ಕಾರ್ಖಾನೆಗಳ ಮಾಲಿನ್ಯದ ವಿಷಯದಲ್ಲಿ ಸಂಸದ ರಾಜಶೇಖರ ಹಿಟ್ನಾಳ ಹೇಳಿಕೆ ಕೊಡುವುದನ್ನು ನಿಲ್ಲಿಸಲಿ. ಕಳೆದ ಎರಡು ವರ್ಷಗಳಲ್ಲಿ ಸಮಸ್ಯೆ ಬಗೆಹರಿಸಲು ತಾವು ಕೈಗೊಂಡ ಕ್ರಮಗಳನ್ನು ಸ್ಪಷ್ಟಪಡಿಸಲಿ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ್ ಆಗ್ರಹಿಸಿದ್ದಾರೆ.

ಕೊಪ್ಪಳ: ಕಾರ್ಖಾನೆಗಳ ಮಾಲಿನ್ಯದ ವಿಷಯದಲ್ಲಿ ಸಂಸದ ರಾಜಶೇಖರ ಹಿಟ್ನಾಳ ಹೇಳಿಕೆ ಕೊಡುವುದನ್ನು ನಿಲ್ಲಿಸಲಿ. ಕಳೆದ ಎರಡು ವರ್ಷಗಳಲ್ಲಿ ಸಮಸ್ಯೆ ಬಗೆಹರಿಸಲು ತಾವು ಕೈಗೊಂಡ ಕ್ರಮಗಳನ್ನು ಸ್ಪಷ್ಟಪಡಿಸಲಿ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ್ ಆಗ್ರಹಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಜನರಿಗೆ ಬೇಡವಾದ ಕಾರ್ಖಾನೆಗಳು ಬೇಡ ಎಂಬುದು ಇಡೀ ಪ್ರಪಂಚಕ್ಕೆ ಗೊತ್ತಿದೆ. ಈ ಸತ್ಯ ತಿಳಿಯಲು ಸಂಸದರ ಹೇಳಿಕೆ ಅಗತ್ಯವಿಲ್ಲ. ಮಾಲಿನ್ಯಕರ ಕಾರ್ಖಾನೆಗಳನ್ನು ತೊಲಗಿಸುವಲ್ಲಿ ಸಂಸದರಾಗಿ ನೀವು ಏನು ಮಾಡಿದ್ದೀರಿ ಎಂಬುದನ್ನು ಹೇಳಿ. ಹೇಳಿಕೆ ಮತ್ತು ಹಾರಿಕೆಯ ಉತ್ತರ ಬಿಟ್ಟು ನೀವು ಏನೂ ಮಾಡಿಲ್ಲ ಎಂಬುದು ನಿಮ್ಮ ಆತ್ಮಸಾಕ್ಷಿಗೆ ಗೊತ್ತಿದೆ. ಧಾರ್ಮಿಕ ಮುಖಂಡರು ಈ ಜವಾಬ್ದಾರಿಯನ್ನು ನಿಮಗೆ, ಕೊಪ್ಪಳದ ಶಾಸಕರಿಗೆ ಮತ್ತು ನಿಮ್ಮ ಪಕ್ಷದ ಜನಪ್ರತಿನಿಧಿಗಳಿಗೆ ವಹಿಸಿದ್ದರು. ಆ ಜವಾಬ್ದಾರಿಯನ್ನು ಯಾವ ರೀತಿ ನಿಭಾಯಿಸಿದ್ದೀರಿ ಎಂದು ಹೇಳಿ ಎಂದು ಹೇಳಿದ್ದಾರೆ.

ಮುಕುಂದ ಸುಮಿ ಕಾರ್ಖಾನೆ ವಿಸ್ತರಣೆ ಬೇಡ ಎಂದು ಗಿಣಿಗೇರಿ ಜನ ಪ್ರತಿಭಟಿಸಿದರೂ ನೀವು ಸುಮ್ಮನಿದ್ದೀರಿ. ಕೊಪ್ಪಳದ ಪರಿಸರ ಇಲಾಖೆ ನಿಯಮಗಳನ್ನು ಗಾಳಿಗೆ ತೂರಿ ಆ ಕಂಪನಿಗೆ ಅನುಕೂಲ ಮಾಡಿಕೊಟ್ಟರೂ ನೀವು ಕಣ್ಮುಚ್ಚಿ ಕುಳಿತಿದ್ದೀರಿ. ಸಾರ್ವಜನಿಕ ಆಲಿಕೆ ಸಭೆಗೆ ತಮ್ಮನ್ನು ಆಹ್ವಾನಿಸಲಿಲ್ಲ, ಆ ವಿಷಯ ತಮಗೆ ತಿಳಿದೇ ಇಲ್ಲ ಎಂದು ಶಾಸಕರು ಸಾರ್ವಜನಿಕವಾಗಿಯೇ ಹೇಳಿದರೂ ನೀವು ಸುಮ್ಮನಿದ್ದೀರಿ. ಹೀಗಾಗಿ ಈ ವಿಷಯದಲ್ಲಿ ಮಾತನಾಡುವ ನೈತಿಕ ಹಕ್ಕನ್ನು ನೀವು ಕಳೆದುಕೊಂಡಿದ್ದೀರಿ ಎಂದು ಹೇಳಿದ್ದಾರೆ.

ನಿಮ್ಮ ನಿಷ್ಕ್ರಿಯತೆ ಗಮನಿಸಿ, ನಮ್ಮ ಪಕ್ಷ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಜತೆ ಸಂಪರ್ಕ ಸಾಧಿಸಿ, ಉನ್ನತ ಮಟ್ಟದ ಸಮಿತಿ ರಚನೆ ಆಗುವಂತೆ ನೋಡಿಕೊಂಡಿತು. ಆ ಸಮಿತಿ ಕಾರ್ಖಾನೆಗಳಿಗೆ ಭೇಟಿ ನೀಡಿ ಕೆಲವೊಂದು ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ನಿರ್ದೇಶಿಸಿತು. ಕನಿಷ್ಠ ಪಕ್ಷ ಆ ನಿರ್ದೇಶನಗಳನ್ನು ಪಾಲಿಸಲಾಗಿದೆಯೇ ಎಂಬುದನ್ನು ಗಮನಿಸಿ ಮತ್ತು ಆ ನಿರ್ದೇಶನಗಳನ್ನು ಪಾಲಿಸುವಂತೆ ಖಾಸಗಿ ಕಾರ್ಖಾನೆಗಳಿಗೆ ಆದೇಶ ನೀಡಿ. ಸಂಸದರಾಗಿ ನಿಮ್ಮ ಜವಾಬ್ದಾರಿಯನ್ನು ನಿಭಾಯಿಸಲು ಆಗದಿದ್ದರೆ ರಾಜೀನಾಮೆ ನೀಡಿ ಎಂದು ಆಗ್ರಹಿಸಿದ್ದಾರೆ.