ಗಡಿಗ್ರಾಮ ಚತ್ತಗುಡ್ಲಹಳ್ಳಿಗೆ ಸೌಲಭ್ಯ ಕಲ್ಪಿಸಲಿ

| Published : Jun 20 2024, 01:01 AM IST

ಗಡಿಗ್ರಾಮ ಚತ್ತಗುಡ್ಲಹಳ್ಳಿಗೆ ಸೌಲಭ್ಯ ಕಲ್ಪಿಸಲಿ
Share this Article
  • FB
  • TW
  • Linkdin
  • Email

ಸಾರಾಂಶ

ಬಂಗಾರಪೇಟೆ ತಾಲೂಕಿನ ಬಲಮಂದೆ ಗ್ರಾಮ ಪಂಚಾಯ್ತಿಗೆ ಸೇರುವ ಗಡಿಗ್ರಾಮ ಚತ್ತಗುಡ್ಲಹಳ್ಳಿ. ಈ ಗ್ರಾಮದ ಬಗ್ಗೆ ಬಹುತೇಕ ಜನಪ್ರತಿನಿಧಿಗಳೇ ತಿಳಿದಿಲ್ಲ. ಚುನಾವಣೆ ಸಮಯದಲ್ಲಿ ಬಂದವರು ಮತ್ತೆ ಇತ್ತ ತಲೆಹಾಕುವುದೇ ಇಲ್ಲ.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಮೊದಲು ಹೇಳುವುದು ಗ್ರಾಮೀಣಾಭಿವೃದ್ದಿಗೆ ಹೆಚ್ಚಿನ ಒತ್ತು ನೀಡಿ ನಗರಗಳಲ್ಲಿ ಸಿಗುವ ಸೌಲಭ್ಯಗಳು ಗ್ರಾಮೀಣರಿಗೆ ಸಿಗಬೇಕೆಂದು ಹೇಳುತ್ತಾರೆ, ಆದರೆ ಗಡಿ ಗ್ರಾಮಗಳು ಇಂದಿಗೂ ನಾಗರೀಕ ಸೌಲಭ್ಯಗಳಿಲ್ಲದೆ ನರಳುತ್ತಿವೆ ಎಂಬುದಕ್ಕೆ ಚತ್ತಗುಡ್ಲಹಳ್ಳಿ ಗ್ರಾಮವೇ ಸಾಕ್ಷಿ.ಹೌದು ತಾಲೂಕಿನ ಬಲಮಂದೆ ಗ್ರಾಮ ಪಂಚಾಯ್ತಿಗೆ ಸೇರುವ ಚತ್ತಗುಡ್ಲಹಳ್ಳಿ ತಮಿಳುನಾಡು ಗಡಿ ಭಾಗಕ್ಕೆ ಅಂಟಿಕೊಂಡಿದೆ. ಈ ಗ್ರಾಮದ ಬಗ್ಗೆ ಬಹುತೇಕ ಜನಪ್ರತಿನಿಧಿಗಳೇ ತಿಳಿದಿಲ್ಲ. ಚುನಾವಣೆ ಸಮಯದಲ್ಲಿ ಮಾತ್ರ ಎಲ್ಲ ಪಕ್ಷಗಳ ಅಭ್ಯರ್ಥಿಗಳು ಬಂದು ಸಲಾಮು ಹಾಕಿ ಮತಗಿಟ್ಟಿಸಿಕೊಂಡು ಹೋದರೆ ಮತ್ತೆ ಇತ್ತ ತಲೆಹಾಕುವುದೇ ಇಲ್ಲ.ಗ್ರಾಮಾಭಿವೃದ್ಧಿ ಶೂನ್ಯ

ಗ್ರಾಮ ಪಂಚಾಯತಿ ಸದಸ್ಯರಿದ್ದರೂ ಬರೀ ಹೆಸರಿಗಿದ್ದಾರೆ. ಯಾವುದೇ ಅಭಿವೃದ್ದಿ ಕಾರ್ಯಗಳನ್ನು ಕೈಗೊಂಡಿಲ್ಲ, ಗ್ರಾಮದಲ್ಲಿ ಹುಡುಕಿದರೂ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಕೊಳಚೆ ನೀರು ರಸ್ತೆ ಮೇಲೆಯೇ ಹರಿಯುವಂತಾಗಿದೆ. ಇದರಿಂದ ನಿತ್ಯ ಗ್ರಾಮಸ್ಥರು ಮೂಗುಮುಚ್ಚಿಕೊಂಡೇ ಸಂಚರಿಸಬೇಕು, ಕಸ ಸಂಗ್ರಹಕ್ಕೆ ಪಂಚಾಯತಿ ವತಿಯಿಂದ ವಾಹನ ಬಾರದ ಕಾರಣ ಎಲ್ಲೆಂದರಲ್ಲಿ ಕಸ ಎಸೆಯುತ್ತಾರೆ. ಗ್ರಾಮದಲ್ಲಿ ಸ್ವಚ್ಛತೆ ಎಂಬುದು ಮರೀಚಿಕೆಯಾಗಿದೆ. ಇರುವ ೧೫೦ ಮನೆಗಳೂ ಹೆಂಚಿನ ಮನೆಗಳೇ ಹಾಗೂ ಮುರಕಳಿಂದ ಕೂಡಿವೆ. ಸರ್ಕಾರ ಬಡವರಿಗೆ ಮನೆ ನಿರ್ಮಾಣಕ್ಕೆ ಪ್ರತಿ ವರ್ಷ ಕೋಟ್ಯಂತರ ವೆಚ್ಚ ಮಾಡುತ್ತಿದೆ, ಆದರೆ ಸರ್ಕಾರ ಮನೆಗಳು ಈ ಗ್ರಾಮದಿಂದ ದೂರ ಉಳಿದಿದೆ. ಗ್ರಾಮಕ್ಕೆ ಸರಿಯಾದ ರಸ್ತೆ ಇಲ್ಲದ ಕಾರಣ ಕೆಂಪು ಬಸ್ ಮುಖ ನೋಡಿ ಹಲವು ವರ್ಷಗಳೇ ಕಳೆದಿದೆ. ಏನು ಬೇಕಾದರೂ ೩ಕಿ.ಮೀ ನಡೆದುಕೊಂಡು ಕನಮನಹಳ್ಳಿಗೆ ಹೋಗಿ ಅಲ್ಲಿಂದ ಬಸ್‌ಗೆ ಹೋಗಬೇಕು. ಇನ್ನು ಮಕ್ಕಳಿಗೆ ಗ್ರಾಮದಲ್ಲಿ ಪ್ರಾಥಮಿಕ ಶಾಲೆಯಿದೆ,ನಂತರ ಪ್ರೌಡ ಶಾಲೆಗಾಗಿ ಮೂರು ಕಿ.ಮೀ ನಡೆದುಕೊಂಡು ಕನಮನಹಳ್ಳಿಗೆ ಬರಬೇಕು.ಪಡಿತರಕ್ಕೆ ಸರ್ವರ್‌ ಸಮಸ್ಯೆ

ಗ್ರಾಮದಲ್ಲಿ ಜನರ ಆರೋಗ್ಯ ಕೆಟ್ಟರೆ ೮ ಕಿ.ಮೀ ದೂರದ ತೊಪ್ಪನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನಡೆದುಕೊಂಡೇ ಕಾಡಿನಲ್ಲಿ ಹೋಗಬೇಕು. ಗ್ರಾಮಸ್ಥರ ಒತ್ತಾಯಕ್ಕೆ ಮಣಿದು ಗ್ರಾಮದಲ್ಲೆ ಉಪ ನ್ಯಾಯಬೆಲೆ ಅಂಗಡಿಯನ್ನು ತೆರೆಯಲಾಗಿದೆ. ಆದರೆ ಸರ್ವರ್ ಸಿಗದೆ ಅಂಗಡಿ ಮಾಲೀಕ ಪ್ರತಿ ತಿಂಗಳು ಪಡಿತರ ವಿತರಿಸಲು ಹೆಣಗಾಡಬೇಕಾಗಿದೆ. ದಿನವಿಡೀ ಸಾಲಾಗಿ ನಿಂತರೂ ಪಡಿತರ ಸಿಗುವುದು ಕಷ್ಟವಾಗಿದೆ.

ಆದರೂ ಗ್ರಾಪಂ, ತಾಲೂಕು ಆಡಳಿತ ಇಲ್ಲಿನ ಜನರ ಭವಣೆಯನ್ನು ಕೇಳುವವರೇ ಇಲ್ಲ. ಶುದ್ದವಾದ ನೀರು ಕುಡಿಯಲೂ ವ್ಯವಸ್ಥೆ ಇಲ್ಲ, ಜತೆಗೆ ಕಾಡಾನೆಗಳ ಹಾವಳಿ ಬೇರೆ. ಇನ್ನಾದರೂ ಸೌಲಭ್ಯ ಕಲ್ಪಿಸಲು ಅಧಿಕಾರಿಗಳು ಮನಸ್ಸು ಮಾಡುವಂತೆ ಗ್ರಾಮಸ್ಥರು ಕೋರಿದ್ದಾರೆ.