ಸಾರಾಂಶ
ದೊಡ್ಡಬಳ್ಳಾಪುರ: ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ಹಿನ್ನೆಲೆ ಮನನೊಂದ ವಿದ್ಯಾರ್ಥಿನಿಯೊಬ್ಬರು ನೀರಿನ ಹೊಂಡಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ರಾಗರಾಳ್ಳಗುಟ್ಟೆ ಬಳಿಯ ಕಲ್ಲುಕ್ವಾರಿಯ ಹೊಂಡದಲ್ಲಿ ನಡೆದಿದೆ. ಮೃತ ವಿದ್ಯಾರ್ಥಿನಿಯನ್ನು ರೂಪಶ್ರೀ(19) ಎಂದು ಗುರುತಿಸಲಾಗಿದ್ದು, ಮೆಳೇಕೋಟೆ ಮೂಲದ ಇವರು, ಗಡ್ಡಂಬಚ್ಚಹಳ್ಳಿಯಲ್ಲಿ ವಾಸವಾಗಿದ್ದರು. ಬುಧವಾರ ಬೆಳಗ್ಗೆ ಮನೆಯಿಂದ ಹೊರ ಹೋದ ರೂಪಶ್ರೀ ಸಂಜೆ ಎಷ್ಟು ಹೊತ್ತಾದರೂ ಮನೆಗೆ ಬರದಿದ್ದಾಗ ಆತಂಕಗೊಂಡ ಪೋಷಕರು ಅಂದು ರಾತ್ರಿಯೇ ಮಗಳು ಕಾಣೆಯಾಗಿರುವ ಬಗ್ಗೆ ದೊಡ್ಡಬಳ್ಳಾಪುರ ಮಹಿಳಾ ಠಾಣೆಗೆ ದೂರು ನೀಡಿದ್ದರು. ಆಕೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುವಾರ ಬೆಳಕಿಗೆ ಬಂದಿದೆ. ದ್ವಿತೀಯ ಪಿಯು ಫಲಿತಾಂಶದಲ್ಲಿ ಆಕೆ ಅನುತ್ತೀರ್ಣಳಾಗಿದ್ದು, ಖಿನ್ನತೆಗೆ ಒಳಗಾಗಿದ್ದಳು ಎನ್ನಲಾಗಿದ್ದು, ರಾಮಯ್ಯನಪಾಳ್ಯ ಸಮೀಪದ ರಾಗರಾಳ್ಳಗುಟ್ಟೆ ಕಲ್ಲುಕ್ವಾರಿಯಲ್ಲಿ ತುಂಬಿದ್ದ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.