ಕಲುಷಿತ ನೀರು ನಿರ್ವಹಣೆ ವೈಫಲ್ಯ, ಜೀನ್ಸ್ ವಾಷಿಂಗ್ ಘಟಕಗಳಿಗೆ ನೊಟೀಸ್ ಜಾರಿ

| Published : Mar 01 2025, 01:01 AM IST

ಕಲುಷಿತ ನೀರು ನಿರ್ವಹಣೆ ವೈಫಲ್ಯ, ಜೀನ್ಸ್ ವಾಷಿಂಗ್ ಘಟಕಗಳಿಗೆ ನೊಟೀಸ್ ಜಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಕಲುಷಿತ ನೀರಿನ ಅವೈಜ್ಞಾನಿಕ ನಿರ್ವಹಣೆ ಹಿನ್ನೆಲೆಯಲ್ಲಿ 66 ಜೀನ್ಸ್ ವಾಷಿಂಗ್ ಯೂನಿಟ್‌ಗಳ ಪೈಕಿ ಈಗಾಗಲೇ 16 ವಾಷಿಂಗ್ ಯೂನಿಟ್‌ಗಳ ಮುಚ್ಚಲಾಗಿದೆ.

ಬಳ್ಳಾರಿ: ಜೀನ್ಸ್‌ ವಾಷಿಂಗ್ ಘಟಕಗಳಿಂದ ಕಲುಷಿತ ನೀರನ್ನು ಶುದ್ಧೀಕರಿಸದೆ ಹಾಗೆಯೇ ಹರಿಬಿಡುವ ನಗರದ ಜೀನ್ಸ್‌ ವಾಷಿಂಗ್ ಯೂನಿಟ್‌ಗಳ ಮಾಲೀಕರಿಗೆ ಜಿಲ್ಲಾ ಪರಿಸರ ಇಲಾಖೆ ಅಧಿಕಾರಿಗಳು ನೊಟೀಸ್ ಜಾರಿಗೊಳಿಸಿದ್ದಾರೆ. ಕಲುಷಿತ ನೀರಿನ ಅವೈಜ್ಞಾನಿಕ ನಿರ್ವಹಣೆ ಹಿನ್ನೆಲೆಯಲ್ಲಿ 66 ಜೀನ್ಸ್ ವಾಷಿಂಗ್ ಯೂನಿಟ್‌ಗಳ ಪೈಕಿ ಈಗಾಗಲೇ 16 ವಾಷಿಂಗ್ ಯೂನಿಟ್‌ಗಳ ಮುಚ್ಚಲಾಗಿದ್ದು, ಉಳಿದ 25 ಯೂನಿಟ್‌ಗಳಿಗೆ ನೊಟೀಸ್ ಜಾರಿಗೊಳಿಸಿ, ಸ್ಥಗಿತಕ್ಕೆ ಶಿಫಾರಸು ಮಾಡಲಾಗಿದೆ. ಶನಿವಾರ ಕೆಲವು ಜೀನ್ಸ್‌ ವಾಷಿಂಗ್ ಯೂನಿಟ್‌ಗಳಿಗೆ ಭೇಟಿ ನೀಡಿ ಪರಿಶೀಲಿಸಿರುವ ಅಧಿಕಾರಿಗಳು, ಉಳಿದ ಯೂನಿಟ್‌ಗಳ ಸ್ಥಗಿತಕ್ಕೆ ಕ್ರಮದ ಹೆಜ್ಜೆ ಇರಿಸಿದ್ದಾರೆ.

ಇತ್ತೀಚೆಗಷ್ಟೇ ಬಳ್ಳಾರಿಗೆ ಭೇಟಿ ನೀಡಿದ್ದ ಉಪ ಲೋಕಾಯುಕ್ತರಿಗೆ ಬಳ್ಳಾರಿ ಜೀನ್ಸ್‌ ವಾಷಿಂಗ್ ಯೂನಿಟ್‌ಗಳಿಂದಾಗುತ್ತಿರುವ ಪರಿಸರ ಹಾನಿ ಕುರಿತು ದೂರು ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾ ಪರಿಸರ ಇಲಾಖೆ ಅಧಿಕಾರಿಗಳಿಗೆ ಸುಮೊಟೊ ನೊಟೀಸ್ ನೀಡಿದ್ದರು. ಉಪ ಲೋಕಾಯುಕ್ತರು ನೊಟೀಸ್ ನೀಡುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಪರಿಸರ ಅಧಿಕಾರಿಗಳು, ಜೀನ್ಸ್‌ ವಾಷಿಂಗ್ ಯೂನಿಟ್‌ಗಳ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ.

ಬಳ್ಳಾರಿ ಜೀನ್ಸ್‌ ಉದ್ಯಮಕ್ಕೆ ಉತ್ತೇಜನ ನೀಡಬೇಕು. ಬಳ್ಳಾರಿಯಲ್ಲಿ ಅಪೆರಲ್ ಪಾರ್ಕ್ ಸ್ಥಾಪಿಸಬೇಕು ಎಂಬಿತ್ಯಾದಿ ರಾಜಕೀಯ ನಾಯಕರ ಹೇಳಿಕೆಗಳು, ಭರವಸೆಗಳ ನಡುವೆಯೇ ಜೀನ್ಸ್‌ ಉದ್ಯಮ ಕಲುಷಿತ ನೀರು ನಿರ್ವಹಣೆಯ ವೈಫಲ್ಯದಿಂದ ತತ್ತರಿಸಿ ಹೋಗಿದೆ. ತ್ಯಾಜ್ಯ ನೀರು ನಿರ್ವಹಣೆಗೆ ಪ್ರತ್ಯೇಕ ಜಾಗ ಕಾಯ್ದಿರಿಸಬೇಕು. ಸರ್ಕಾರ ಇದಕ್ಕೆ ಪೂರಕವಾಗಿ ಸ್ಪಂದಿಸಬೇಕು ಎಂಬ ಬೇಡಿಕೆ ಜೀನ್ಸ್ ಉದ್ಯಮಿಗಳದಾಗಿದ್ದು, ವಿಶ್ವದ ನಾನಾ ಕಡೆ ರಫ್ತಾಗುವ ಬಳ್ಳಾರಿ ಜೀನ್ಸ್‌ಗೆ ಕುತ್ತು ಬಂದರೂ ಸರ್ಕಾರ ಗಮನ ಹರಿಸುತ್ತಿಲ್ಲ ಎಂದು ಉದ್ಯಮಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಮಾಲೀಕರಿಗೆ ನೋಟಿಸ್

ಜೀನ್ಸ್‌ ವಾಷಿಂಗ್ ಯೂನಿಟ್‌ಗಳಿಂದ ಹೊರ ಬರುವ ಕಲುಷಿತ ನೀರನ್ನು ಫಿಲ್ಟರ್ ಮಾಡದೆ ಹೊರ ಬಿಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅನೇಕ ಜೀನ್ಸ್‌ ವಾಷಿಂಗ್ ಯೂನಿಟ್‌ ಮಾಲೀಕರಿಗೆ ನೊಟೀಸ್ ನೀಡಿದ್ದೇವೆ. ಕೆಲವು ಯೂನಿಟ್‌ಗಳನ್ನು ಸ್ಥಗಿತಗೊಳಿಸುವಂತೆ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಪತ್ರ ಬರೆದಿದ್ದೇವೆ.

- ಸಿದ್ದೇಶ್ವರ ಬಾಬು, ಜಿಲ್ಲಾ ಪರಿಸರ ಅಧಿಕಾರಿ, ಬಳ್ಳಾರಿ