ಸಾರಾಂಶ
ಭಟ್ಕಳ: ತಾಲೂಕಿನ ವೆಂಕಟಾಪುರದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಐದು ದಿನಗಳ ಐಎನ್‌ಎಫ್ (ಇಂಡಿಯನ್ ನವಾಯತ್ ಫೋರಂ) ಟ್ರೇಡ್ ಎಕ್ಸ್‌ಪೋ ೨೦೨೫ಕ್ಕೆ ಪೌರಾಡಳಿತ ಸಚಿವ ರಹೀಮ್ ಖಾನ್ ಚಾಲನೆ ನೀಡಿದರು.
ಇಂತಹ ಟ್ರೇಡ್ ಎಕ್ಸ್‌ಪೋದಿಂದ ಉದ್ಯಮಿಗಳಿಗೆ, ಉದ್ಯಮ ಸ್ಥಾಪಿಸುವವರಿಗೆ, ಉದ್ಯಮದ ಅಭಿವೃದ್ಧಿಗೆ ಅನುಕೂಲ ಆಗಿದೆ. ಟ್ರೇಡ್ ಎಕ್ಸ್‌ಪೋ ಏರ್ಪಡಿಸಿದ ಇಂಡಿಯನ್ ನವಾಯತ್ ಫೋರಂ ಕರಾವಳಿ ಕರ್ನಾಟಕದಲ್ಲಿ ಒಂದು ವಿಶ್ವಾಸಾರ್ಹ ಸಂಸ್ಥೆಯಾಗಿ ಸಮಾಜಮುಖಿ ಕಾರ್ಯವನ್ನು ಮಾಡುತ್ತಿರುವುದು ಶ್ಲಾಘನೀಯ. ಟ್ರೇಡ್ ಎಕ್ಸ್‌ಪೋದಿಂದ ಉದ್ಯಮದ ಪ್ರಚಾರ ಮತ್ತು ಅಭಿವೃದ್ಧಿಗೆ ಸಹಕಾರಿಯಾಗಿದೆ. ಇದರಲ್ಲಿ ಅನೇಕ ಗಣ್ಯರಿಂದ ಅಗತ್ಯದ ವಿಷಯದ ಮೇಲೆ ಸೆಮಿನಾರ್‌ಗಳನ್ನು ಕೂಡಾ ಹಮ್ಮಿಕೊಂಡಿರುವುದು ಶ್ಲಾಘನೀಯ ಕಾರ್ಯ ಎಂದರು.ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಿನ್ಸಿಪಲ್ ಕಾರ್ಯದರ್ಶಿ ಮೊಹಮ್ಮದ್ ಮೊಹಸಿನ್ ಮಾತನಾಡಿ, ಕರಾವಳಿ ಭಾಗದಲ್ಲಿ ಉದ್ಯಮಕ್ಕೆ ಅನೇಕ ಅವಕಾಶಗಳು ತೆರೆದುಕೊಂಡಿದ್ದು, ಇಲ್ಲಿನ ಬೀಚ್‌ಗಳಲ್ಲಿಯೇ ೨೦೦ -೩೦೦ ಜನರಿಗೆ ಕೆಲಸ ಕೊಡುವಂತಹ ಅವಕಾಶವಿದೆ. ಸ್ವಚ್ಛ ಹಾಗೂ ಉತ್ತಮ ಬೀಚ್‌ಗಳಲ್ಲಿ ಪ್ರವಾಸಿಗರು ಬೆಳಗ್ಗೆಯಿಂದ ಸಂಜೆಯ ವರೆಗೆ ಉಳಿದುಕೊಳ್ಳಲು ಅವಕಾಶ ಮಾಡಿಕೊಡುವ ಮೂಲಕ ಬೀಚ್ ಪ್ರವಾಸೋದ್ಯಮಕ್ಕೆ ಅವಕಾಶವಿದೆ. ವಿದೇಶಗಳಲ್ಲಿ ಸಣ್ಣ ಹಳ್ಳಿಗಳು ಸಾವಿರಾರು ಜನರನ್ನು ಆಕರ್ಷಿಸುವಂತಹ ಕಾರ್ಯ ಮಾಡುತ್ತಿವೆ ಎಂದು ಉದಾಹರಿಸಿದ ಅವರು, ಒಂದು ಬೀಚ್‌ನಲ್ಲಿ ಜನತೆ ಬರಲು ಆರಂಭಿಸಿದರೆ ಎಲ್ಲ ಕಡೆಗಳಲ್ಲಿಯೂ ಇದು ಸಾಧ್ಯವಾಗುವುದು. ಇದರಿಂದ ಯುವಕರು ಉದ್ಯೋಗ ಅರಸಿ ಬೇರೆ ಕಡೆಗೆ ಹೋಗುವುದು ತಪ್ಪುವುದು ಒಂದೆಡೆಯಾದರೆ, ಕೆಲಸವಿಲ್ಲದೇ ಬೇರೆ ಬೇರೆ ಯೋಚನೆ ಮಾಡುವುದು ಕೂಡಾ ತಪ್ಪುತ್ತದೆ ಎಂದೂ ಹೇಳಿದರು.
ಭಟ್ಕಳದ ಸಿಹಿ ತಿನಿಸುಗಳು, ವಿಶೇಷ ಅಡುಗೆ, ರುಚಿ ರುಚಿಯಾದ ತಿನಿಸುಗಳನ್ನು ಪ್ಯಾಕ್ ಮಾಡಿ ಬೇರೆ ಕಡೆಗಳಿಗೆ ಕಳುಹಿಸುವಂತಾದರೆ ಉತ್ತಮ ಮಾರುಕಟ್ಟೆ ಸೃಷ್ಟಿಸಬಹುದು. ಭಟ್ಕಳದ್ದೇ ವಿಶೇಷ ಆಹಾರ ಪದಾರ್ಥಗಳನ್ನು ಪೂರೈಸುವ ಒಂದು ಉತ್ತಮ ಹೋಟೆಲ್ ಇಲ್ಲಿ ಕಾಣುತ್ತಿಲ್ಲ. ಅದರಲ್ಲಿಯೂ ಅವಕಾಶವಿದೆ. ಮನೆಯಲ್ಲಿಯೇ ವಿವಿಧ ಬಗೆಯ ತಿಂಡಿ ತಿನಿಸುಗಳನ್ನು ತಯಾರಿಸಿ ಮಾರುಕಟ್ಟೆ ಮಾಡಲು ಕೂಡಾ ಅವಕಾಶವಿದೆ. ಅವುಗಳನ್ನೆಲ್ಲ ಬಳಸಿಕೊಂಡು ಉತ್ತಮ ವ್ಯಾಪಾರ ಮಾಡಬಹುದು ಎಂದೂ ಅಭಿಪ್ರಾಯಪಟ್ಟರು.ಐಎನ್ಎಫ್ ಅಧ್ಯಕ್ಷ ಎಸ್.ಎಂ. ಅರ್ಷದ್ ಅಧ್ಯಕ್ಷತೆ ವಹಿಸಿದ್ದರು. ಖಾಜಿ ಅಬ್ದರ್ ರಬ್, ಮೌಲಾನಾ ಖ್ವಾಜಾ ಮೊಹಿನುದ್ದೀನ್ ಅಕ್ರಮಿ ಮಾತನಾಡಿದರು. ತಂಜೀಂ ಅಧ್ಯಕ್ಷ ಇನಾಯತ್‌ವುಲ್ಲಾ ಶಾಬಂದ್ರಿ, ಅಂಜುಮನ್ ಅಧ್ಯಕ್ಷ ಯೂನೂಸ್ ಖಾಜಿಯಾ, ಐಎನ್ಎಫ್ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ನೌಮಾನ್ ಪಟೇಲ್, ಗುಫ್ರಾನ್ ಲಂಕಾ, ಅಬ್ದುಲ್ ಮುಯೀನ್ ಕಾಡ್ಲಿ ಮುಂತಾದವರಿದ್ದರು. ಐಎನ್ಎಫ್‌ನ ಮಾಜ್ ಜುಕಾಕು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಚಾಲಕ ಮೊಹಮ್ಮದ್ ನೌಮಾನ್ ಪಟೇಲ್ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಅಬ್ದುಲ್ ಮೊಮಿನ ಕಾಡ್ಲಿ ವಂದಿಸಿದರು.
ಕಾರ್ಯಕ್ರಮದ ಆನಂತರ ಆಗಮಿಸಿದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಹಾಗೂ ಉ.ಕ. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಟ್ರೇಡ್ ಎಕ್ಸಪೋ-೨೦೨೫ ವೀಕ್ಷಿಸಿ ಶುಭ ಹಾರೈಸಿದರು.