ಮಾಲಿನ್ಯ ಹರಡಿಸೋ ಕಾರ್ಖಾನೆಗಳಿಗೆ ಬಿದ್ದಿಲ್ಲ ಬೀಗ

| Published : Oct 28 2024, 01:03 AM IST

ಮಾಲಿನ್ಯ ಹರಡಿಸೋ ಕಾರ್ಖಾನೆಗಳಿಗೆ ಬಿದ್ದಿಲ್ಲ ಬೀಗ
Share this Article
  • FB
  • TW
  • Linkdin
  • Email

ಸಾರಾಂಶ

ಹುಮನಾಬಾದ್‌ ಕೈಗರಿಕಾ ಪ್ರದೇಶದಲ್ಲಿರುವ ಕಾರ್ಖಾನೆಗಳಿಂದ ವಾಯುಮಾಲಿನ್ಯ ಹರಡಿಸುತ್ತಿರುವುದು ಧೃಢಪಟ್ಟಿದೆ. ಆದ್ದರಿಂದ ಕಾರ್ಖಾನೆಗಳ ಬಾಗಿಲುಗಳಿಗೆ ಬೀಗ ಜಡಿಯುವಂತೆ ಪರಿಸರ ಇಲಾಖೆ ಆದೇಶಸಿತ್ತು. ಮೂರು ತಿಂಗಳು ಗತಿಸಿದರೂ ಆದೆಶ ಕಟ್ಟುನಿಟ್ಟಾಗಿ ಕಾರ್ಯರೂಪಕ್ಕೆ ಬಂದಿಲ್ಲ. ರಾತ್ರಿ ಸಮಯದಲ್ಲಿ ರಾಸಾಯನಿಕ ಹಾಗೂ ಟೈರ್‌ ಪೈರೋಲಿಸಿಲ್‌ ಕಾರ್ಖಾನೆಗಳಲ್ಲಿ ಕೆಲಸಕಾರ್ಯಗಳು ಪುನರಾರಂಭವಾಗಿವೆ.

ಕನ್ನಡಪ್ರಭ ವಾರ್ತೆ ಹುಮನಾಬಾದ್

ಹುಮನಾಬಾದ್‌ ಕೈಗರಿಕಾ ಪ್ರದೇಶದಲ್ಲಿರುವ ಕಾರ್ಖಾನೆಗಳಿಂದ ವಾಯುಮಾಲಿನ್ಯ ಹರಡಿಸುತ್ತಿರುವುದು ಧೃಢಪಟ್ಟಿದೆ. ಆದ್ದರಿಂದ ಕಾರ್ಖಾನೆಗಳ ಬಾಗಿಲುಗಳಿಗೆ ಬೀಗ ಜಡಿಯುವಂತೆ ಪರಿಸರ ಇಲಾಖೆ ಆದೇಶಸಿತ್ತು. ಮೂರು ತಿಂಗಳು ಗತಿಸಿದರೂ ಆದೆಶ ಕಟ್ಟುನಿಟ್ಟಾಗಿ ಕಾರ್ಯರೂಪಕ್ಕೆ ಬಂದಿಲ್ಲ. ರಾತ್ರಿ ಸಮಯದಲ್ಲಿ ರಾಸಾಯನಿಕ ಹಾಗೂ ಟೈರ್‌ ಪೈರೋಲಿಸಿಲ್‌ ಕಾರ್ಖಾನೆಗಳಲ್ಲಿ ಕೆಲಸಕಾರ್ಯಗಳು ಪುನರಾರಂಭವಾಗಿವೆ.ಆದೇಶ ಬಂದ ಒಂದೆರಡು ದಿನ ಕಾರ್ಯ ಸ್ಥಗಿತಗೊಳಿಸಿದ್ದ ಕಾರ್ಖಾನೆಗಳು ಮತ್ತೆ ಜನ, ಜಾನುವಾರುಗಳ ಹಾಗೂ ಜಲಚರಗಳ ಜೀವಗಳಿಗೆ ಆಪತ್ತು ಒಡ್ಡಿವೆ. ಚುನಾಯಿತ ಜನಪ್ರತಿನಿಧಿಗಳ ಕುಮ್ಮಕ್ಕು ಹಾಗೂ ವಾಯು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳ ನಿರ್ಲಕ್ಷ ಇದಕ್ಕೆಲ್ಲಾ ಕಾರಣ ಎಂಬ ಅನುಮಾನ ಜನರ ಮೂಡಿದೆ.

ಆ. 23ರಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಹುಮನಾಬಾದ್‌ ಕೈಗರಿಕಾ ಪ್ರದೇಶದಲ್ಲಿರುವ ಕಾರ್ಖಾನೆಗಳಾದ ಟೈರ್‌ ಪೈರೋಲಿಸಿಸ್‌, ಎಂ.ಕೆ ಇಂಡಸ್ಟ್ರೀಜ್‌, ಲಿಮಬ್ರಾ, ಪೈನರ್‌, ಕೆಜಿಎನ್‌, ಹಿಮಾಲಯ ಪ್ಲಾಸ್ಟಿಕ್‌, ಎಂಬಿ ಇಂಡಸ್ಟ್ರೀಸ್‌, ಓಆರ್‌ ಇಂಡ್ರಸ್ಟ್ರೀಜ್‌, 6 ಎಚ್‌, ಹಾಗೂ ರಾಸಾಯನಿಕ ಕಾರ್ಖಾನೆಗಳಾದ ರಾಡಿಸನ್‌ ಲ್ಯಾಬ್‌, ಸ್ಯೂಟಿಕ್‌ ಲ್ಯಾಬ್‌ ಹಾಗೂ ಫಾರ್ಮಾ, ಕೆಎಸ್‌ಟಿ ಫಾರ್ಮಾ, ಕ್ಷತ್ರೀಯ ಲ್ಯಾಬೋರೇಟಿಸ್‌, ವಿರುಪಾಕ್ಷ ಆರ್ಗಾನಿಕ್‌, ಸತ್ಯ ದೀಪ್ತಾ ಫಾರ್ಮಾದ ವಿದ್ಯುತ್‌ ಕಡಿತಗೊಳಿಸಿ ಬೀಗ ಹಾಕುವಂತೆ ಆದೇಶ ನೀಡಲಾಗಿತ್ತು. ಇದರಲ್ಲಿ, ಮೂರು ಕಾರ್ಖಾನೆಗಳಿಗೆ ಮೂರು ತಿಂಗಳು ಗತಿಸಿದರೂ ಬೀಗ ಹಾಕುವ ಕೆಲಸ ಮಾತ್ರ ಇನ್ನೂ ಆಗಿಲ್ಲ.

ಈ ಹಿಂದೆ ಅಧಿಕಾರಿಗಳಿಗೆ ಮಾಹಿತಿ ಕೇಳಿದಾಗ ರಿಯ್ಯಾಕ್ಟರ್ ಖಾಲಿ ಆದ ಮೇಲೆ ಕಾರ್ಖಾನೆಗೆ ಬೀಗ ಹಾಕಲಾಗುತ್ತದೆ. ಈ ಕುರಿತು ಸಹಾಯಕ ಆಯುಕ್ತರು ಹಾಗೂ ತಹಸೀಲ್ದಾರ್‌ ಅವರಿಗೆ ಬೀಗ ಹಾಕುವ ಜವಾಬ್ದಾರಿ ಇದೆ. ಜತೆಗೆ ವಿದ್ಯುತ್‌ ಕಡಿತದ ಕುರಿತು ಜೆಸ್ಕಾಂ ಅವರ ಜವಾಬ್ದಾರಿ ಇದೆ ಎಂದು ಮಾಹಿತಿ ನೀಡಿದ್ದರು. ಆದರೆ ಈ ಕುರಿತ ಕೆಲಸಗಳು ಇಲ್ಲಿಯವರೆಗೆ ಯಾವುದೂ ಕಾರ್ಯರೂಪಕ್ಕೆ ಬಂದಿಲ್ಲ.ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ನೀರಿನ ಸೆಕ್ಷನ್‌ 33 (ಎ) ಅಡಿಯಲ್ಲಿ, ಕಾಯ್ದೆ 1974, 1976 ಕರ್ನಾಟಕ ಮಂಡಳಿಯ ನಿಯಮ 34, ಜಲ ಕಾಯಿದೆ, 1974 ಏರ್‌ ಆಕ್ಟ್‌ 1981 ಅಡಿಯಲ್ಲಿ ಝಡ್‌ಎಸ್‌ಇಒ ಕಲಬುರಗಿ, ಜುಲೈ 2023ರಂದು ಹೊರಡಿಸಿದ ನಿಷೇಧಾಜ್ಞೆ, ಮಾರ್ಚ್ 2024ರಂದು ನಡೆದ ವೈಯಕ್ತಿಕ ವಿಚಾರಣೆಯ ಪ್ರಕ್ರಿಯೆಗಳು, ಆರ್‌ಒ ಬೀದರ್‌ ತಪಾಸಣೆ ವರದಿಗಳು ಲೆಕ್ಕಕ್ಕಿಲ್ಲ ಎನ್ನುವಂತಾಗಿವೆ.

ನಿಗದಿಪಡಿಸಿದ ಮಾನದಂಡ ಮೀರಿ ನಿಯಮಗಳನ್ನು ಉಲ್ಲಂಘಿಸಿ ಕಾರ್ಖಾನೆ ತ್ಯಾಜ್ಯನೀರನ್ನು ಸಂಸ್ಕರಣಾ ಘಟಕದಲ್ಲಿ ಸಂಸ್ಕರಿಸುವ ಬದಲು ಹಳ್ಳಗಳ ಮೂಲಕ ಹರಿದು ಬಿಡುವುದು ಬಾವಿಗಳ ಅಂತರ್ಜಲಕ್ಕೆ ಅಪಾಯವನ್ನುಂಟು ಮಾಡಿದೆ. ಜನರ ಆರೋಗ್ಯ ಗಮನದಲ್ಲಿಟ್ಟುಕೊಂಡು ಸಂಗ್ರಹವಾಗಿರುವ ತ್ಯಾಜ್ಯನೀರಿನ ಟಿಡಿಎಸ್‌, ಬಿಒಡಿ ಮತ್ತು ಸಿಒಡಿ ಸಂಸ್ಕರಿಸಿದ ಹೊರ ಸೂಸುವಿಕೆಯ ಮಾನದಂಡಗಳನ್ನು ಮೀರಿದೆ.

ಈಗಲಾದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳಲಿ, ಪರಿಸರ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಮಂತ್ರಿ ಈಶ್ವರ ಖಂಡ್ರೆ ಅವರು ಇಲ್ಲಿ ಎಡವಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು ಸರ್ಕಾರದ ಆದೇಶ ಪಾಲನೆಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸಂಬಂಧಿಕ ಹಿರಿಯ ಅಧಿಕಾರಿಗಳಿಗೆ ಸೂಚಿಸಬೇಕಿದೆ.

ಸಚಿವರ ಆದೇಶಕ್ಕೂ ಡೋಂಟ್ ಕೇರ್

ಸೆಪ್ಟಂಬರ್‌ 1ರಂದು ಕೈಗಾರಿಕಾ ಪ್ರದೇಶಗಳಲ್ಲಿ 15 ದಿನಗಳಿಗೆ ಒಮ್ಮೆ ಮಾಲಿನ್ಯ ನಿಯಂತ್ರಣ ಮಂಡಳಿಯ ಜಲಮೂಲಗಳ ಗುಣಮಟ್ಟದ ಪರೀಕ್ಷೆ ನಡೆಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಹಾಗೂ ಬೀದರ್‌ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಆದೇಶ ನೀಡಿದ್ದರು. ಸಚಿವರ ಮಾತಿಗೂ ಕಿಮ್ಮತ್ತು ನೀಡದೇ ಅಧಿಕಾರಿಗಳು ಈ ಎಲ್ಲಾ ನಿಯಮಗಳು ಗಾಳಿಗೆ ತೂರಿದ್ದಾರೆ ಎಂದು ಪರಿಸರವಾದಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.