ಮಾನವೀಯತೆ ಮೆರೆದ ಬಸ್‌ ಸಿಬ್ಬಂದಿಗೆ ಸನ್ಮಾನ

| Published : Aug 02 2024, 12:50 AM IST

ಸಾರಾಂಶ

ಬಸ್‌ ಸಿಬ್ಬಂದಿಯ ಮಾನವೀಯ ಸೇವೆಯನ್ನು ಜನರು ಪ್ರೋತ್ಸಾಹಿಸಿರುವುದು ಹೆಮ್ಮೆಯ ವಿಚಾರ ಎಂದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಚಲಿಸುತ್ತಿದ್ದ ಬಸ್ಸಿನಲ್ಲಿ ಎದೆನೋವಿಗೆ ಒಳಗಾಗಿ ಅಸ್ವಸ್ಥಳಾದ ವಿದ್ಯಾರ್ಥಿನಿಯನ್ನು ನೇರವಾಗಿ ಕಂಕನಾಡಿ ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿ ಮಾನವೀಯತೆ ಮೆರೆದ ರೂಟ್‌ ನಂಬರ್‌ 13ಎಫ್ ಕೃಷ್ಣ ಪ್ರಸಾದ್ ಟ್ರಾವೆಲ್ಸ್ ಚಾಲಕ ಗಜೇಂದ್ರ ಕುಂದರ್, ನಿರ್ವಾಹಕರಾದ ಸುರೇಶ್, ಮಹೇಶ್ ಅವರನ್ನು ದ.ಕ ಬಸ್ಸು ಮಾಲೀಕರ ಸಂಘದ ವತಿಯಿಂದ ಗುರುವಾರ ನಗರದಲ್ಲಿ ಸನ್ಮಾನಿಸಲಾಯಿತು.

ಸಂಘದ ಅಧ್ಯಕ್ಷ ಅಝೀಝ್‌ ಪರ್ತಿಪಾಡಿ ಮಾತನಾಡಿ, ಬಸ್ ಸಿಬ್ಬಂದಿಯ ಮಾನವೀಯ ಸೇವೆಗಳಿಗೆ ವರ್ಷಗಳ ಇತಿಹಾಸವಿದೆ. ಪ್ರತಿಯೊಂದು ಅಪಘಾತಗಳ ಸಂದರ್ಭದಲ್ಲಿಯೂ ಗಾಯಾಳುಗಳ ಆಸ್ಪತ್ರೆಗೆ ದಾಖಲಿಸುವುದು, ರಸ್ತೆ ಹೊಂಡಗಳ ಸರಿ ಮಾಡಿಕೊಂಡು, ಮರ ಕಡಿದು ಟ್ರಿಪ್ ಮಾಡಿದ ಇತಿಹಾಸವಿದೆ. ಗ್ರಾಮಾಂತರ ಭಾಗದಲ್ಲಿ ವಿಷದ ಹಾವು ಕಚ್ಚಿದ ರೋಗಿಯನ್ನು ಮಧ್ಯರಾತ್ರಿ ಆಸ್ಪತ್ರೆಗೆ ದಾಖಲಿಸಿದ ಚರಿತ್ರೆಯಿದೆ. ಇದೀಗ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ದಾಖಲಿಸಿದ ಮಾನವೀಯ ಸೇವೆಗೆ ಸಾರ್ವಜನಿಕವಾಗಿ ಸಿಕ್ಕಿರುವ ಪ್ರೋತ್ಸಾಹ ಪ್ರಶಂಸನೀಯ. ಈ ಮಾನವೀಯ ಸೇವೆ ಎಲ್ಲರಿಗೂ ಮಾದರಿ ಎಂದು ಹೇಳಿದರು‌.

ಬೆಳ್ತಂಗಡಿ, ಪುತ್ತೂರು, ಕಡಬ, ಸೋಮಂತ್ತಡ್ಕ ಭಾಗಗಳಲ್ಲಿ ಬಸ್‌ಗಳಿಲ್ಲದ ಕುರಿತು ಬೇಡಿಕೆಯಿ ಇದ್ದು, ಶೀಘ್ರವೇ ಅದನ್ನು ಸರಿಪಡಿಸುತ್ತೇವೆ ಎಂದರು.

ಸಂಘದ ಮಾಜಿ ಅಧ್ಯಕ್ಷ ದಿಲ್‌ರಾಜ್ ಆಳ್ವ ಮಾತನಾಡಿ, ಮಂಗಳೂರು ಖಾಸಗಿ ಬಸ್ ಸೇವೆಗೆ 100 ವರ್ಷಗಳ ಇತಿಹಾಸವಿದ್ದು, ತುಳುನಾಡಿನ ಜನತೆಯ ಪ್ರೋತ್ಸಾಹದಿಂದ ದೀರ್ಘಕಾಲದ ಉದ್ಯಮ ನಡೆಸಲು ಸಾಧ್ಯವಾಗಿದೆ. ಬಸ್‌ ಸಿಬ್ಬಂದಿಯ ಮಾನವೀಯ ಸೇವೆಯನ್ನು ಜನರು ಪ್ರೋತ್ಸಾಹಿಸಿರುವುದು ಹೆಮ್ಮೆಯ ವಿಚಾರ ಎಂದರು.

ಕಾರ್ಯದರ್ಶಿ ರಾಮಚಂದ್ರ ಪಿಲಾರ್ ಮಾತನಾಡಿ, ಬಸ್‌ ಸಿಬ್ಬಂದಿಯನ್ನು ಕರೆಸಿ ಸನ್ಮಾನಿಸಿರುವುದು ಇದೇ ಮೊದಲು. 6 ಕಿಮೀ ದೂರವನ್ನು ಕೇವಲ 6 ನಿಮಿಷದಲ್ಲಿ ಕ್ರಮಿಸಿ ಸಮಯಪ್ರಜ್ಞೆ, ಮಾನವೀಯತೆ ತೋರಿದ ಸಿಬ್ಬಂದಿ ಶ್ಲಾಘನಾರ್ಹರು ಎಂದು ಹೇಳಿದರು.

ಸಂಘದ ಉಪಾಧ್ಯಕ್ಷ ಕೆ.ರಾಮಚಂದ್ರ ನಾಯ್ಕ್, ಜತೆ ಕಾರ್ಯದರ್ಶಿ ರಾಜೇಶ್ ಟಿ., ಪ್ರಧಾನ ಮಾಜಿ ಅಧ್ಯಕ್ಷ ಜಯಶೀಲ ಅಡ್ಯಂತಾಯ, ಮಾಜಿ ಅಧ್ಯಕ್ಷ ನೆಲ್ಸನ್ ಪಿರೇರಾ, ಬಸ್ ಮಾಲೀಕ ಶ್ರವಣ್, ಮಾಜಿ ಪ್ರ.ಕಾರ್ಯದರ್ಶಿ ಸುಚೇತನ್ ಕಾವೂರು, ಚಂದ್ರಕಲಾ, ಮೋಹನ್ ಮೆಂಡನ್, ರಾಜೇಂದ್ರ ಶೆಟ್ಟಿ, ಸೇಸಪ್ಪ ಪೂಜಾರಿ, ಇಸ್ಮಾಯಿಲ್, ಅಬ್ಬಾಸ್ ಆಲಿ ಇದ್ದರು.