ತುಂಗಭದ್ರ ನದಿ ಈಗ ಚರಂಡಿಯಾಗಿ ಪರಿವರ್ತನೆ ಆಗುತ್ತಿದೆ
ಕೊಪ್ಪಳ: ಜನರೇ ಇಲ್ಲದ ದೇವರನ್ನು ತೆಗೆದುಕೊಂಡು ಏನ ಮಾಡಬೇಕು, ದೇವರು ಸಮೃದ್ಧ ಆಗುವ ಸಮಯದಲ್ಲಿ ಭಕ್ತರು ಸ್ಮಶಾನದ ಕಡೆಗೆ ಸಾಗಿದ್ದಾರೆ, ಇಲ್ಲಿನ ಕಾರ್ಖಾನೆ ಕೊಳವೆಗಳು ಫಿರಂಗಿಗಳಾಗಿವೆ ಎಂದು ಹಿರಿಯ ಚಿಂತಕ ರಹಮತ್ ತರೀಕೆರೆ ಅಭಿಪ್ರಾಯ ಪಟ್ಟರು.
ಅವರು ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕಾಷಣಾ ವೇದಿಕೆ ಜಂಟಿ ಕ್ರಿಯಾ ವೇದಿಕೆ ನಡೆಸುತ್ತಿರುವ ಅನಿರ್ದಿಷ್ಟ ಧರಣಿಯ ೬೧ನೇ ದಿನದ ಹೋರಾಟ ಬೆಂಬಲಿಸಿ ಮಾತನಾಡಿದರು.ತುಂಗಭದ್ರ ನದಿ ಈಗ ಚರಂಡಿಯಾಗಿ ಪರಿವರ್ತನೆ ಆಗುತ್ತಿದೆ, ಇಲ್ಲಿಂದ ಜಿಂದಾಲ್ ವರೆಗೆ ೭೦ ಕಿಮೀ ಅಪಾಯಕಾರಿ ಮಾಲಿನ್ಯದ ಕಾರಿಡಾರ್ ಆಗಿದೆ, ಅದು ಜಗತ್ತಿನ ಅತ್ಯಂತ ಕೆಟ್ಟ ಸ್ಥಳವಾಗಿ ಪರಿವರ್ತನೆ ಆಗುತ್ತಿದೆ. ಕಂಪನಿ ಮತ್ತು ಅವರ ಪರವಾಗಿರುವ ಜನ ಶತ್ರುಗಳನ್ನು ನಮ್ಮ ನಡುವೆ ಹುಟ್ಟು ಹಾಕಿರುವದು ದೊಡ್ಡ ನೋವಿನ ಸಂಗತಿ.
ಸರ್ಕಾರಗಳೇ ಜನರ ಮೇಲೆ ಯುದ್ಧ ಸಾರಿದ ಹಾಗಿದೆ ಇಲ್ಲಿನ ಪರಿಸ್ಥಿತಿ. ಆದ್ದರಿಂದ ಇದು ಎಲ್ಲ ಜನರ ಹೋರಾಟ ಆಗಬೇಕಿದೆ, ಅದರ ವಿರುದ್ಧ ಹೋರಾಡಬೇಕಿದೆ. ಕೊಪ್ಪಳದ ಗವಿಮಠದ ಜಾತ್ರೆಯೂ ಸಹ ಜನರ ಪರ ನಿಲ್ಲಬೇಕು, ಇಲ್ಲಿನ ಧೂಳು, ಹೊಗೆ, ವಿಷಾನಿಲದ ವಿರುದ್ಧದ ಹೋರಾಟವಾಗಬೇಕಿದೆ. ತಮಗೆ ಕೊಪ್ಪಳದ ಕಾರ್ಖಾನೆ ಕೊಳವೆ ಇಲ್ಲಿನ ಜನರನ್ನು ಕೊಲ್ಲುವ ಫಿರಂಗಿಗಳ ರೀತಿಯಲ್ಲಿ ಕಾಣುತ್ತಿವೆ, ಇದು ಬದುಕಿನ ಹಕ್ಕಿನ ಹೋರಾಟವಾಗಿದೆ ಎಂದರು.ಶಾಸಕ, ಸಂಸದರ ನಿಲುವು ಸ್ಪಷ್ಟವಾಗಲಿ:
ಯುವ ರೈತ ಗವಿಸಿದ್ದಪ್ಪ ಪುಟಗಿ ಮಾತನಾಡಿ, ಈಗಾಗಲೇ ಇಲ್ಲಿ ಕೃಷಿ ಇಲಾಖೆ ಬೆಳೆ ಬೆಳೆಯಬೇಡಿ ಅನ್ನುತ್ತಿವೆ, ತೋಟಗಾರಿಕೆ ನಿಂತು ಹೋಗಿದೆ ಪಶುಸಂಗೋಪನೆ ಇಲಾಖೆ ದನಕರು ಸಾಕಬೇಡಿ ಎಂದಿದ್ದಾರೆ, ಇಲಾಖೆಗಳು ಇದನ್ನು ಬಫರ್ ಜೋನ್ ಎಂದರೂ ಸಹ ಅಲ್ಲಿ ಗಿಡ ಬೆಳೆಯಲ್ಲ. ಅನೇಕ ಅಧಿಕಾರಿಗಳು ಕಾರ್ಖಾನೆ ಪರವಾಗಿ ಕೆಲಸ ಮಾಡುತ್ತಿದ್ದಾರೆ, ಇಲ್ಲಿ ಕ್ಯಾನ್ಸರ್ ನಿಂದ ಈ ವರ್ಷ ನಾಲ್ಕು ಜನ ಸತ್ತಿದ್ದಾರೆ ಆದರೆ ಇಲ್ಲಿ ಅಧ್ಯಯನ ಮಾಡುವ ಸಂಸ್ಥೆಗಳು ಮತ್ತು ಸಮಿತಿಗಳು ಕೇವಲ ಕಾರ್ಖಾನೆ ಪರವಾಗಿ ಸೂಟ್ ಕೇಸಿಗೆ ಕೆಲಸ ಮಾಡುತ್ತಿರುವದು ಸ್ಪಷ್ಟ. ನದಿ ಸಂರಕ್ಷಣೆ ಕೇವಲ ನಾಟಕ, ಇಲ್ಲಿ ಎಲ್ಲವೂ ಹಾಳಾಗಿದೆ ಎಂದರು.ಸಂಚಾಲಕ ಮಂಜುನಾಥ ಜಿ. ಗೊಂಡಬಾಳ ಮಾತನಾಡಿ, ಕಾರ್ಖಾನೆ ವಿರುದ್ಧದ ಈ ಹೋರಾಟದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪಡೆದ ನಾಲ್ಕು ದಿಗ್ಗಜರಾದ ಎಚ್.ಎಸ್. ಪಾಟೀಲ್, ಪ್ರೊ. ಅಲ್ಲಮಪ್ರಭು ಬೆಟ್ಟದೂರು, ಎ.ಎಂ.ಮದರಿ ಮತ್ತು ಅತಿಥಿ ರಹಮತ್ ತರೀಕೆರೆ ಇರುವ ವೇದಿಕೆಯಾಗಿದ್ದು ಸರ್ಕಾರ ಮತ್ತು ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಇದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕಿದೆ ಎಂದರು.
ಧರಣಿಯಲ್ಲಿ ಪುಷ್ಪಲತಾ ಏಳುಭಾವಿ, ಬಿ.ಜಿ. ಕರಿಗಾರ, ಸಾವಿತ್ರಿ ಮುಜುಮದಾರ್, ಸಿ.ವಿ. ಜಡಿಯವರ, ಎಸ್.ಬಿ. ರಾಜೂರು, ಗಂಗಾಧರ ಖಾನಾಪೂರ, ರವಿ ಕಾಂತನವರ, ಕವಿ ಮಹೇಶ ಮನ್ನಾಪುರ, ಎಂ.ಡಿ.ಪಾಟೀಲ್, ಶಂಭುಲಿಂಗಪ್ಪ ಆರ್.ಹರಗೇರಿ, ಮಂಜುನಾಥ್ ಆಟೋ, ಮಂಜುನಾಥ್ ಕೊಂಡನಹಳ್ಳಿ, ಶಾಂತಯ್ಯ ಅಂಗಡಿ, ಯಲ್ಲಪ್ಪ ಕೋಳೂರು, ಎಸ್. ಮಹಾದೇವಪ್ಪ ಮಾವಿನಮಡು, ಈರಯ್ಯಸ್ವಾಮಿ ಸಾಲಿಮಠ, ಗೀತಾ ಭೋವಿ, ಸದಾಶಿವ ಪಾಟೀಲ್, ರಮೇಶ ಡಂಬ್ರಳ್ಳಿ ಕುಣಿಕೇರಿ, ರಮೇಶ ಕೋಳೂರು, ಶಿವಪ್ಪ ಜಲ್ಲಿ ಬಸವರಾಜ್ ನರೇಗಲ್, ಪಾಮಣ್ಣ ಕೆ ಮಲ್ಲಾಪುರ, ಮಖ್ಬುಲ್ ರಾಯಚೂರು ಪಾಲ್ಗೊಂಡರು.ಇದಕ್ಕೂ ಮೊದಲು ಬೆಳಗ್ಗೆ ಖ್ಯಾತ ವಿಮರ್ಶಕ, ಸಂಶೋಧಕ ರಹಮತ್ ತರೀಕೆರೆ ಜಂಟಿ ಕ್ರಿಯಾ ವೇದಿಕೆಯ ಪ್ರಧಾನ ಸಂಚಾಲಕರು ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕ ಮಲ್ಲಿಕಾರ್ಜುನ ಬಿ.ಗೋನಾಳ, ಪುಸ್ತಕ ಪ್ರಕಾಶ ಡಿ.ಎಂ.ಬಡಿಗೇರ, ಮಾಲಾ ಬಡಿಗೇರ ಕಾರ್ಖಾನೆಗಳಿಂದ ಬಾಧಿತವಾದ ಗಿಣಿಗೇರಿ, ಅಲ್ಲಾನಗರ, ಹಿರೇಬಗನಾಳ, ಚಿಕ್ಕಬಗನಾಳ, ಕುಣಿಕೇರಿ, ಕುಣಿಕೇರಿ ತಾಂಡಾ, ಹಾಲವರ್ತಿ ಗ್ರಾಮಗಳಿಗೆ ವಾಸ್ತವ ಸ್ಥಿತಿ ವೀಕ್ಷಿಸಿದರು.