ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಕಲಬುರಗಿ ಮೀಸಲು ಲೋಕಸಭಾ ಕ್ಷೇತ್ರಕ್ಕೆ ಮೇ 7ರಂದು ಮತದಾನ ಹಿನ್ನೆಲೆಯಲ್ಲಿ ಮತದಾರರನ್ನು ಆಕರ್ಷಿಸುವಂತೆ ಮಾದರಿ ಮತಗಟ್ಟೆಗಳನ್ನು ಸುಣ್ಣ-ಬಣ್ಣದ ಜೊತೆಗೆ ಕನಿಷ್ಠ ಮೂಲಸೌಕರ್ಯ ಒಳಗೊಂಡಂತೆ ಸ್ಥಾಪಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಮತ್ತು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.ಅಧಿಕಾರಿಗಳೊಂದಿಗೆ ಮಾದರಿ ಮತಗಟ್ಟೆ ಸ್ಥಾಪನೆ, ಮತಗಟ್ಟೆಯಲ್ಲಿ ಕನಿಷ್ಟ ಮೂಲ ಸೌಕರ್ಯ ಕಲ್ಪಿಸುವ ಸಂಬಂಧ ಕರೆಯಲಾದ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 5 ಸಖಿ ಪಿಂಕ್ ಬೂತ್, ತಲಾ ಒಂದು ಮಾದರಿ, ಯುವ, ವಿಶೇಷಚೇತನರ ಬೂತ್ ನಿರ್ಮಿಸಬೇಕು. ಈ ಬೂತ್‍ಗಳು ಎ.ಎಂ.ಎಫ್ ಸೌಕರ್ಯ ಜೊತೆಗೆ ಕುಡಿಯುವ ನೀರು, ಶೌಚಾಲಯ ಇರಬೇಕು. ವಿಶೇಷ ಬೂತ್‍ಗಳು ಸಂದೇಶ ಸಾರುವಂತಿರಬೇಕು ಎಂದರು.
ಮಾದರಿ ಮತಗಟ್ಟೆಗಳ ಸ್ಥಾಪನೆಗೆ ಸ್ವೀಪ್ ಸಮಿತಿ ಅಥವಾ ಸ್ಥಳೀಯ ಪೌರ ಸಂಸ್ಥೆ, ಗ್ರಾಮ ಪಂಚಾಯ್ತಿಯಿಂದ ಅನುದಾನ ಭರಿಸಬೇಕು. ಮಂಗಳವಾರದಿಂದ ಕೆಲಸ ಆರಂಭಿಸಿ ಮೇ 3ರೊಳಗೆ ಸಿವಿಲ್ ಕೆಲಸ ಮತ್ತು ಅಲಂಕಾರ ಕಾರ್ಯ ಮೇ 6ರ ಮಧ್ಯಾಹ್ನದೊಳಗೆ ಮುಗಿಸಬೇಕು ಎಂದು ಅಧಿಕಾರಿಗಳಿಗೆ ಡಿ.ಸಿ. ಸೂಚನೆ ನೀಡಿದರು.ಮತಗಟ್ಟೆಯ ಪೋಲಿಂಗ್ ಸಿಬ್ಬಂದಿ, ಮೈಕ್ರೋ ವೀಕ್ಷಕರು, ಬಿ.ಎಲ್.ಓ, ಪೊಲೀಸ್ ಹಾಗೂ ಇತರೆ ಸಿಬ್ಬಂದಿಗೆ ಮೇ 6 ಮತ್ತು 7ರಂದು ಅಕ್ಷರ ದಾಸೋಹ ಶಾಖೆಯಿಂದ ಸಮಯಕ್ಕೆ ಸರಿಯಾಗಿ ಉಪಹಾರ, ಊಟ ಪೂರೈಸಬೇಕು, ಡಿ.ಡಿ.ಪಿ.ಐ, ಡಿ.ಡಿ.ಪಿ.ಯು ಇದರ ಮೇಲುಸ್ತುವಾರಿ ವಹಿಸಬೇಕು ಎಂದರು.
ಕನಿಷ್ಟ ಮೂಲಸೌಕರ್ಯ ಖಾತ್ರಿಪಡಿಸಿಕೊಳ್ಳಿ: ಪ್ರತಿ ಮತಗಟ್ಟೆ ನೀರು, ಶೌಚಾಲಯ, ರ್‍ಯಾಂಪ್, ಅಗತ್ಯವಿದ್ದೆಡೆ ಶಾಮಿಯಾನ, ವಿದ್ಯುತ್, ವೇಟಿಂಗ್ ರೂಂ, ಕೊಠಡಿ ದುರಸ್ತಿ ಒಳಗೊಂಡಂತೆ ಕನಿಷ್ಠ ಮೂಲಸೌಕರ್ಯ ಇರುವ ಬಗ್ಗೆ ತಾಲೂಕ ಪಂಚಾಯತ್ ಇ.ಓ ಮತ್ತು ಪೌರ ಸಂಸ್ಥೆಗಳ ಮುಖ್ಯಾಧಿಕಾರಿಗಳು ಖಾತ್ರಿಪಡಿಸಿಕೊಳ್ಳಬೇಕು.ಆ್ಯಂಬುಲೆನ್ಸ್ ಸೇವೆ, ಓ.ಆರ್.ಎಸ್ ಸೇವೆ ಒದಗಿಸಿ: ಬಿಸಿಲು ತಾಪ ಹೆಚ್ಚಿರುವ ಕಾರಣ ಪ್ರತಿ ಮತಗಟ್ಟೆಯಲ್ಲಿ ಮುಂಜಾಗ್ರತೆಯಾಗಿ ಪ್ರಥಮ ಚಿಕಿತ್ಸೆ ಕಿಟ್, ಓ.ಆರ್.ಎಸ್. ಪಾಕಿಟ್ ಒದಗಿಸಬೇಕು. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 4-5ರಂತೆ ಆ್ಯಂಬುಲೆನ್ಸ್ ವಾಹನ ನಿಗದಿ ಮಾಡಿಕೊಂಡು, ಎಲ್ಲಿಯಾದರೂ ಆರೋಗ್ಯ ಸಮಸ್ಯೆ ಕಂಡುಬಂದಲ್ಲಿ ಹಬ್ & ಸ್ಪೋಕ್ ಮಾದರಿಯಲ್ಲಿ ಅರ್ಧ ಗಂಟೆ ಒಳಗಾಗಿ ಆ್ಯಂಬುಲೆನ್ಸ್ ಸೇವೆ ಲಭಿಸಬೇಕು.
ತಾಲೂಕು ಕೇಂದ್ರಸ್ಥಾನದಲ್ಲಿ 4-5 ಹಾಸಿಗೆ ಮೀಸಲಿಟ್ಟು ಮೇ 6 ಮತ್ತು 7ರಂದು ಕಡ್ಡಾಯವಾಗಿ ವೈದ್ಯರು ಇರುವಂತೆ ನೋಡಿಕೊಳ್ಳಬೇಕೆಂದು ಡಿ.ಎಚ್.ಓ ಡಾ.ರವಿಕಾಂತ ಸ್ವಾಮಿ ಅವರಿಗೆ ನಿರ್ದೇಶನ ನೀಡಿದ ಡಿ.ಸಿ ಅವರು, ಪ್ರತಿ ಮತಗಟ್ಟೆಗೆ ನಿಗದಿಯಾದ ಆ್ಯಂಬುಲೆನ್ಸ್ ವಾಹನ, ಚಾಲಕರ ಮೊಬೈಲ್ ಸಂಖ್ಯೆ ಮಾಹಿತಿ ಮತಗಟ್ಟೆ ಅಧಿಕಾರಿಗಳಿಗೆ ನೀಡಬೇಕು ಎಂದರು.ಜಿಪಂ ಸಿಇಓ ಭಂವರ್ ಸಿಂಗ್ ಮೀನಾ ಮಾತನಾಡಿ ಮಾದರಿ ಮತಗಟ್ಟೆಯ ನೀಲಿ ನಕ್ಷೆ ತಯ್ಯಾರಿಸಿ ಕೂಡಲೆ ಒಪ್ಪಿಗೆ ಪಡೆದು ಕೆಲಸ ಆರಂಭಿಸಬೇಕು. ಮತಗಟ್ಟೆಯಲ್ಲಿ ಸೆಲ್ಫಿ ಬೂತ್ ಸ್ಥಾಪಿಸಬೇಕು. ಒಟ್ಟಿನಲ್ಲಿ ಅನಗತ್ಯ ವೆಚ್ಚವಿಲ್ಲದೆ ಮತದಾರರನ್ನು ಕೈಬೀಸಿ ಕರೆಯುವಂತೆ ಮತಗಟ್ಟೆ ಆಕರ್ಷಣಿಯವಾಗಿರಬೇಕು ಎಂದರು.
ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮುನಾವರ್ ದೌಲಾ, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪನಿರ್ದೇಶಕ ಶಿವಶರಣಪ್ಪ ಮೂಳೇಗಾಂವ, ಡಿ.ಡಿ.ಪಿ.ಐ ಸಕ್ರೆಪ್ಪಗೌಡ ಬಿರಾದಾರ, ಜಿಪಂ ಉಪ ಕಾರ್ಯದರ್ಶಿ ಮತ್ತು ಸ್ವೀಪ್ ನೋಡಲ್ ಅಧಿಕಾರಿ ಅಬ್ದುಲ್ ಅಜೀಮ್, ತಾಪಂ ಇ.ಓ.ಗಳು, ಅಕ್ಷರ ದಾಸೋಹ ಸಹಾಯಕ ನಿರ್ದೇಶಕರು ಹಾಗೂ ಪೌರ ಸಂಸ್ಥೆಗಳ ಮುಖ್ಯಸ್ಥರು ಇದ್ದರು.;Resize=(128,128))
;Resize=(128,128))