ಗಜೇಂದ್ರಗಡ: ವಿದ್ಯಾರ್ಥಿ ಜೀವನ ಬಂಗಾರವಿದ್ದಂತೆ. ಅದಕ್ಕೆ ಪೂರಕವಾಗಿ ಮಕ್ಕಳು ನಿರಂತರವಾಗಿ ಅಭ್ಯಾಸ ಮಾಡಿ ಜ್ಞಾನ ಸಂಪಾದನೆ ಮಾಡಿದ್ದಲ್ಲಿ ನಿಶ್ಚಿತ ಗುರಿಯನ್ನು ಮುಟ್ಟಿ ಯಶಸ್ಸು ಪಡೆಯಲು ಸಾಧ್ಯ ಎಂದು ಉಪನ್ಯಾಸಕ ಅರವಿಂದ ವಡ್ಡರ ತಿಳಿಸಿದರು.
ತಾಲೂಕಿನ ಗೋಗೇರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರತಿಯೊಂದು ವಿದ್ಯಾರ್ಥಿಯು ತಾನು ಯಾರು, ಏನು ಮಾಡಬೇಕು, ಮತ್ತೆ ಏನು ಮಾಡುತ್ತಿದ್ದೇನೆ ಎಂದು ಸ್ವತಃ ತಾನೇ ಪ್ರಶ್ನೆ ಮಾಡಿಕೊಂಡು ಅಭ್ಯಾಸ ಮಾಡಿದ್ದಲ್ಲಿ ಎಸ್ಎಸ್ಎಲ್‌ಸಿಯಲ್ಲಿ ಅಗ್ರ ಶ್ರೇಣಿಯಲ್ಲಿ ಪಾಸಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ. ಭಯ ಹಾಗೂ ಗೊಂದಲ ಮಕ್ಕಳ ಶೈಕ್ಷಣಿಕ ಹಿನ್ನಡೆಗೆ ಕಾರಣವಾಗಬಹುದು. ಆದ್ದರಿಂದ ಮಕ್ಕಳು ಹೆದರದೆ ಧೈರ್ಯವಾಗಿ ಪರೀಕ್ಷೆಯನ್ನು ಎದುರಿಸಬೇಕು ಎಂದರು. ಎಸ್.ಎ. ಕಾಲೇಜಿನ ಪ್ರಾಚಾರ್ಯ ವಸಂತ ಗಾರಗಿ ಮಾತನಾಡಿ, ತಂದೆ- ತಾಯಿ, ಗುರು- ಹಿರಿಯರ ಮಾತುಗಳನ್ನು ಮಕ್ಕಳು ಕೇಳಬೇಕು. ಅಂದಾಗ ಮಾತ್ರ ಸಂಸ್ಕಾರವಂತ ಜೀವನ ಸಾಗಿಸಬಹುದು ಎಂದರು.ಕಿವುಡ ಮಕ್ಕಳ ಶಾಲೆಯ ಶಿಕ್ಷಕ ಆರ್.ಕೆ. ಬಾಗವಾನ ಮಾತನಾಡಿ, ಹೊಸ ಮಾರ್ಗದಲ್ಲಿ ಸಾಗಲು ಹಿಂಜರಿಯದಿರಿ. ಯಾರೂ ಈ ತನಕ ಮಾಡದಿರುವುದನ್ನು ಮಾಡಲು ಪ್ರಯತ್ನಿಸಿ. ದೃಢನಿರ್ಧಾರ ಮಾಡಿ. ಮಹಾನ್ ಕಾರ್ಯ ಮಾಡಲು ಮುಂದಡಿಯಿಟ್ಟಾಗ ಕಷ್ಟ, ಸೋಲು ಎದುರಾದರೆ ಹಿಂಜರಿಯಬೇಡಿ. ಬದುಕಿನ ಸೊಗಸನ್ನು ಹೆಚ್ಚಿಸುವುದು ಪರೀಕ್ಷೆಗಳೇ ಎಂಬುದು ನೆನಪಿರಲಿ ಎಂದರು. ಶಾಲಾ ಮುಖ್ಯೋಪಾಧ್ಯಾಯರಾದ ಟಿ.ಸಿ. ನಾಗನೂರ ಮಾತನಾಡಿದರು. ಇದೇ ವೇಳೆ ಕಳೆದ ವರ್ಷ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಬಳಿಕ ಹಿರಿಯ ಶಿಕ್ಷಕರನ್ನು ಸನ್ಮಾನಿಸಲಾಯಿತು.ಎಸ್‌ಡಿಎಂಸಿ ಅಧ್ಯಕ್ಷ ಪರಶುರಾಮ ಚವಡಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಮಾಜಿ ಅಧ್ಯಕ್ಷ ಬಸವರಾಜ ಮೂಲಿಮನಿ,ಬಸವರಾಜ ಮಾದರ, ಕಳಕಪ್ಪ ಮೇಟಿ, ರವಿಚಂದ್ರ ಗಾರಗಿ, ಬಾಲರಾಜ ಪತ್ತಾರ, ಶಿಕ್ಷಕರಾದ ಎಸ್.ಕೆ. ಪೂಜಾರ, ಬಿ.ಎಸ್. ಬಳಿಗೇರ, ಎಂ.ಎಚ್. ಮಠದ, ಡಿ.ಎಸ್. ಕುಸಗಲ್ಲ, ಆರ್.ಎಸ್. ಇಟಗಿ, ಎಚ್.ಎಫ್. ತಳವಾರ, ಪರಶು ಹರಪೇಟಿ, ಮೈನು ಬಾಗವಾನ, ಶಿವಣ್ಣ ಮುಗಳಿ ಸೇರಿ ಇತರರು ಇದ್ದರು.