ಸೋಲು ಮುಂದಿನ ವಿಜಯಕ್ಕೆ ಸೋಪಾನ

| Published : Dec 29 2023, 01:32 AM IST

ಸಾರಾಂಶ

ಪರೀಕ್ಷೆಗಳ ಪೂರ್ವ ತಯಾರಿಗಿಂತ ಮುಂಚೆ ಮಕ್ಕಳ ಮಾನಸಿಕ ಹಾಗೂ ದೈಹಿಕ ಉತ್ಸಾಹಕ್ಕೆ ಶಾಲಾ ಕ್ರೀಡಾಕೂಟಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಪೂರಕವಾಗಿವೆ.

ಕನ್ನಡಪ್ರಭ ವಾರ್ತೆ ತೇರದಾಳ(ರ-ಬ)

ಪರೀಕ್ಷೆಗಳ ಪೂರ್ವ ತಯಾರಿಗಿಂತ ಮುಂಚೆ ಮಕ್ಕಳ ಮಾನಸಿಕ ಹಾಗೂ ದೈಹಿಕ ಉತ್ಸಾಹಕ್ಕೆ ಶಾಲಾ ಕ್ರೀಡಾಕೂಟಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಪೂರಕವಾಗಿವೆ ಎಂದು ಶ್ರೀಸಿದ್ಧೇಶ್ವರ ವಿದ್ಯಾವರ್ದಕ ಸಂಘದ ಆಡಳಿತಾಧಿಕಾರಿ ಎಂ.ಬಿ. ಮಾಳೇದ ಹೇಳಿದರು.

ಪಟ್ಟಣದ ಶ್ರೀಸಿದ್ಧೇಶ್ವರ ಶಾಲೆಯ ಪ್ರಸಕ್ತ ಸಾಲಿನ ಸ್ನೇಹ ಸಮ್ಮೇಳನ ನಿಮಿತ್ತ ವಾರ್ಷಿಕ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ವಿಜಯಶಾಲಿಗಳಿಗೆ ಪ್ರಮಾಣ ಪತ್ರವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಗೆಲುವಿನಷ್ಟೇ ಸೋಲು ಸಹ ಮುಖ್ಯ. ಸೋಲಿನಿಂದ ಅಮೂಲ್ಯವಾದ ಅನುಭವ ದೊರಕುತ್ತದೆ. ಆದ್ದರಿಂದ ಸೋಲನ್ನೇ ಮುಂದಿನ ವಿಜಯಕ್ಕೆ ಸೋಪಾನ ಮಾಡಿಕೊಳ್ಳಬೇಕು. ಮನಸ್ಸಿದ್ದರೆ ಮಾತ್ರ ಮಾರ್ಗ ದೊರಕುತ್ತದೆ ಎನ್ನುವುದನ್ನು ಮರೆಯಬಾರದು ಎಂದರು.

ಪ್ರೌಢಶಾಲೆಯ ಚೇರಮನ್ ಎ.ಎಸ್. ಮುಕುಂದ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ಬಿ.ಟಿ. ಪತ್ತಾರ ಪ್ರಾಸ್ತಾವಿಕ ಮಾತನಾಡಿ, ಏಕಾಗ್ರತೆ, ನಿಷ್ಠೆ, ಪ್ರಾಮಾಣಿಕತೆ ಹಾಗೂ ಸದಾ ಪ್ರಯತ್ನಿಸುವ ಛಲ ಇವೆಲ್ಲವೂ ಇದ್ದರೆ ಮಾತ್ರ ಸಾಧಕರಾಗಲು ಸಾಧ್ಯವಾಗುತ್ತದೆ. ಆದ್ದರಿಂದ ಸ್ಪರ್ಧಾತ್ಮಕ ಇಂದಿನ ಕಾಲದಲ್ಲಿ ಉತ್ತಮ ಸ್ಪರ್ಧಾ ಮನೋಭಾವದಿಂದ ವಿದ್ಯಾರ್ಥಿಗಳು ಮುನ್ನುಗ್ಗುವ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂದರು.

ಸಂಸ್ಥೆಯ ಉಪಾಧ್ಯಕ್ಷ ಪಿ.ಬಿ. ಕಾಲತಿಪ್ಪಿ, ಖಜಾಂಚಿ ಎಂ.ಆರ್.ಮುಕರಿ, ಪರಪ್ಪ ಅಥಣಿ, ಪ್ರಾಥಮಿಕ ಶಾಲೆಯ ಚೇರಮನ್ ಎಂ.ಕೆ.ಮಿರ್ಜಿ, ಸಿಬ್ಬಂದಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಉತ್ಸಾಹದಿಂದ ಪ್ರಮಾಣ ಪತ್ರಗಳನ್ನು ಪಡೆದು ಸಂಭ್ರಮಿಸಿದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿ, ಸ್ವಾಗತ ಗೀತೆ ಹೇಳಿ, ಅವರೆ ಕಾರ್ಯಕ್ರಮ ನಿರ್ವಹಿಸಿದರು.