ಕಬ್ಬು ಸಾಗಣೆಗೆ ಕಾರ್ಖಾನೆ ಅಡ್ಡಿ: ಬೆಳೆಗಾರರ ಆಕ್ರೋಶ

| Published : Mar 15 2024, 01:21 AM IST

ಸಾರಾಂಶ

ಮಳೆ ಅಭಾವದಿಂದ ಜಲಾಶಯದಲ್ಲಿ ನೀರಿಲ್ಲದೆ ನಾಲೆಗಳಲ್ಲಿ ನೀರು ಹರಿಯದ ಪರಿಣಾಮ ಬೆಳೆದು ನಿಂತಿರುವ ಕಬ್ಬು ಒಣಗುತ್ತಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಕಬ್ಬು ಉರುವಲಾಗಿ ನಷ್ಟವಾಗುತ್ತದೆ. ಹಾಗಾಗಿ ಕಬ್ಬನ್ನು ಅವಧಿಪೂರ್ವವಾಗಿ ಕಟಾವು ಮಾಡಿ ಬೇರೆ ಕಾರ್ಖಾನೆಗೆ ಸಾಗಾಣಿಕೆ ಮಾಡಲು ರೈತರು ಮುಂದಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ನೀರಿಲ್ಲದೆ ಗದ್ದೆಯಲ್ಲೇ ಒಣಗುತ್ತಿರುವ ಕಬ್ಬು, ನಷ್ಟದಿಂದ ಪಾರಾಗಲು 8-9 ತಿಂಗಳ ಕಬ್ಬನ್ನು ಕಡಿದು ಬೇರೆ ಕಾರ್ಖಾನೆಗೆ ಸಾಗಿಸಲು ಸ್ಥಳೀಯ ಕಾರ್ಖಾನೆಗಳ ಅಡ್ಡಗಾಲು, ಕಾರ್ಖಾನೆ ಆರಂಭವಾಗುವವರೆಗೆ ಕಬ್ಬನ್ನು ಉಳಿಸಿಕೊಳ್ಳುವುದು ರೈತರಿಗೆ ದೊಡ್ಡ ಸವಾಲು, ಸ್ಥಳೀಯ ಕಾರ್ಖಾನೆ ಅಡ್ಡಿಯಿಂದ ಕಬ್ಬನ್ನು ಪಡೆಯದೆ ಬೇರೆ ಜಿಲ್ಲೆಯ ಕಾರ್ಖಾನೆ. ಬರಗಾಲದಲ್ಲಿ ಕಬ್ಬು ಬೆಳೆಗಾರರಿಗೆ ಆರ್ಥಿಕ ಸಂಕಷ್ಟದ ಬರೆ.

ಇದು ತಾಲೂಕಿನ ಹಲವು ಗ್ರಾಮಗಳ ರೈತರು ಎದುರಿಸುತ್ತಿರುವ ಸಂಕಷ್ಟ ಪರಿಸ್ಥಿತಿ. ಮಳೆ ಅಭಾವದಿಂದ ಕಳೆದ ವರ್ಷ ಕೆಆರ್‌ಎಸ್‌ ಭರ್ತಿಯಾಗಲಿಲ್ಲ. ಮಳೆಯನ್ನು ನೆಚ್ಚಿಕೊಂಡು ಬೆಳೆ ಬೆಳೆದ ರೈತರು ಈಗ ಪರದಾಡುತ್ತಿದ್ದಾರೆ. ನಷ್ಟದ ಸುಳಿಗೆ ಸಿಲುಕುವ ಆತಂಕ ಎದುರಿಸುತ್ತಿದ್ದಾರೆ. ಇಂತಹ ಸಮಯದಲ್ಲಿ 8-9 ತಿಂಗಳ ಕಬ್ಬನ್ನು ಅರೆಯುವುದಕ್ಕೆ ನೆರೆ ಜಿಲ್ಲೆಯ ಬನ್ನಾರಿ ಷುಗರ್ಸ್ ರೆಡಿಯಾಗಿದ್ದರೂ ಸ್ಥಳೀಯ ಕಾರ್ಖಾನೆಯವರು ಅಡ್ಡಿಪಡಿಸುತ್ತಿರುವುದು ರೈತರನ್ನು ದಿಕ್ಕೆಡಿಸಿದೆ.

ನೀರಿಲ್ಲದೆ ಗದ್ದೆಯಲ್ಲಿ ಒಣಗುತ್ತಿರುವ ಕಬ್ಬನ್ನು ಕಡಿದು ಮದ್ದೂರು, ಮಂಡ್ಯ, ಪಾಂಡವಪುರ, ಶ್ರೀರಂಗಪಟ್ಟಣ ವ್ಯಾಪ್ತಿಯ ಕಬ್ಬು ಬೆಳೆಗಾರರು ನಂಜನಗೂಡಿನ ಬನ್ನಾರಿ ಷುಗರ್‌ ಕಾರ್ಖಾನೆಗೆ ಸಾಗಿಸುತ್ತಿದ್ದಾರೆ. ಮದ್ದೂರು ಹಾಗೂ ಮಳವಳ್ಳಿ ಭಾಗದ ಕಬ್ಬು ಬೆಳೆಯನ್ನು ಸಾಗಿಸಲು ಕೆ.ಎಂ.ದೊಡ್ಡಿಯ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಯವರು ಅಡ್ಡಿಪಡಿಸುತ್ತಿರುವುದಕ್ಕೆ ಬೆಳೆಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಳೆ ಅಭಾವದಿಂದ ಜಲಾಶಯದಲ್ಲಿ ನೀರಿಲ್ಲದೆ ನಾಲೆಗಳಲ್ಲಿ ನೀರು ಹರಿಯದ ಪರಿಣಾಮ ಬೆಳೆದು ನಿಂತಿರುವ ಕಬ್ಬು ಒಣಗುತ್ತಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಕಬ್ಬು ಉರುವಲಾಗಿ ನಷ್ಟವಾಗುತ್ತದೆ. ಹಾಗಾಗಿ ಕಬ್ಬನ್ನು ಅವಧಿಪೂರ್ವವಾಗಿ ಕಟಾವು ಮಾಡಿ ಬೇರೆ ಕಾರ್ಖಾನೆಗೆ ಸಾಗಾಣಿಕೆ ಮಾಡಲು ರೈತರು ಮುಂದಾಗಿದ್ದಾರೆ.

ಆದರೆ, ಕಬ್ಬನ್ನು ಒಪ್ಪಿಗೆ ಪಡೆದುಕೊಂಡಿರುವ ಚಾಂಷುಗರ್ ಕಾರ್ಖಾನೆಯವರು ಕಬ್ಬು ಸಾಗಣೆಗೆ ಅಡ್ಡಿಪಡಿಸುತ್ತಿದ್ದಾರೆ. ಜೂನ್, ಜುಲೈನಲ್ಲಿ ಕಬ್ಬು ಅರೆಯುವಿಕೆ ಪ್ರಾರಂಭಿಸಲಾಗುವುದು. ಆ ಸಂದರ್ಭದಲ್ಲಿ ಕಬ್ಬು ಕಟಾವು ಮಾಡುವಂತೆ ರೈತರ ಮೇಲೆ ಒತ್ತಡ ಹೇರುತ್ತಿದ್ದಾರೆ. ನೀರಿಲ್ಲದೆ ಒಣಗುತ್ತಿರುವ ಕಬ್ಬು ಕಾರ್ಖಾನೆ ಆರಂಭವಾಗುವವರೆಗೆ ಉಳಿಯುವುದು ಅಸಾಧ್ಯವಾಗಿದೆ. ಕಬ್ಬು ಬೆಳೆದು ನಷ್ಟಕ್ಕೆ ಅನುಭವಿಸಬೇಕಾದ ಆತಂಕ ರೈತರಲ್ಲಿ ಮನೆಮಾಡಿದೆ.

ಈಗಾಗಲೇ ತಾಲೂಕಿನ ತಳಗವಾದಿ, ದೇವಿಪುರ, ನೆಲಮಾಕನಹಳ್ಳಿ ಇತರ ಗ್ರಾಮಗಳಲ್ಲಿ ಕಬ್ಬು ಕಟಾವು ಮಾಡಿದ್ದು, ಸಾಗಾಣಿಕೆಗೆ ಅವಕಾಶ ಮಾಡಿಕೊಡದ ಹಿನ್ನೆಲೆಯಲ್ಲಿ ಮೂರು ನಾಲ್ಕು ದಿನಗಳಿಂದ ದಿನಗಳಿಂದ ಒಣಗಿ ಹಾಳಾಗುತ್ತಿದೆ.

ಬರ ಪರಿಸ್ಥಿತಿಯಿಂದ ನೀರಿಲ್ಲದೆ ಒಣಗಿರುವ ಕಬ್ಬು ಕಟಾವು ಮಾಡಿ ನಂಜನಗೂಡಿನ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಗೆ ಸರಬರಾಜು ಮಾಡಲು ಅವಕಾಶ ಮಾಡಿಕೊಡುವಂತೆ ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಂಚಾಲಕ ಎನ್. ಎಲ್. ಭರತ್ ರಾಜ್ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

ತಾಲೂಕಿನ ಹಲವು ಗ್ರಾಮಗಳಲ್ಲಿ ಕಟಾವಾದ ಕಬ್ಬು ಒಣಗಿ ಹಾಳಾಗುತ್ತಿದೆ. ತಳಗವಾದಿ ಗ್ರಾಮದ ರೈತ ಹನುಮಂತು ಕಟಾವು ಮಾಡಿರುವ ಕಬ್ಬು 25 ಟನ್ ಒಣಗಿಹೋಗಿದೆ. ಹೀಗೆ ಹಾಳಾದ ಕಬ್ಬಿಗೆ ನಷ್ಟ ತುಂಬಿಕೊಡುವವರು ಯಾರು? ಇದೇ ಪರಿಸ್ಥಿತಿಯನ್ನು ಹಲವಾರು ರೈತರು ಎದುರಿಸುತ್ತಿದ್ದಾರೆ ಎಂದು ದೂರಿದರು.

ಕಬ್ಬನ್ನು ಈಗಲೇ ಅರೆಯುವುದಕ್ಕೆ ಆರಂಭಿಸಿ. ಇಲ್ಲವೇ ಎಕರೆಗೆ ಐವತ್ತು ಟನ್ ಗೆ ಹಣ ನೀಡುವ ಭರವಸೆ ಕೊಡಿ. ಇಲ್ಲವೇ ಬೆಳೆ ರಕ್ಷಣೆಗೆ ನೀರು ಕೊಡಿಸಲಿ. ಅಲ್ಲಿಯ ತನಕ ನಾವು ಕಾಯುತ್ತೇವೆ. ಇಲ್ಲವಾದರೆ ಬೇರೆ ಕಾರ್ಖಾನೆಗೆ ಸಾಗಿಸುವುದಕ್ಕೆ ಅವಕಾಶ ಕೊಡಿ ಎಂದು ರೈತರು ಪಟ್ಟು ಹಿಡಿದಿದ್ದಾರೆ.

ಬನ್ನಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯೂ ಸ್ಥಗಿತ:

ಚಾಂಷುಗರ್‌ ಕಾರ್ಖಾನೆಯವರ ವಿರೋಧದಿಂದ ಇದೀಗ ಕಬ್ಬು ಅರೆಯುತ್ತಿದ್ದ ಬನ್ನಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯೂ ಸಹ ಕಾರ್ಖಾನೆಯನ್ನು ಸ್ಥಗಿತಗೊಳಿಸಿದೆ. ಸ್ಥಳೀಯ ರೈತರಿಂದ ಕಬ್ಬು ಖರೀದಿಸುವುದಕ್ಕೆ ಹಿಂದೇಟು ಹಾಕುತ್ತಿದೆ. ಇದರಿಂದ ಕಬ್ಬು ಕಡಿದಿರುವ ರೈತರು ಮತ್ತೊಂದು ರೀತಿಯ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಕೂಡಲೇ ಜಿಲ್ಲಾಡಳಿತ ಮಧ್ಯಪ್ರವೇಶಿಸಿ ಚಾಲ್ತಿಯಲ್ಲಿರುವ ಕಾರ್ಖಾನೆಗೆ ಕಡಿದಿರುವ ಕಬ್ಬು ಸಾಗಿಸುವುದು ಸೇರಿ ಎಂಟ್ಹತ್ತು ತಿಂಗಳಾಗಿರುವ ಕಬ್ಬು ಬೆಳೆ ಎಷ್ಟಿದೆ ಎಂಬ ಬಗ್ಗೆ ಸರ್ವೇ ಮಾಡಿಸಿ ಅದರ ವರದಿಯನ್ನು ಆಧರಿಸಿ ರೈತರಿಗೆ ಕಟಾವು ಮಾಡಿಕೊಳ್ಳಲು ಯಾವುದೇ ಅಡ್ಡಿ ಮಾಡದಂತೆ ಕಾರ್ಖಾನೆಗೆ ನಿರ್ದೇಶನ ನೀಡಬೇಕೆಂದು ಒತ್ತಾಯಿಸಿದ್ದಾರೆ.