ಸಾರಾಂಶ
ಕನ್ನಡಪ್ರಭ ವಾರ್ತೆ ಶಿರಾ ನಗರಸಭೆ ನಗರದ ಜನತೆಗೆ ಮೂಲಭೂತ ಸೌಕರ್ಯ ಒದಗಿಸಲು ಜನರು ತೆರಿಗೆಯನ್ನು ಸರಿಯಾಗಿ ಪಾವತಿಸಬೇಕು. ಜನತೆ ಸರಿಯಾಗಿ ತೆರಿಗೆ ಪಾವತಿಸಿದರೆ ನಗರಕ್ಕೆ ಮೂಲಭೂತ ಸೌಕರ್ಯ ಒದಗಿಸಲು ಸಾಧ್ಯವಾಗುತ್ತದೆ. ನಗರದ ಸೌಂದರ್ಯ ಕಾಪಾಡಲು ನಾಗರಿಕರು ಹೆಚ್ಚು ಗಮನ ಕೊಡಬೇಕು ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು.ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಸುಮಾರು 1.25 ಕೋಟಿ ವೆಚ್ಚದ ಸಿ.ಸಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಶಿರಾ ನಗರವು ದಿನೇ ದಿನೇ ಬೆಳವಣಿಗೆಯಾಗುತ್ತಿದ್ದು, ಇಲ್ಲಿ ಜನಸಂಖ್ಯೆಯೂ ಹೆಚ್ಚುತ್ತಿದೆ. ಇಲ್ಲಿ ಟ್ರಾಫಿಕ್ ಸಮಸ್ಯೆ ಪರಿಹರಿಸಲು ಕೆ.ಎಸ್.ಆರ್.ಟಿ.ಸಿ. ಮತ್ತು ಖಾಸಗಿ ಬಸ್‌ಗೆ ಹೋಗುವ ಸಂಪರ್ಕ ರಸ್ತೆಯಲ್ಲಿ ಅಂಡರ್‌ಪಾಸ್ ಮಾಡುವ ಉದ್ದೇಶ ಹೊಂದಿದ್ದೇನೆ. ಇದಕ್ಕೆ ಸ್ಥಳೀಯ ಆಡಳಿತದಿಂದ ಹೆಚ್ಚಿನ ಹಣಕಾಸು ಒದಗಿಸಬೇಕು. ಖಾಸಗಿ ಬಸ್ ನಿಲ್ದಾಣ ಅಭಿವೃದ್ಧಿಯಾಗಬೇಕೆಂದು ಶಿರಾ ಜನತೆಯ ಬಹಳ ದಿನಗಳ ಬೇಡಿಕೆಯಾಗಿತ್ತು. ಇಂದು ಅಭಿವೃದ್ಧಿಗೆ ಭೂಮಿ ಪೂಜೆ ನೆರವೇರಿಸಿದ್ದೇನೆ. ಈಗಿರುವ ಖಾಸಗಿ ಬಸ್ ನಿಲ್ದಾಣದ ಸ್ಥಳಾವಕಾಶ ಕಡಿಮೆ ಇದೆ. ಶೀಘ್ರದಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇನೆ ಎಂದರು. ರಾದಲ್ಲಿ ಮನೆಗಳನ್ನು ನಿರ್ಮಿಸುವ ಮನೆಯ ಮಾಲಿಕರುಗಳು ಮನೆಗಳ ಸುತ್ತ ಸೆಟ್‌ಬ್ಯಾಕ್ ಬಿಡುತ್ತಿಲ್ಲ. ಇದರಿಂದ ನಗರದ ಅಂದಕೆಡುತ್ತದೆ. ನಗರಸಭೆಯ ಅಧಿಕಾರಿಗಳು ಅದನ್ನ ಪ್ರಶ್ನಿಸಿದರೆ ಅವರ ಮೇಲೆ ಒತ್ತಡ ತರುತ್ತಾರೆ. ಆದ್ದರಿಂದ ಮುಂದೆ ಯಾರೇ ಮನೆಗಳ ಸುತ್ತ ಸೆಟ್‌ಬ್ಯಾಕ್ ಬಿಡಗಿದ್ದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.ಶಿರಾದಲ್ಲಿ ಸುಮಾರು 7 ಕೋಟಿ ವೆಚ್ಚದಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣವನ್ನು ಅಭಿವೃದ್ಧಿಪಡಿಸಲಾಗಿದೆ. ಕಾಮಗಾರಿ ಪೂರ್ಣಗೊಳ್ಳಲು ಇನ್ನು 2.50 ಕೋಟಿ ರು. ಅನುದಾನದ ಅವಶ್ಯಕತೆ ಇದೆ. ಅನುದಾನವನ್ನು ಶೀಘ್ರ ಬಿಡುಗಡೆ ಮಾಡಿಸಿ ಕಾಮಗಾರಿ ಪೂರ್ಣಗೊಳಿಸಿ ಬಸ್ ನಿಲ್ದಾಣವನ್ನು ಉದ್ಘಾಟನೆ ಮಾಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಜೀಷಾನ್ ಮೊಹಮೂದ್, ಉಪಾಧ್ಯಕ್ಷ ಲಕ್ಷ್ಮೀಕಾಂತ, ಶಿರಾ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪಿ.ಅರ್.ಮಂಜುನಾಥ್, ಪೌರಾಯುಕ್ತ ರುದ್ರೇಶ್.ಕೆ, ನಗರಸಭೆ ಸದಸ್ಯರಾದ ತೇಜು ಭಾನುಪ್ರಕಾಶ್, ಅಜಯ್ ಕುಮಾರ್, ಎಸ್.ಎಲ್ ರಂಗನಾಥ್, ಶಿವಶಂಕರಪ್ಪ, ಆರ್.ರಾಘವೇಂದ್ರ, ಆರ್. ರಾಮು, ಬಿ.ಎಂ.ರಾಧಾಕೃಷ್ಣ, ಮಹೇಶ್, ಸುಶೀಲ ವಿರೂಪಾಕ್ಷ, ಮುಖಂಡರಾದ ವಿಜಯ್‌ಕುಮಾರ್, ಮಜರ್ ಸಾಬ್ ಸೇರಿದಂತೆ ಹಲವರು ಹಾಜರಿದ್ದರು.