂಗಿ ಹಾಕುತ್ತದೆ. ನಗುನಗುತ್ತಾ ಖುಷಿಯಿಂದ ಪರೀಕ್ಷೆ ಬರೆಯಬೇಕು.ನಿಮಗಾಗಿ ಸುಂದರ ಭವಿಷ್ಯ ರೂಪಿಸಿಕೊಳ್ಳಲು ಇದು ಸಕಾಲ ಎಂದು ಕೆಲವೊಂದು ಟಿಪ್ಸ್ ನೀಡಿದರು.