ಕನ್ನಡಪ್ರಭ ವಾರ್ತೆ ಬೆಳಗಾವಿ ಬೈಲಹೊಂಗಲ ತಾಲೂಕಿನ ಮುರಕುಂಬಿ ಗ್ರಾಮದ ಇನಾಂದಾರ ಸಕ್ಕರೆ ಕಾರ್ಖಾನೆಯಲ್ಲಿ ಬುಧವಾರ ಸಂಭವಿಸಿದ ಬಾಯ್ಲರ್‌ ಸ್ಫೋಟದಲ್ಲಿ ಗಾಯಗೊಂಡಿದ್ದ ಐವರ ಪೈಕಿ ಚಿಕಿತ್ಸೆ ಫಲಿಸದೇ ಗುರುವಾರ ಮತ್ತೆ ನಾಲ್ಕು ಜನರು ಮೃತಪಟ್ಟಿದ್ದು, ಈ ಮೂಲಕ ಮೃತಪಟ್ಟವರ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬೈಲಹೊಂಗಲ ತಾಲೂಕಿನ ಮುರಕುಂಬಿ ಗ್ರಾಮದ ಇನಾಂದಾರ ಸಕ್ಕರೆ ಕಾರ್ಖಾನೆಯಲ್ಲಿ ಬುಧವಾರ ಸಂಭವಿಸಿದ ಬಾಯ್ಲರ್‌ ಸ್ಫೋಟದಲ್ಲಿ ಗಾಯಗೊಂಡಿದ್ದ ಐವರ ಪೈಕಿ ಚಿಕಿತ್ಸೆ ಫಲಿಸದೇ ಗುರುವಾರ ಮತ್ತೆ ನಾಲ್ಕು ಜನರು ಮೃತಪಟ್ಟಿದ್ದು, ಈ ಮೂಲಕ ಮೃತಪಟ್ಟವರ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದೆ.

ಬಾಗಲಕೋಟೆಯ ರಬಕವಿ ಅಕ್ಷಯ ಸುಭಾಷ ಚೋಪಡೆ (48), ಬೈಲಹೊಂಗಲದ ನೇಸರಗಿಯ ದೀಪಕ ನಾಗಪ್ಪ ಮುನ್ನೋಳಿ(32), ಖಾನಾಪುರದ ಚಿಕ್ಕಮುನವಳ್ಳಿ ಸುದರ್ಶನ ಮಹಾದೇವ ಬನೋಶಿ(25), ಬೈಲಹೊಂಗಲದ ಅರವಳ್ಳಿಯ ಮಂಜುನಾಥ ಮಡಿವಾಳಪ್ಪ ಕಾಜಗಾರ(28), ಅಥಣಿಯ ಹುಲಿಕಟ್ಟಿ ಗ್ರಾಮದ ಮಂಜುನಾಥ ಗೋಪಾಲ ತೇರದಾಳ, ಜಮಖಂಡಿ ತಾಲೂಕಿನ ಮರೆಗುದ್ದಿ ಗ್ರಾಮದ ಗುರುಪಾದಪ್ಪ ಬೀರಪ್ಪ ತಮ್ಮಣ್ಣವರ(38), ಗೋಕಾಕ ತಾಲೂಕಿನ ಗೊಡಚಿನಮಲ್ಕಿ ಭರತೇಶ ಬಸಪ್ಪ ಸಾರವಾಡಿ(27), ಗಿಳಿಹೊಸೂರುದ ರಾಘವೇಂದ್ರ ಗಿರಿಯಾಳ(36) ಮೃತಪಟ್ಟ ಕಾರ್ಮಿಕರು.

ಅವಘಡ ಸಂಭವಿಸಿ 24 ಗಂಟೆಗೂ ಹೆಚ್ಚು ಸಮಯ ಕಳೆದರೂ ಕಾರ್ಖಾನೆ ಆಡಳಿತ ಮಂಡಳಿಯವರು ಇದುವರೆಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ ಅಥವಾ ಪರಿಹಾರವನ್ನು ಘೋಷಿಸಿಲ್ಲ ಎಂದು ಮೃತರ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಖಾಸಗಿ ಆಸ್ಪತ್ರೆಯ ಶವಾಗಾರದಲ್ಲಿ ಎರಡು ಮೃತದೇಹಗಳ ಮರಣೋತ್ತರ ಪರೀಕ್ಷೆ ಪ್ರಕ್ರಿಯೆ ನಡೆಯಿತು. ಈ ವೇಳೆ ಮೃತರ ಸಂಬಂಧಿಕರು ಸೇರಿ, ಸ್ಥಳೀಯರು ಅಕ್ರೋಶ ವ್ಯಕ್ತಪಡಿಸಿದರು. ಮೃತ ಕಾರ್ಮಿಕ ಗುರು ತಮ್ಮಣ್ಣನವರ ಕುಟುಂಬಸ್ಥರು ಶವಾಗಾರದ ಹೊರಗೆ ಕಾರ್ಖಾನೆ ಆಡಳಿತ ಮಂಡಳಿಯ ನಡೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದರು.

ಮೃತರ ಕುಟುಂಬಸ್ಥರು ಕಾರ್ಖಾನೆ ಮಾಲೀಕರ ನಿರ್ಲಕ್ಷ್ಯದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಏಳು ಕಾರ್ಮಿಕರು ಸಾವನ್ನಪ್ಪಿದ ನಂತರವೂ ಕಾರ್ಖಾನೆ ಆಡಳಿತ ಮಂಡಳಿಯ ಯಾರೂ ಆಸ್ಪತ್ರೆಗೆ ಭೇಟಿ ನೀಡಿಲ್ಲ. ಸಂತಾಪವನ್ನು ಸೂಚಿಸಿಲ್ಲ ಎಂದು ದೂರಿದರು. ಇನಾಂದಾರ ಸಕ್ಕರೆ ಕಾರ್ಖಾನೆಯನ್ನು ವಿಕ್ರಮ್ ಇನಾಂದಾರ್, ಪ್ರಭಾಕರ ಕೋರೆ ಹಾಗೂ ವಿಜಯ ಮೆಟಗುಡ್‌ ಜಂಟಿಯಾಗಿ ನಿರ್ವಹಿಸುತ್ತಿದ್ದಾರೆ. ಅಕ್ಷಯ ಚೋಪಡೆ (45), ದೀಪಕ್ ಮನ್ನೊಳ್ಳಿ (31), ಸುದರ್ಶನ ಬಾನೋಶಿ (25), ಭರತೇಶ್ ಸರವಾಡೆ (27) ಗುರು ತಮ್ಮಣ್ಣನವರ್ (26) ಮತ್ತು ಮಂಜುನಾಥ ಕಾಜಗಾರ್ (26) ಮೃತ ದುರ್ದೈವಿ ಕಾರ್ಮಿಕರು.

ಅಪಘಾತದ ನಿಖರ ಕಾರಣ ಪತ್ತೆಹಚ್ಚಲು ಮತ್ತು ಕಾರ್ಖಾನೆ ಆಡಳಿತದ ನಿರ್ಲಕ್ಷ್ಯವಿದೆಯೇ ಎಂಬುದನ್ನು ತಿಳಿಯಲು ಸಂಬಂಧಿಸಿದ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.

-----

ಬಾಕ್ಸ್‌.....

ಘಟನೆಗೆ ಎಚ್ಚರಿಕೆ ವಹಿಸದಿರುವುದೇ ಮುಖ್ಯ ಕಾರಣ

ಕಾರ್ಖಾನೆಯಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದಿರುವುದು ಕಂಡುಬಂದಿದೆ. ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿಲ್ಲ. ಈ ದುರಂತಕ್ಕೆ ಮುಂಜಾಗ್ರತಾ ಮತ್ತು ಸುರಕ್ಷತಾ ಕ್ರಮ ಕೈಗೊಳ್ಳದಿರುವುದೇ ಪ್ರಮುಖ ಕಾರಣ. ಈ ಕುರಿತು ಈಗಾಗಲೇ ಕಾರ್ಖಾನೆಯ ತಾಂತ್ರಿಕ ತಂಡದ ಮುಖ್ಯಸ್ಥ ರಾವ್‌, ಎಂಜಿನಿಯರಿಂಗ್‌ ವಿಭಾಗದ ಮುಖ್ಯಸ್ಥ ಪ್ರವೀಣಕುಮಾರ ಮತ್ತು ಪ್ರೊಸೆಸಿಂಗ್‌ ವಿಭಾಗದ ಪ್ರಧಾನ ವ್ಯವಸ್ಥಾಪಕ ವಿನೋದಕುಮಾರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಆರಂಭಿಸಿರುವುದಾಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ರಾಮರಾಜನ್‌ ಹೇಳಿದರು.

ದುರಂತದ ಬಳಿಕ ಜೀವ ಉಳಿಸಲು ಗ್ರೀನ್‌ ಕಾರಿಡಾರ್‌ ನಿರ್ಮಿಸಿ, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದರೂ ಏಳು ಜನ ಕಾರ್ಮಿಕರು ಮೃತಪಟ್ಟಿದ್ದಾರೆ. ಮೃತರ ಕುಟುಂಬಗಳಿಗೆ ನ್ಯಾಯ ಸಿಗಬೇಕು. ಕಾನೂನು ರೀತಿ, ಮಾನವೀಯತೆ ರೀತಿಯಲ್ಲಿ ಕೆಲಸ ಮಾಡುತ್ತೇವೆ. ಕಾರ್ಖಾನೆಯ ಮಾಲೀಕರ ಬಗ್ಗೆ ಇನ್ನು ವಿಚಾರಣೆ ನಡೆಸಿಲ್ಲ. ಅಲ್ಲದೇ, ಈವರೆಗೂ ಯಾರನ್ನೂ ಬಂಧಿಸಲಾಗಿಲ್ಲ ಎಂದು ತಿಳಿಸಿದರು.

-----

ಬಾಕ್ಸ್...

ಮೂವರ ವಿರುದ್ಧ ಪ್ರಕರಣ ದಾಖಲು

ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್‌ ಸ್ಫೋಟ ಪ್ರಕರಣದ ಸಂಬಂಧ ಕಾರ್ಖಾನೆ ತಾಂತ್ರಿಕ ತಂಡದ ಮುಖ್ಯಸ್ಥರು ಸೇರಿ ಮೂವರ ವಿರುದ್ಧ ಮುರಗೋಡ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ರಾಮರಾಜನ್‌ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟೆಕ್ನಿಕಲ್‌ ವಿಭಾಗದ ಜನರಲ್ ಮ್ಯಾನೇಜರ್‌ ಬೆಂಗಳೂರಿನ ವಿ.ಸುಬ್ಬೂರ ತಿನಂ, ಇಂಜಿನಿಯರಿಂಗ್‌ ವಿಭಾಗದ ಪ್ರವೀಣಕುಮಾರ್‌ ಟಾಕಿ, ಪ್ರೊಸೆಸ್ಸಿಂಗ್‌ ವಿಭಾಗದ ಡೆಪ್ಯೂಟಿ ಜನರಲ್‌ ಮ್ಯಾನೇಜರ್‌ ಎಸ್‌.ಬಿನೋದ್‌ ಕುಮಾರ್‌ ವಿರುದ್ಧ ಪ್ರಕರಣ ದಾಖಲಾಗಿದೆ. ಕಾರ್ಖಾನೆಯ ಬಾಯ್ಲರ್‌ ಬಳಿಯ ಗೋಡೆಯಲ್ಲಿ ತಾಂತ್ರಿಕ ತೊಂದರೆ ಇತ್ತು. ಅದನ್ನು 8 ಕಾರ್ಮಿಕರು ಸರಿಪಡಿಸುತ್ತಿದ್ದ ವೇಳೆಯೇ ಸ್ಫೋಟಗೊಂಡಿದೆ. ಇದರಿಂದಾಗಿ ಸುಡುತ್ತಿದ್ದ ಮೊಲಾಸಿಸ್‌ ಕಾರ್ಮಿಕರ ಮೈಮೇಲೆ ಬಿದ್ದಿದೆ. ನಾಲ್ಕು ಮಹಡಿ ಅಂತರದಲ್ಲಿ ಈ ಘಟನೆ ಸಂಭವಿಸಿದೆ. 8 ಜನರ ಪೈಕಿ ಮೂವರು ಬುಧವಾರವೇ ಮೃತಪಟ್ಟಿದ್ದರು. ಗುರುವಾರ ಮತ್ತೆ ಐವರು ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಎಸ್ಪಿ ಕೆ.ರಾಮರಾಜನ್‌ ತಿಳಿಸಿದರು.