ಗ್ಯಾರಂಟಿಗಳ ಪರಿಣಾಮಕಾರಿ ಜಾರಿಗೆ ಸಹಕರಿಸಿ: ಸಿ.ಎಸ್.ಚಂದ್ರಭೂಪಾಲ್

| Published : Jun 26 2024, 12:38 AM IST

ಸಾರಾಂಶ

ದಲ್ಲಿ ಎದುರಾಗುವ ಸಣ್ಣ ಪುಟ್ಟ ತಾಂತ್ರಿಕ ಮತ್ತು ಇತರೆ ದೋಷಗಳನ್ನು ಅಧಿಕಾರಿಗಳು ಸರಿಪಡಿಸಿ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಬಡ ಮತ್ತು ಸಾಮಾನ್ಯ ಜನರ ಆರ್ಥಿಕ ಸಬಲೀಕರಣಕ್ಕಾಗಿ ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿಗಳು ಇನ್ನೂ ಮುಂದೆಯೂ ಮುಂದುವರೆಯಲಿದ್ದು, ಇನ್ನೂ ಪರಿಣಾಮಕಾರಿ ಅನುಷ್ಟಾನ ಮತ್ತು ಯಶಸ್ಸಿಗೆ ಅಧಿಕಾರಿಗಳು ಸಹಕರಿಸಬೇಕು ಎಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಸಿ.ಎಸ್.ಚಂದ್ರಭೂಪಾಲ್ ಹೇಳಿದರು.

ಇಲ್ಲಿನ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಸಭೆಯಲ್ಲಿ ಅವರು ಮಾತನಾಡಿ, ಶಕ್ತಿ ಯೋಜನೆ, ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ ಮತ್ತು ಯುವನಿಧಿ ಈ ಐದು ಯೋಜನೆಗಳು ರಾಜ್ಯದಲ್ಲಿ ಇತಿಹಾಸವನ್ನೇ ಸೃಷ್ಟಿಸಿದೆ.

ಬಡ ಮತ್ತು ಸಾಮಾನ್ಯ ಜನರ ಬದುಕಿಗೆ ಶಕ್ತಿಯಾಗಿದೆ. ಅವರ ಆರ್ಥಿಕ ಸಬಲೀಕರಣಕ್ಕೆ ಕಾರಣವಾಗಿದ್ದು ಇಂತಹ ಯೋಜನೆಗಳ ಅನುಷ್ಟಾನದಲ್ಲಿ ಎದುರಾಗುವ ಸಣ್ಣ ಪುಟ್ಟ ತಾಂತ್ರಿಕ ಮತ್ತು ಇತರೆ ದೋಷಗಳನ್ನು ಅಧಿಕಾರಿಗಳು ಸರಿಪಡಿಸಿಕೊಂಡು ಮತ್ತು ಯೋಜನೆ ಕುರಿತು ಜನರಲ್ಲಿ ಅರಿವು ಮೂಡಿಸಿ ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ ಮಾತನಾಡಿ, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಪ್ರಾಧಿಕಾರ ಸಮಿತಿ ರಚನೆಯಾಗಿದೆ. ಜಿಲ್ಲೆಯಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಮತ್ತು ಸದಸ್ಯ ಕಾರ್ಯದರ್ಶಿ ಸೇರಿ 21 ಪದಾಧಿಕಾರಿಗಳು ಮತ್ತು ತಾಲೂಕು ಮಟ್ಟದಲ್ಲಿ ಇಓ ಗಳು ಸದಸ್ಯ ಕಾರ್ಯದರ್ಶಿಗಳಿದ್ದು 15 ಜನ ಪದಾಧಿಕಾರಿಗಳಿರುತ್ತಾರೆ. ಪದಾಧಿಕಾರಿಗಳು ಗ್ಯಾರಂಟಿಗಳ ಅನುಷ್ಟಾನದ ಕುರಿತು ಸಲಹೆ ಸೂಚನೆ ನೀಡುತ್ತಾರೆ ಎಂದು ಮಾಹಿತಿ ನೀಡಿದರು.

ಜು.5ರೊಳಗೆ ತಾಲೂಕು ಪ್ರಾಧಿಕಾರಗಳು ಸಭೆ ನಡೆಸಬೇಕು. ಪ್ರಾಧಿಕಾರಕ್ಕೆ ತಾಲೂಕುಗಳಲ್ಲಿ ಕಚೇರಿ ಮತ್ತು ಮೂಲಭೂತ ಸೌಕರ್ಯ ಕೇಳಿದ್ದು, ಒದಗಿಸಲು ಕ್ರಮ ವಹಿಸಲಾಗುವುದು. ಗೃಹಲಕ್ಷಿ ಮತ್ತು ಅನ್ನಭಾಗ್ಯ ಯೋಜನೆಯಡಿ ಎನ್‍ಪಿಸಿಎಲ್ ಪೋರ್ಟಲ್ ಸಮಸ್ಯೆ ಇತರೆ ತಾಂತ್ರಿಕ ಸಮಸ್ಯೆಗಳ ಕಡೆ ಅಧಿಕಾರಿಗಳು ಗಮನ ಹರಿಸಿ ಫಲಾನುಭವಿಗಳಿಗೆ ಸಹಕರಿಸಬೇಕು. ನ್ಯಾಯ ಬೆಲೆ ಅಂಗಡಿಗಳು ಪ್ರತಿ ದಿನ ತೆರೆದು ಪಡಿತರ ವಿತರಣೆ ಮಾಡುವಂತೆ ಅಧಿಕಾರಿಗಳು ಕ್ರಮ ವಹಿಸುವಂತೆ ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ನಿರ್ದೇಶಕರು, ಸದಸ್ಯ ಕಾರ್ಯದರ್ಶಿಗಳು, ಗ್ಯಾರಂಟಿ ಯೋಜನೆಗಳ ಅನುಷ್ಟಾನ ಇಲಾಖೆಗಳ ಮುಖ್ಯಸ್ಥರು ಪಾಲ್ಗೊಂಡಿದ್ದರು.

ಶಕ್ತಿ ಯೋಜನೆ:

ಶಕ್ತಿ ಯೋಜನೆಯಡಿ ಜಿಲ್ಲೆಯಲ್ಲಿ 2023 ಜೂ.11ರಿಂದ 2024 ಜೂ.23ರ ವರೆಗೆ ಜಿಲ್ಲೆಯಲ್ಲಿ 2,38,94,869 ಮಹಿಳಾ ಪ್ರಯಾಣಿಕರು ಅಂದರೆ ಶೇ.59.9 ಮಹಿಳೆಯರು ಪ್ರಯಾಣಿಸಿದ್ದಾರೆ. 84.19ಕೋಟಿ ರು. ಶೇ.42.1ಯೋಜನೆಯಿಂದ ಆದಾಯ ಸಂದಾಯವಾಗಿದೆ. ಜಿಲ್ಲೆಯ ವಿವಿಧೆಡೆಯಿಂದ ಕೆಎಸ್‍ಆರ್‌ಟಿಸಿ ಬಸ್‍ಗಾಗಿ 145 ಅರ್ಜಿಗಳು ಈವರೆಗೆ ಬಂದಿದ್ದು, ಕೆಲವೆಡೆ ಹೊಸ ಬಸ್ ಬಿಡಲಾಗಿದೆ. ಸಂಪನ್ಮೂಲ ಕೊರತೆಯಿಂದ ಹಲವು ಕಡೆ ಬಸ್ ಬಿಡಲು ಸಾಧ್ಯವಾಗುತ್ತಿಲ್ಲ ಎಂದು ಕೆಎಸ್‍ಆರ್‌ಟಿಸಿ ಅಧಿಕಾರಿ ಮಾಹಿತಿ ನೀಡಿದರು.

ಗೃಹಜ್ಯೋತಿ ಯೋಜನೆ:

ಗೃಹಜ್ಯೋತಿ ಯೋಜನೆಯಡಿ ನೋಂದಣಿಯಾದ ಮನೆಗಳಿಗೆ 200 ಯುನಿಟ್‍ವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದ್ದು, ಜಿಲ್ಲೆಯಲ್ಲಿ 2023 ಜು.1ರಿಂದ 2024 ಮೇ ವರೆಗೆ 4,51,848 ಗೃಹಜ್ಯೋತಿ ಬಿಲ್ ನೀಡಿದ್ದು, 21.39 ಕೋಟಿ ರು. ಮೊತ್ತದ ಸಬ್ಸಿಡಿ ನೀಡಲಾಗಿದೆ ಎಂದು ಮೆಸ್ಕಾಂ ಡಿಸಿ ಸಭೆಗೆ ಮಾಹಿತಿ ನೀಡಿದರು.

ಪ್ರಾಧಿಕಾರದ ಉಪಾಧ್ಯಕ್ಷರು ಮಾತನಾಡಿ, ಗ್ರಾಹಕರು ಬಿಲ್ ಪಾವತಿಸದಿದ್ದರೆ ನಿರ್ದಾಕ್ಷಿಣ್ಯವಾಗಿ ಲೈನ್‍ಮನ್‍ಗಳು ಸಂಪರ್ಕ ಕಡಿತಕ್ಕೆ ಮುಂದಾಗುತ್ತಿದ್ದು, ಮಾನವೀಯತೆ ದೃಷ್ಟಿಯಿಂದ ಒಂದು-ಎರಡು ದಿನ ಬಿಲ್ ಪಾವತಿಸಲು ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು.

ಅನ್ನಭಾಗ್ಯ ಯೋಜನೆ:ಅನ್ನಭಾಗ್ಯ ಯೋಜನೆಯಡಿ ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ ವಿತರಸಬೇಕಿದ್ದು, ಅಕ್ಕಿ ಕೊರತೆ ಕಾರಣ ಎನ್‍ಎಫ್‍ಎಸ್‍ಸಿ 5 ಕೆಜಿ ಅಕ್ಕಿ ಮತ್ತು ಉಳಿದ 5 ಕೆಜಿ ಅಕ್ಕಿ ಬದಲು ತಲಾ ಸದಸ್ಯರಿಗೆ 170ರು. ರಂತೆ ಏಪ್ರಿಲ್‍ವರೆಗೆ ನಗದು ಪಾವತಿಸಲಾಗಿದೆ. ಒಟ್ಟು 3,59,890 ಅರ್ಹ ಪಡಿತರ ಚೀಟಿದಾರರಿಗೆ ಡಿಬಿಟಿ ಮೂಲಕ 20.39 ಕೋಟಿ ರು. ನಗದು ಪಾವತಿಸಲಾಗಿದೆ ಎಂದು ಆಹಾರ ಇಲಾಖೆ ಅಧಿಕಾರಿ ಅವಿನ್ ಮಾಹಿತಿ ನೀಡಿದರು.

ವಯಸ್ಸಾದ ಹಲವರ ಬಯೋಮೆಟ್ರಿಕ್ ತೆಗೆದುಕೊಳ್ಳುತ್ತಿಲ್ಲ. ಇದಕ್ಕೆ ಸೂಕ್ತ ಪರಿಹಾರ ಒದಗಿಸಬೇಕು ಹಾಗೂ ಅನೇಕ ನ್ಯಾಯಬೆಲೆ ಅಂಗಡಿಗಳಲ್ಲಿ ತಿಂಗಳ ಕೊನೆಯಲ್ಲಿ ಕೇವಲ 2 ರಿಂದ 3 ದಿನ ಮಾತ್ರ ಪಡಿತರ ವಿತರಣೆಯಾಗುತ್ತಿದೆ. ಅನರ್ಹ ಪಡಿತರ ಚೀಟಿದಾರರ ದೋಷ ಸರಿಪಡಿಸಿ ಸೌಲಭ್ಯ ನೀಡಬೇಕಿದೆ. ಹಾಗೂ ಬಿಪಿಎಲ್‍ಗೆ ಅರ್ಹರಿದ್ದವರನ್ನೂ ಹಿಂದೆ ಪಡೆಯಲಾದ ತಪ್ಪು ಮಾಹಿತಿಯಿಂದ ಎಪಿಎಲ್ ಕಾರ್ಡ್ ನೀಡಲಾಗಿದೆ. ಪ್ರತಿ ತಾಲೂಕಿನಿಂದ ಹೀಗೆ ಬಿಪಿಎಲ್ ಕಾರ್ಡ್‍ಗೆ ಅರ್ಹರಿರುವವರ ಮಾಹಿತಿ ಪಡೆದು ಬಿಪಿಎಲ್ ಕಾರ್ಡ್ ನೀಡಲು ಸರ್ಕಾರಕ್ಕೆ ಸಲ್ಲಿಸಬೇಕು. ಹಾಗೂ ಹೊಸ ಕಾರ್ಡ್ ಪಡೆಯಲು ಅವಕಾಶ ಮಾಡಿಕೊಡಬೇಕು ಎಂದು ಪ್ರಾಧಿಕಾರದ ಸದಸ್ಯರು ತಿಳಿಸಿದರು.

ಗೃಹಲಕ್ಷ್ಮಿ ಯೋಜನೆ:

ಜಿಲ್ಲೆಯಲ್ಲಿ ಮೇ ವರೆಗೆ 3,84,570 ಮಹಿಳೆಯರು ಈ ಯೋಜನೆಯಡಿ ನೋಂದಣಿಯಾಗಿದ್ದು 3,80,997 ಮಹಿಳೆಯರಿಗೆ ಮೇ ವರೆಗೆ ಸೌಲಭ್ಯ ನೀಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಕೃಷ್ಣಪ್ಪ ಮಾಹಿತಿ ನೀಡಿದರು.

ಬ್ಯಾಂಕ್ ಸಾಲ ಮತ್ತು ಇತರೆ ಯಾವುದೇ ಸಂದರ್ಭದಲ್ಲಿ ಐಟಿ ಮತ್ತು ಜಿಎಸ್‌ಟಿ ಪಾವತಿಸಿರುವ ಕಾರಣಕ್ಕಾಗಿ ಹಲವು ಅರ್ಜಿದಾರರಿಗೆ ಸೌಲಭ್ಯ ನೀಡಲಾಗಿಲ್ಲ. ಇಂತಹವರನ್ನು ಗುರುತಿಸಿ ಸೌಲಭ್ಯ ನೀಡಬೇಕು. ಮರಣ ಹೊಂದಿದ ಫಲಾನುಭವಿಗಳ ಪಟ್ಟಿ ತಯಾರಿಸಿ, ರಾಜ್ಯಕ್ಕೆ ಕಳುಹಿಸಿ ಕುಟುಂಬದ ಅರ್ಹ ಯಜಮಾನಿಗೆ ಸೌಲಭ್ಯ ಒದಗಿಸಿಕೊಡಬೇಕು ಎಂದು ಪ್ರಾಧಿಕಾರದ ಸದಸ್ಯರು ತಿಳಿಸಿದರು.

ಯುವನಿಧಿ:

ಯುವ ನಿಧಿ ಯೋಜನೆಯಡಿ ಜಿಲ್ಲೆಯಲ್ಲಿ 2023 ಡಿ. 26ರಿಂದ 2024 ಜೂ.24ರ ವರೆಗೆ ಒಟ್ಟು 5,389 ವಿದ್ಯಾರ್ಥಿಗಳು ನೋಂದಣಿಯಾಗಿದ್ದು, ಅರ್ಹ 695 ವಿದ್ಯಾರ್ಥಿಳಿಗೆ ಸೌಲಭ್ಯ ನೀಡಲಾಗಿದೆ ಎಂದು ಉದ್ಯೋಗಾಧಿಕಾರಿ ತಿಳಿಸಿದರು.

2022-23ರಲ್ಲಿ ಪದವಿ ಪಡೆದ ಕುವೆಂಪು ವಿವಿ ವಿದ್ಯಾರ್ಥಿಗಳಿಗೆ ಇನ್ನೂ ಸೌಲಭ್ಯ ಲಭ್ಯವಾಗಿಲ್ಲ. ಈ ಬಗ್ಗೆ ಸೂಕ್ತ ಕ್ರಮ ವಹಿಸಬೇಕು. ಹಾಗೂ ಕೌಶಲ್ಯಾಭಿವೃದ್ಧಿ ಇಲಾಖೆಯಿಂದ ನೀಡಲಾಗುವ ಕೌಶಲ್ಯಾಭಿವೃದ್ಧಿ ತರಬೇತಿಗಳ ಬಗ್ಗೆ ಹೆಚ್ಚಿನ ಅರಿವು ಮತ್ತು ಪ್ರಚಾರ ನೀಡುವಂತೆ ಸದಸ್ಯರು, ಪದಾಧಿಕಾರಿಗಳು ತಿಳಿಸಿದರು.