ರೈತರು, ಜನ-ಜಾನುವಾರುಗಳಿಗೆ ಅನುಕೂಲವಾಗಲು ಕೆರೆ-ಕಟ್ಟೆಗಳನ್ನು ತುಂಬಿಸುವ ಉದ್ದೇಶದಿಂದ ನಾನು ಸಣ್ಣ ನೀರಾವರಿ ಸಚಿವನಾಗಿದ್ದಾಗ ನೂರಾರು ಕೋಟಿ ವೆಚ್ಚದಲ್ಲಿ ಬಳಘಟ್ಟ, ದುದ್ದ, ಶ್ಯಾದನಹಳ್ಳಿ, ಬಳೇಅತ್ತಿಗುಪ್ಪೆ, ಸುಂಕಾತೊಣ್ಣೂರು ಏತನೀರಾವರಿ ಯೋಜನೆ ಮಂಜೂರು ಮಾಡಿಸಲಾಗಿದೆ.
ಕನ್ನಡಪ್ರಭ ವಾರ್ತೆ ಪಾಂಡವಪುರ
ಸಣ್ಣ ನೀರಾವರಿ ಇಲಾಖೆಯಿಂದ ಮಂಜೂರಾಗಿರುವ ಏತನೀರಾವರಿ ಯೋಜನೆಗಳ ಮೂಲಕ ಸಮರ್ಪಕವಾಗಿ ಕೆರೆಕಟ್ಟೆಗಳಿಗೆ ನೀರು ತುಂಬಿಸುವಂತೆ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ಪಟ್ಟಣದ ಮಿನಿವಿಧಾನಸೌಧದ ತಹಸೀಲ್ದಾರ್ ಕಚೇರಿಗೆ ಭೇಟಿಕೊಟ್ಟ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಸಣ್ಣ ನೀರಾವರಿ ಇಲಾಖೆ ಇಇ ಇಮ್ರಾನ್ ಖಾನ್, ಎಇಇ ದರ್ಶನ್ ಅವರನ್ನು ತರಾಟಗೆ ತೆಗೆದುಕೊಂಡರು.
ರೈತರು, ಜನ-ಜಾನುವಾರುಗಳಿಗೆ ಅನುಕೂಲವಾಗಲು ಕೆರೆ-ಕಟ್ಟೆಗಳನ್ನು ತುಂಬಿಸುವ ಉದ್ದೇಶದಿಂದ ನಾನು ಸಣ್ಣ ನೀರಾವರಿ ಸಚಿವನಾಗಿದ್ದಾಗ ನೂರಾರು ಕೋಟಿ ವೆಚ್ಚದಲ್ಲಿ ಬಳಘಟ್ಟ, ದುದ್ದ, ಶ್ಯಾದನಹಳ್ಳಿ, ಬಳೇಅತ್ತಿಗುಪ್ಪೆ, ಸುಂಕಾತೊಣ್ಣೂರು ಏತನೀರಾವರಿ ಯೋಜನೆ ಮಂಜೂರು ಮಾಡಿಸಲಾಗಿದೆ ಎಂದರು.ಮಲ್ಲಿಗೆರೆ ಏತನೀರಾವರಿ ಯೋಜನೆಯನ್ನು ಮೇಲ್ದರ್ಜೆಗೇರಿಸಲಾಗಿದೆ. ಆದರೆ, ಕಳೆದ ಇತ್ತೀಚಿನ ಹಲವು ವರ್ಷಗಳಿಂದ ಸಮಪರ್ಕವಾಗಿ ಯೋಜನೆ ಮೂಲಕ ನೀರು ಕೆರೆಕಟ್ಟೆಗಳಿಗೆ ನೀರು ತುಂಬಿಸುವ ಕೆಲಸವಾಗಿಲ್ಲ. ಹಾಗಾಗಿ ನೀವು ಯೋಜನೆಗಳ ಬಗ್ಗೆ ನೀರು ತುಂಬಿಸುತ್ತಿರುವ ಬಗ್ಗೆ ದಾಖಲೆ ಸಮೇತ ಮಾಹಿತಿ ನೀಡಬೇಕು. ದುದ್ದ ಯೋಜನೆಯಲ್ಲಿ ಕೆರೆಕಟ್ಟೆ ನೀರು ತುಂಬಿಸುತ್ತಿರುವ ಮಾಹಿತಿ ನೀಡುವಂತೆ ಸೂಚಿಸಿದರು.
ಸುಂಕಾತೊಣ್ಣೂರು ಯೋಜನೆ ಮೂಲಕ ನೀರು ತುಂಬಿಸಲು ವಿಸಿ ನಾಲೆಯಿಂದ ಸ್ವಲ್ಪ ನೀರುಬಿಡಿಸಿಕೊಂಡು ಕೆರೆಕಟ್ಟೆಗಳಿಗೆ ನೀರು ತುಂಬಿಸಿ ನಮ್ಮ ನೀರು ತಮಿಳುನಾಡಿಗೆ ಹರಿದು ಹೋಗುತ್ತಿದೆ. ಅದರ ಬದಲು ನಮ್ಮ ಭಾಗದ ಸ್ವಲ್ಪ ಕೆರೆಕಟ್ಟೆಗಳಾದರು ಭರ್ತಿಯಾದರೆ ಜನ-ಜಾನುವಾರುಗಳ ಜತೆಗೆ ಅಂತರ್ಜಲದ ಅಭಿವೃದ್ಧಿಗೂ ಸಹಕಾರಿಯಾಗಲಿದೆ ಎಂದರು.ಪಟ್ಟಣದಲ್ಲಿ ನಿರ್ಮಿಸಲಾಗಿರುವ ಪಾರ್ಕ್ ನಲ್ಲಿ ಮ್ಯೂಜಿಕ್ ಫೌಂಡನ್ ನಿರ್ಮಿಸಲಾಗಿದೆ. ಆದರೆ, ಅವರಿಗೆ ಬಿಲ್ ಬಾಕಿ ಉಳಿದಿರುವ ಕಾರಣ ಅದು ಚಾಲ್ತಿಯಾಗಿಲ್ಲ. ಮೊದಲು ಗುತ್ತಿಗೆದಾರರ ಬಿಲ್ ಪಾವತಿಸಿ ಮ್ಯೂಜಿಲ್ ಫೌಂಡನ್ ಆರಂಭಿಸಲು ಕ್ರಮವಹಿಸಿ ಎಂದರು.
ಅರ್ಜಿ ವಿಲೇವಾರಿ ಮಾಡಿ:ಪಟ್ಟಣದ ತಾಲೂಕು ಕಚೇರಿಯಲ್ಲಿ ಭೂದಾಖಲೆ ಇಲಾಖೆ, ಸರ್ವೇ ಇಲಾಖೆಗಳಲ್ಲಿ ಹಲವು ಸಮಸ್ಯೆಗಳಿವೆ, ರೈತರು, ಸಾರ್ವಜನಿಕ ಅರ್ಜಿಗಳು ಸರಿಯಾಗಿ ವಿಲೇವಾರಿಯಾಗುತ್ತಿಲ್ಲ. ಕೆಲವು ದಾಖಲೆಗಳೇ ಸಿಗುತ್ತಿಲ್ಲ. ಸರ್ವೇ ಇಲಾಖೆಯಲ್ಲಿ ಸಮಸ್ಯೆಗಳು ಹೆಚ್ಚಾಗಿವೆ. ಜತೆಗೆ ರೈತರು, ವೃದ್ದರು ಕಚೇರಿಗೆ ಅಲೆದಾಡದಂತೆ ಕ್ರಮವಹಿಸಿ ಎಂದು ಸೂಚಿಸಿದರು.
ಸಿ.ಎಸ್.ಪುಟ್ಟರಾಜು ಅವರು ಕಚೇರಿಗೆ ಭೇಟಿಕೊಟ್ಟ ವೇಳೆ ಸಾರ್ವಜನಿಕರು ತಮ್ಮ ಹಲವು ಸಮಸ್ಯೆಗಳ ಕುರಿತು ಅಳಲು ತೊಡಗಿಸಿಕೊಂಡರು. ಇದೇವೇಳೆ ತಹಶೀಲ್ದಾರ್ ಆದರ್ಶ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.ವಾರದಲ್ಲಿ ಎರಡು ದಿನ ಖುದ್ದು ಭೇಟಿ:
ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ನಾವು ಕಳೆದ ವಾರ ಪಕ್ಷದಿಂದ ಪ್ರತಿಭಟನೆ ನಡೆಸಿದಾಗ ತಾಲೂಕು ಕಚೇರಿಯಲ್ಲಿ ರೈತರು, ಸಾರ್ವಜನಿಕರ ಹಲವಾರು ಸಮಸ್ಯೆಗಳು ಇರುವುದು ಕಂಡುಬಂತು ಆ ಹಿನ್ನೆಲೆಯಲ್ಲಿ ನಾನೇ ಮುಂದಿನ ದಿನಗಳಲ್ಲಿ ವಾರದಲ್ಲಿ ಎರಡು ದಿನ ಸೋಮವಾರ-ಗುರುವಾರ ಖುದ್ದ ತಾಲೂಕು ಕಚೇರಿಗೆ ಭೇಟಿಕೊಟ್ಟು ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಅಧಿಕಾರಿಗಳಿಂದ ಬಗೆಹರಿಸುವ ಕೆಲಸ ಮಾಡುವುದಾಗಿ ಭರವಸೆ ನೀಡಿದ್ದೆ. ಅದರಂತೆ ಸೋಮವಾರ ತಾಲೂಕು ಕಚೇರಿಗೆ ಭೇಟಿಕೊಟ್ಟು ಜನರ ಸಮಸ್ಯೆಗೆ ಧ್ವನಿಯಾಗಿ ಕೆಲಸ ಮಾಡುತ್ತೇನೆ. ರೈತರು, ಜನರು ಆತಂಕಕ್ಕೆ ಒಳಗಾಗುವುದು ಬೇಡ, ಮುಂದಿನ ದಿನಗಳಲ್ಲಿ ಜತೆಯಲ್ಲಿ ಸ್ಪಂಧಿಸಿಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು.