ಸಾರಾಂಶ
ಕನ್ನಡಪ್ರಭ ವಾರ್ತೆ ಮಣಿಪಾಲಹವಾಮಾನ ಬದಲಾವಣೆ, ಜಾಗತಿಕ ತಾಪಮಾನದಲ್ಲಿ ಏರಿಕೆ ಮತ್ತು ನೈಸರ್ಗಿಕ ಸಂಪನ್ಮೂಲಗಳು ನಶಿಸುತ್ತಿರುವ ಈ ಸಂದರ್ಭದಲ್ಲಿ ನಾವು ಪರಿಸರ ಅರ್ಥಶಾಸ್ತ್ರದತ್ತ (ಇಕೊಲೊಜಿಕಲ್ ಎಕನಾಮಿಕ್ಸ್) ಗಮನ ಹರಿಸದಿದ್ದರೆ, ಜಗತ್ತು ವಿನಾಶದ ಅಂಚಿಗೆ ತಲುಪುತ್ತದೆ ಎಂದು ಹಿರಿಯ ಅರ್ಥಶಾಸ್ತ್ರಜ್ಞೆ ಡಾ.ರೇಸ್ಮಿ ಭಾಸ್ಕರನ್ ಎಚ್ಚರಿಸಿದ್ದಾರೆ.ಅವರು ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆ್ಯಂಡ್ ಸೈನ್ಸಸ್‌ನ (ಜಿಸಿಪಿಎಎಸ್) ಆಶ್ರಯದಲ್ಲಿ ‘ಪರಿಸರ ಅರ್ಥಶಾಸ್ತ್ರದ ಪ್ರಸ್ತುತತೆ’ ಎಂಬ ವಿಷಯದ ಕುರಿತು ಮಾತನಾಡಿದರು.ನವದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಿಂದ ತಮ್ಮ ಪಿಎಚ್‌ಡಿ ಪದವಿಯನ್ನು ಹೊಂದಿರುವ ಡಾ.ರೇಸ್ಮಿ ಭಾಸ್ಕರನ್, ಸಾಂಪ್ರದಾಯಿಕ ಅರ್ಥಶಾಸ್ತ್ರವು ಯಾವುದೇ ಮಿತಿಯನ್ನು ಹೊಂದಿಲ್ಲ. ನಮ್ಮ ಅಗತ್ಯತೆಗಳಿಗೂ ಮೀರಿ ಜಗತ್ತಿನಲ್ಲಿ ಸೀಮಿತ ಸಂಪನ್ಮೂಲಗಳಿವೆ. ಆರ್ಥಿಕತೆಯು ಅಭಿವೃದ್ಧಿಗೊಂಡಾಗ, ಅದು ನೈಸರ್ಗಿಕ ಸಂಪನ್ಮೂಲಗಳ ಮೇಲೆ ಹೆಚ್ಚುವರಿ ಹೊರೆಯನ್ನು ಹೇರುತ್ತದೆ. ಇದು ಭೂಮಿಯನ್ನು ವಿಪತ್ತಿನಂಚಿಗೆ ಕೊಂಡೊಯ್ಯುತ್ತದೆ ಎಂದು ಅಭಿಪ್ರಾಯಪಟ್ಟರು.
ಜಗತ್ತಿನಲ್ಲಿ ದೇಶಗಳ ಮತ್ತು ವ್ಯಕ್ತಿಗಳ ನಡುವೆ ಸಂಪತ್ತಿನ ಸಮಾನ ಹಂಚಿಕೆ ಆಗಿಲ್ಲ. ಸಣ್ಣ ಆದರೆ ಪ್ರಭಾವಿ ಜನಸಂಖ್ಯೆಯನ್ನು ಹೊಂದಿರುವ ದೇಶಗಳೇ ಜಗತ್ತಿನಲ್ಲಿ ಸಂನ್ಮೂಲಗಳ ಪ್ರಮುಖ ಪಾಲನ್ನು ನಿಯಂತ್ರಿಸುತ್ತವೆ. ದೇಶ-ದೇಶಗಳು ಶಸ್ತ್ರಾಸ್ತ್ರ ಸ್ಪರ್ಧೆಯಲ್ಲಿ ತೊಡಗಿರುವಾಗ, ಅಗತ್ಯವಿರುವವರ ಮೂಲಭೂತ ಅಗತ್ಯಗಳನ್ನು ನಿರ್ಲಕ್ಷ್ಯಿಸಲಾಗುತ್ತಿದೆ. ಜಾಗತೀಕರಣವು ಮತ್ತೊಂದು ರೀತಿಯ ವಸಾಹತುಶಾಹಿಗೆ ದಾರಿ ಮಾಡಿಕೊಟ್ಟಿದೆ ಎಂದು ಅವರು ವಿಶ್ಲೇಷಿಸಿದರು.ಇದೇ ಸಂದರ್ಭ ಪರಿಸರ ತಜ್ಞ ಡಾ.ಶ್ರೀಕುಮಾರ್, ಭೂಮಿಯ ಸಂಪನ್ಮೂಲಗಳನ್ನು ಕಬಳಿಸುವ, ಸಮಾನತೆಯನ್ನು ಪರಿಗಣಿಸದ ಅಭಿವೃದ್ಧಿಯ ಕಲ್ಪನೆಯೇ ನಮ್ಮ ಸಮಸ್ಯೆಯ ಮೂಲವಾಗಿದೆ ಎಂದು ಅಭಿಪ್ರಾಯಪಟ್ಟರು.ಜಿಸಿಪಿಎಎಸ್ ಮುಖ್ಯಸ್ಥ ಪ್ರೊ. ವರದೇಶ್ ಹಿರೇಗಂಗೆ ಮಾತನಾಡಿ, ಇಂದು ಪರಿಸರ ಅರ್ಥಶಾಸ್ತ್ರವು ನಮ್ಮ ಅಸ್ತಿತ್ವದೊಂದಿಗೆ ಸಂಪರ್ಕ ಕಲ್ಪಿಸುವ ಸಂಶೋಧನೆಯ ಪ್ರಮುಖ ಕ್ಷೇತ್ರವಾಗಿದೆ ಎಂದರು.ತನಿಷ್ಕಾ ಕೋಟ್ಯಾನ್ ಕಾರ್ಯಕ್ರಮವನ್ನು ನಿರ್ವಹಿಸಿದರು. ಡಾ. ರವೀಂದ್ರನಾಥನ್, ಡಾ. ಐಡಾ ಡಿಸೋಜ ಮತ್ತಿತರರು ಭಾಗವಹಿಸಿದ್ದರು.