ಸಾರಾಂಶ
ಕನ್ನಡಪ್ರಭ ವಾರ್ತೆ ಬಳ್ಳಾರಿ
ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸುವಲ್ಲಿ ವಿಫಲವಾಗಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಆಪಾದಿಸಿದ್ದಾರೆ.ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ದೆಹಲಿಯ ಕೇಜ್ರಿವಾಲ್ ಸರ್ಕಾರದ ಮಾದರಿ ಇಲ್ಲಿ ತಂದು ಚುನಾವಣೆಯಲ್ಲಿ ಗೆದ್ದರು. ಆದರೆ ಐದು ಗ್ಯಾರಂಟಿ ಯೋಜನೆಯನ್ನು ಸರಿಯಾಗಿ ಅನುಷ್ಠಾನ ಮಾಡುತ್ತಿಲ್ಲ. ಬೇರೆ ಬೇರೆ ಅನುದಾನ ಕಿತ್ತು ಹಾಕಿ ಪ್ಯಾಚ್ ಅಪ್ ಮಾಡಿ ಸರ್ಕಾರಿ ನಡೆಸುತ್ತಿದ್ದಾರೆ ಎಂದು ದೂರಿದರು.
ರಾಜ್ಯ ಸರ್ಕಾರದ ಧೋರಣೆಯಿಂದ ನಾಡಿನ ಜನರು ಈಗಾಗಲೇ ನಿರಾಸೆಗೊಂಡಿದ್ದಾರೆ. ಜನರಿಗೆ ತಾವು ಮಾಡಿದ ತಪ್ಪಿನ ಅರಿವಾಗಿದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಮ್ ಆದ್ಮಿ ಪಕ್ಷ ಮಾಡುತ್ತಿದೆ ಎಂದರು.ಆರೋಗ್ಯ ಮತ್ತು ಶಿಕ್ಷಣ ಆದ್ಯತೆ ನೀಡಬೇಕಿದೆ. ಯಾವುದೇ ಜಿಲ್ಲಾ ಆಸ್ಪತ್ರೆ, ತಾಲೂಕು ಆಸ್ಪತ್ರೆ, ಪ್ರಾಥಮಿಕ ಆಸ್ಪತ್ರೆ ಕೊಳೆತು ನಾರುತ್ತಿವೆ. ರೋಗಿಗಳು ಸರ್ಕಾರಿ ಆಸ್ಪತ್ರೆಯ ಹೋಗಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಗಮನಕ್ಕೆ ತರುವ ಕೆಲಸ ಮಾಡುತ್ತಿದ್ದೇವೆ ಎಂದರು.
ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಮಂಜುನಾಥ ಸೇರಿದಂತೆ ಪಕ್ಷದ ಮುಖಂಡರು ಇದ್ದರು.ಬಾಕ್ಸ್...
ಕಾವೇರಿಗಾಗಿ ಜೈಲಿಗೂ ಹೋಗಲು ಹಿಂಜರಿಯದಿರಿಕಾವೇರಿ ನೀರು ವಿಚಾರಕ್ಕೆ ಜೈಲಿಗೆ ಹೋಗಲು ಹಿಂಜರಿಯದಂತೆ ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಸಲಹೆ ನೀಡಿದ್ದಾರೆ.
ಪರೋಕ್ಷವಾಗಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಕುಟುಕಿದ ಅವರು, ಯಾವ ಯಾವೋ ವಿಚಾರಕ್ಕೆ ಜೈಲಿಗೆ ಹೋಗ್ತಿರಾ. ಕಾವೇರಿ ವಿಚಾರದಲ್ಲಿ ಜೈಲಿಗೆ ಹೋಗಲು ಆಗಲ್ವಾ ಎಂದು ಪ್ರಶ್ನಿಸಿದರು.ಲೂಟಿ, ದರೋಡೆ, ಭ್ರಷ್ಟಾಚಾರ ಮಾಡಿ ರಾಜಕಾರಣಿಗಳು ಜೈಲಿಗೆ ಹೋಗಿದ್ದಾರೆ. ಕಾವೇರಿ ನೀರು ನಿಲ್ಲಿಸಿ ಜೈಲಿಗೆ ಹೋಗಿ ಪಾಪ ತೊಳೆದಂತಾಗುತ್ತದೆ ಎಂದರಲ್ಲದೆ, ತಾಕತ್ತು- ದಮ್ಮು ಇದ್ದರೆ ಕಾವೇರಿ ನೀರು ನಿಲ್ಲಿಸಬೇಕು. ಸರ್ಕಾರ ಏನೇ ಆದರೂ ಕಾವೇರಿ ನೀರು ವಿಚಾರದಲ್ಲಿ ಕನ್ನಡಿಗರ ಪರ ನಿಲ್ಲುಬೇಕು ಎಂದು ಮುಖ್ಯಮಂತ್ರಿಗಳಿಗೆ ಸವಾಲು ಹಾಕಿದರು.
ಪ್ರಧಾನಿಗಳು ಕಾವೇರಿ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಬೇಕು. ಮೇಕೆದಾಟು ಯೋಜನೆ ಅನುಷ್ಠಾನವಾದರೆ 65 ಟಿಎಂಸಿ ನೀರು ಉಳಿಯುತ್ತದೆ. ಆದರೆ, ಸರ್ಕಾರ ಬಂದು ಮೂರು ತಿಂಗಳಾದರೂ ಯಾವ ಕ್ರಮಕ್ಕೂ ಮುಂದಾಗಿಲ್ಲ ಎಂದು ದೂರಿದರು.