ಬಾಕಿ ಹಣ ಪಾವತಿಸದಿದ್ದರೆ ಕಾರ್ಖಾನೆಗೆ ಮುತ್ತಿಗೆ: ರೈತರ ಎಚ್ಚರಿಕೆ

| Published : Mar 22 2024, 01:01 AM IST

ಬಾಕಿ ಹಣ ಪಾವತಿಸದಿದ್ದರೆ ಕಾರ್ಖಾನೆಗೆ ಮುತ್ತಿಗೆ: ರೈತರ ಎಚ್ಚರಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಮಾ.28ರೊಳಗೆ ಪ್ರಸಕ್ತ ಹಂಗಾಮಿನ ಬಿಲ್ ಹಾಗೂ ಹಳೇ ಬಾಕಿ ಪ್ರತಿಟನ್ ಕಬ್ಬಿನ ₹ 394 ಪಾವತಿಸದಿದ್ದರೆ ರೈತರೆಲ್ಲ ಸೇರಿ ಕಾರ್ಖಾನೆಗೆ ಮುತ್ತಿಗೆ ಹಾಕಿ ಪ್ರತಿಭಟಿಸುವುದಾಗಿ ರೈತರು ಗುರುವಾರ ಸ್ಥಳೀಯ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಗೆ ಎಚ್ಚರಿಕೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಎಂ.ಕೆ.ಹುಬ್ಬಳ್ಳಿ

ಮಾ.28ರೊಳಗೆ ಪ್ರಸಕ್ತ ಹಂಗಾಮಿನ ಬಿಲ್ ಹಾಗೂ ಹಳೇ ಬಾಕಿ ಪ್ರತಿಟನ್ ಕಬ್ಬಿನ ₹ 394 ಪಾವತಿಸದಿದ್ದರೆ ರೈತರೆಲ್ಲ ಸೇರಿ ಕಾರ್ಖಾನೆಗೆ ಮುತ್ತಿಗೆ ಹಾಕಿ ಪ್ರತಿಭಟಿಸುವುದಾಗಿ ರೈತರು ಗುರುವಾರ ಸ್ಥಳೀಯ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಗೆ ಎಚ್ಚರಿಕೆ ನೀಡಿದ್ದಾರೆ.

ಕಾರ್ಖಾನೆಗೆ ಕಬ್ಬು ಪೂರೈಸಿ ಮೂರ್ನಾಲ್ಕು ತಿಂಗಳು ಕಳೆದರೂ ಈವರೆಗೆ ಬಿಲ್‌ ಹಣ ಬಿಡುಗಡೆ ಮಾಡಿಲ್ಲ. ಕಾರ್ಮಿಕರ ವೇತನವನ್ನು ಸರಿಯಾಗಿ ನೀಡುತ್ತಿಲ್ಲ. ಡಿ.15ರ ತನಕ ಬಿಲ್ ಪಾವತಿಸಿ ಸುಮ್ಮನಾಗಿರುವ ಕಾರ್ಖಾನೆ ಆಡಳಿತ ಮಂಡಳಿಗೆ ರೈತರ ಕಷ್ಟ ಅರ್ಥವಾಗುತ್ತಿಲ್ಲ. ಮಾಡಿದ ಸಾಲ ರೈತರಿಗೆ ಭಾರವಾಗಿದೆ. ಜೀವನ ನಿರ್ವಹಣೆ ಕಷ್ಟಕರವಾಗಿದೆ ಎಂದು ಅಳಲು ತೋಡಿಕೊಂಡರು.

ಕಬ್ಬು ಪೂರೈಸಿದ 14 ದಿನಗಳ ಒಳಗೆ ರೈತರ ಕಬ್ಬಿನ ಬಿಲ್ ಹಣ ಪಾವತಿಸಬೇಕು. ತಡವಾದರೆ ಶೇ.15ರಷ್ಟು ಬಡ್ಡಿ ಸೇರಿಸಿ ಹಣ ನೀಡಬೇಕೆಂಬ ನಿಯಮವಿದೆ. ಆದರೆ, ಸರ್ಕಾರದ ನಿಯಮ ಗಾಳಿಗೆ ತೂರಿರುವ ಕಾರ್ಖಾನೆ ಆಡಳಿತ ಮಂಡಳಿ ರೈತರಿಗೆ ಅನ್ಯಾಯ ಮಾಡುತ್ತಿದೆ ಎಂದು ಆಕ್ರೋಶ ಹೊರಹಾಕಿದರು. ಪ್ರತಿವರ್ಷ ಶೇ.10ಕ್ಕೂ ಅಧಿಕ ರಿಕವರಿ ಬರುತ್ತಿದ್ದ ಮಲಪ್ರಭಾ ಸಕ್ಕರೆ ಕಾರ್ಖಾನೆಯ ರಿಕವರಿ ಈ ವರ್ಷ ಕೇವಲ 9.33ಕ್ಕೆ ಕುಸಿದಿದ್ದು ಹೇಗೆ?. ಇದರಲ್ಲಿ ಗೋಲಮಾಲ್ ನಡೆದಿದೆ. ರೈತರಿಗೆ ಟೋಪಿ ಹಾಕುವ ಕೆಲಸವನ್ನು ಆಡಳಿತ ಮಂಡಳಿ ಮಾಡುತ್ತಿದೆ. ಸಹಕಾರಿ ಕಾರ್ಖಾನೆಗೆ ಖಾಸಗಿ ಎಂಡಿ ನಿಯೋಜಿಸಿಕೊಂಡಿರುವ ಆಡಳಿತ ಮಂಡಳಿ, ಲಾಭಕ್ಕಿಂತ ಕಾರ್ಖಾನೆಗೆ ಹಾನಿಯನ್ನೇ ಮಾಡುತ್ತಿದೆ. ಹಾಗಾಗಿ ತಕ್ಷಣವೇ ಖಾಸಗಿ ಎಂಡಿ ತೆಗೆದುಹಾಕಿ ಸರ್ಕಾರಿ ಅಧಿಕಾರಿಯನ್ನು ನೇಮಿಸಲು ಇಲಾಖೆ ಅಧಿಕಾರಿಗಳು ಹಾಗೂ ಸರ್ಕಾರ ಕ್ರಮಕೈಗೊಳ್ಳಬೇಕು. ಸಕ್ಕರೆ ಮಾರಾಟ ಸೇರಿ, ಕಾರ್ಖಾನೆಯ ಸಂಪೂರ್ಣ ವ್ಯವಹಾರದ ತನಿಖೆಯಾಬೇಕೆಂದು ಆಗ್ರಹಿಸಿದರು. ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ ಮಾ.28ರಂದು ಕಾರ್ಖಾನೆಗೆ ಮುತ್ತಿಗೆ ಹಾಕುವುದಾಗಿ ರೈತರು ಎಚ್ಚರಿಕೆ ನೀಡಿದರು.

ಸಂಘದ ಉಪಾಧ್ಯಕ್ಷ ಮಡಿವಾಳಯ್ಯ ಹಿರೇಮಠ, ಪ್ರಧಾನ ಕಾರ್ಯದರ್ಶಿ ಮಂಜುನಾಥ ಹುದಲಿ, ಸಂಘದ ಜಿಲ್ಲಾ ಮುಖಂಡರಾದ ಲಕ್ಷ್ಮಣ ಪಾಟೀಲ, ಸಚೀನ ಗುಂಡಕಲ್, ವಿಠ್ಠಲ ತಳವಾರ, ಅಶೋಕ ಬಬ್ಲಿ, ದುಂಡಯ್ಯ ಪೂಜೇರ, ಮಂಜುನಾಥ ಮತ್ತಿಕೊಪ್ಪ, ನಾಸಿಕ್‌ ಕಲ್ಲೂರ, ವಿಠ್ಠಲ ಮತ್ತಿಕೊಪ್ಪ, ಮಡಿವಾಳಿ ಸಾಂಬ್ರಾಣಿ, ಅದೃಶ್ಯ ವಾಲಿಕಾರ ಸೇರಿದಂತೆ ರೈತರು ಇದ್ದರು.