ಸಾರಾಂಶ
ಮೂಡುಬಿದಿರೆ ಆಳ್ವಾಸ್ (ಸ್ವಾಯತ್ತ)ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಶನಿವಾರ ಬಿಬಿಎ ವಿಭಾಗವು ರ‍್ಯಾಂಕ್ ಪಡೆದ ವಿದ್ಯಾರ್ಥಿಗಳ ಸನ್ಮಾನ ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಸಿತು. ಐಸಿಎಐ ಮಂಗಳೂರು ವಿಭಾಗದ ನಿಕಟಪೂರ್ವ ಅಧ್ಯಕ್ಷ ಎಸ್ ಎಸ್. ನಾಯಕ್ ಅತಿಥಿಯಾಗಿ ಪಾಲ್ಗೊಂಡರು.
ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಯಾವುದೇ ವಿದ್ಯಾರ್ಥಿ ಅನುಪಯುಕ್ತ ಅಲ್ಲ. ತಮ್ಮ ಜ್ಞಾನವನ್ನು ಸರಿಯಾಗಿ ಬಳಸಿಕೊಳ್ಳದಿರುವುದು ವೈಫಲ್ಯಕ್ಕೆ ಕಾರಣ ಎಂದು ಐಸಿಎಐ ಮಂಗಳೂರು ವಿಭಾಗದ ನಿಕಟಪೂರ್ವ ಅಧ್ಯಕ್ಷ ಎಸ್ ಎಸ್. ನಾಯಕ್ ಅಭಿಪ್ರಾಯಪಟ್ಟಿದ್ದಾರೆ.ಆಳ್ವಾಸ್ (ಸ್ವಾಯತ್ತ)ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಶನಿವಾರ ಬಿಬಿಎ ವಿಭಾಗವು ಹಮ್ಮಿಕೊಂಡ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳ ಸನ್ಮಾನ ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿ ಜೀವನದಲ್ಲಿ ಬರುವ ಎಲ್ಲಾ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದ ಅವರು, ರಸ್ತೆ ಪ್ರಯಾಣಕ್ಕೆ ಹಂಪ್ ತಡೆ, ಎಟಿಎಂ ಬಳಕೆಗೆ ಹಣದ ನಿರ್ಬಂಧ, ಪರೀಕ್ಷೆಗೆ ಸಮಯದ ನಿರ್ಬಂಧವಿರುತ್ತದೆ. ಆದರೆ ಯೋಜನೆಗಳಿಗೆ ಯಾವುದೇ ಅಡೆ ತಡೆಗಳಿರುವುದಿಲ್ಲ. ಭಾರತದಲ್ಲಿ ಉದ್ಯಮಿಗಳಾಗಲು ವಿಫುಲ ಅವಕಾಶವಿದ್ದು ವಿದ್ಯಾರ್ಥಿ ಜೀವನದಲ್ಲಿ ಅದರ ಕುರಿತು ಯೋಚನೆ ಮಾಡಬೇಕು ಎಂದರು.ಮಾನವ ಎಲ್ಲಾ ಸಂಕೋಲೆಗಳಿಂದ ಹೊರಬಂದು ಸ್ವತಂತ್ರವಾಗಿ ಬದುಕು ಕಟ್ಟಿಕೊಳ್ಳಲು ಶ್ರಮವಹಿಸಬೇಕು. ಇದಕ್ಕಾಗಿ ವಿದ್ಯಾರ್ಥಿ ನೆಲೆಯಲ್ಲಿ ಅನೇಕ ಸ್ವಯಂ ನಿಯಂತ್ರಣ ಹೊಂದಿರಬೇಕು. ಇಲ್ಲವಾದಲ್ಲಿ ಮೊಬೈಲ್, ಎಲೆಕ್ಟ್ರಾನಿಕ್ ವಸ್ತುಗಳ ಅಥವಾ ಮಾದಕ ವ್ಯಸನಕ್ಕೆ ದಾಸರಾಗುವ ಸಾಧ್ಯತೆ ಇದೆ ಎಂದರು.
ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಶಿಸ್ತು ಹಾಗೂ ಸ್ವಯಂ ನಿಯಂತ್ರಣವನ್ನು ಹೊಂದಬೇಕು ಎಂದರು.ಬಿಬಿಎ ರ‍್ಯಾಂಕ್ ವಿಜೇತ ಭೂಮಿಕಾ ಹಾಗೂ ಎಂ. ಸೌಮ್ಯ ಅವರನ್ನು ಸನ್ಮಾನಿಸಲಾಯಿತು.
ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಬಿಬಿಎ ವಿಭಾಗದ ಮುಖ್ಯಸ್ಥೆ ಸುರೇಖಾ ರಾವ್, ಉಪನ್ಯಾಸಕಿ ಪ್ರಜ್ಞಾ ಎಸ್. ಬಿ., ಹಾಗೂ ಅಂಬಿಕಾ ಕೆ ಇದ್ದರು.ವಿದ್ಯಾರ್ಥಿ ಶಶಾಂಕ್ ಸ್ವಾಗತಿಸಿದರು. ಜ್ಯೋತಿಕಾ ಅತಿಥಿಯನ್ನು ಪರಿಚಯಿಸಿದರು. ಮಾನ್ಯಶ್ರೀ ವಂದಿಸಿದರು. ರಂಜಿತಾ ಪ್ರಸಾದ್ ನಿರೂಪಿಸಿದರು.