ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮಗಳು ಅತ್ಯಗತ್ಯ ಮತ್ತು ಹೆಚ್ಚು ಪ್ರಯೋಜನಕಾರಿ. ಆಂಗ್ಲ ಭಾಷಾ ಅಧ್ಯಾಪಕರ ಭಾಷಾ ಬೋಧನೆಯನ್ನು ಪರಿಣಾಮಕಾರಿಯಾಗಿಸುವಲ್ಲಿ ಇವು ನೆರವಾಗುತ್ತವೆ ಎಂದು ಕೊಯಮತ್ತೂರಿನ ಭಾರತಿಯಾರ್ ವಿಶ್ವವಿದ್ಯಾನಿಲಯದ ಆಂಗ್ಲ ಮತ್ತು ವಿದೇಶಿ ಭಾಷೆಗಳ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಬಿ. ಪದ್ಮನಾಭನ್ ಹೇಳಿದರು.ನಗರದ ಊಟಿ ರಸ್ತೆಯಲ್ಲಿರುವ ಜೆಎಸ್‌ಎಸ್ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಕಾಲೇಜಿನ ಸ್ನಾತಕ ಹಾಗೂ ಸ್ನಾತಕೋತ್ತರ ಆಂಗ್ಲ ಭಾಷಾ ವಿಭಾಗಗಳು ಮತ್ತು ಐಕ್ಯೂಎಸಿ ಸಹಯೋಗದಲ್ಲಿ ಆಯೋಜಿಸಿರುವ ಮೂರು ದಿನಗಳ ಅಧ್ಯಾಪಕರ ಅಭಿವೃದ್ಧಿ ಕಾರ್ಯಾಗಾರವನ್ನು ಅವರು ಶನಿವಾರ ಉದ್ಘಾಟಿಸಿ ಮಾತನಾಡಿದರು.
ಉಪಕರಣಗಳ ಯುಗದಲ್ಲಿ ಭಾಷಾ ಶಿಕ್ಷಕರದ್ದು ನಿರ್ಣಾಯಕ ಪಾತ್ರವಿದೆ. ಆಂಗ್ಲ ಭಾಷಾ ಶಿಕ್ಷಣ ತಜ್ಞರು ಹೊಸ ಹೊಸ ವೃತ್ತಿಗಳಿಗೆ ಅನುಗುಣವಾಗಿ ವಿದ್ಯಾರ್ಥಿಗಳನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ. ಆಂಗ್ಲ ಭಾಷೆಯು ಅಂತಾರಾಷ್ಟ್ರೀಯ ಭಾಷೆಯಾಗಿದ್ದು, ಭಾಷಾ ಶಿಕ್ಷಕರು ಅಗತ್ಯಕ್ಕೆ ತಕ್ಕಂತೆ ಅವಶ್ಯಕ ಬದಲಾವಣೆಗಳನ್ನು ಮಾಡಿಕೊಳ್ಳುವುದರ ಮೂಲಕ ಪ್ರಸ್ತುತಕ್ಕೆ ಒಗ್ಗಿಕೊಳ್ಳಬೇಕು ಎಂದರು.ಕೊಯಮತ್ತೂರಿನ ಭಾರತಿಯಾರ್ ವಿವಿ ಆಂಗ್ಲ ಮತ್ತು ವಿದೇಶಿ ಭಾಷೆಗಳ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ವಿ. ಡೇವಿಡ್ ಅರ್ಪಿತ್ ರಾಜ್ ಮಾತನಾಡಿ, ಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮದ ಪ್ರಾಥಮಿಕ ಉದ್ದೇಶ ಜ್ಞಾನದ ಹಂಚಿಕೆಯಾಗಿದೆ. ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಶಕ್ತಿ ಶಿಕ್ಷಕರಿಗಿದ್ದು, ಅದನ್ನು ಪರಿಣಾಮಕಾರಿಯಾಗಿ ಮಾಡಲು ಕೆಲವು ಅಗತ್ಯ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ. ಸಾಂಬಶಿವಯ್ಯ ಮಾತನಾಡಿ, ನಿರಂತರವಾಗಿ ಶಿಕ್ಷಣದಲ್ಲಿ ಆಗುತ್ತಿರುವ ಬದಲಾವಣೆಗೆ ತಕ್ಕಂತೆ ಅಧ್ಯಾಪಕರ ಜ್ಞಾನದ ವಿಕಸನದ ಅಗತ್ಯವಿದೆ. ಪರಿಣಾಮಕಾರಿ ಬೋಧನೆಯು ಕೇವಲ ಜ್ಞಾನದ ಪ್ರಸಾರಕ್ಕಷ್ಟೇ ಸೀಮಿತವಾಗದೆ, ವಿದ್ಯಾರ್ಥಿಗಳಲ್ಲಿ ವಿಮರ್ಶಾತ್ಮಕ ಚಿಂತನೆಯನ್ನು, ಅವರ ಸಮಗ್ರ ಅಭಿವೃದ್ಧಿಯನ್ನು ರೂಪಿಸುವಲ್ಲಿ ನೆರವಾಗಬೇಕು ಎಂದು ಹೇಳಿದರು.ಪರಿಣಾಮಕಾರಿ ಬೋಧನೆ, ಶೈಕ್ಷಣಿಕ ಉತ್ಕೃಷ್ಟತೆ ಮತ್ತು ವಿದ್ಯಾರ್ಥಿಗಳು ಜಾಗತಿಕ ಮಟ್ಟದಲ್ಲಿ ಸಾರಥ್ಯ ವಹಿಸುವ ನಾಯಕತ್ವ ಗುಣ ಬೆಳೆಸಿಕೊಳ್ಳುವಂತೆ ಅಧ್ಯಾಪಕರನ್ನು ರೂಪಿಸಲು ಶಿಕ್ಷಣದಲ್ಲಿ ಆಂಗ್ಲ ಭಾಷಾ ಅಧ್ಯಾಪಕರಿಗೆ ಇಂತಹ ತರಬೇತಿ ಕಾರ್ಯಾಗಾರಗಳು ಅತ್ಯಗತ್ಯ ಎಂದರು.
ಸ್ನಾತಕ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಆರ್. ನಿವೇದಿತಾ, ಡಾ.ಎಂ.ಐ. ಆಯೇಷಾ ಇದ್ದರು. ಪ್ರಾಂಶುಪಾಲ ಡಾ.ಎಂ. ಪ್ರಭು ಸ್ವಾಗತಿಸಿದರು. ಸ್ನಾತಕ ಆಂಗ್ಲಭಾಷಾ ವಿಭಾಗದ ಕೆ.ಎನ್. ಮಂಜುಳಾ ಪ್ರಾರ್ಥಿಸಿದರು. ಸ್ನಾತಕೋತ್ತರ ವಿಭಾಗದ ಮುಖ್ಯಸ್ಥೆ ಡಾ. ಶೋಭಾ ವಂದಿಸಿದರು. ಸ್ನಾತಕ ವಿಭಾಗದ ಮುಖ್ಯಸ್ಥೆ ಪಿ. ದೀಪಾ ನಿರೂಪಿಸಿದರು.