ಹೆಲ್ಮೆಟ್ ಹಾಕದಿದ್ದರೆ ದಂಡ ಗ್ಯಾರಂಟಿ

| Published : Feb 13 2025, 12:49 AM IST

ಸಾರಾಂಶ

ಎಸ್‌ಪಿ ರಂಜಿತ್ ಕುಮಾರ್ ಬಂಡಾರು ಬುಧವಾರ ಪೊಲೀಸ್ ಸಿಬ್ಬಂದಿಗೆ ಹೆಲ್ಮೆಟ್ ವಿತರಿಸಿದರು.

ದ್ವಿಚಕ್ರ ವಾಹನ ಚಾಲಕರಿಗೆ ಎಚ್ಚರಿಕೆ । ಪೊಲೀಸ್ ಸಿಬ್ಬಂದಿಗೆ ಹೆಲ್ಮೆಟ್ ವಿತರಣೆ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಬೈಕ್, ಸ್ಕೂಟರ್ ನಲ್ಲಿ ಸಂಚರಿಸುವವರು ಹೆಲ್ಮೆಟ್ ಹಾಕುವುದು ಕಡ್ಡಾಯ. ಆದರೆ ಚಿತ್ರದುರ್ಗದಲ್ಲಿ ಅಷ್ಟಾಗಿ ಪಾಲನೆಯಾಗಿರಲಿಲ್ಲ. ಪೊಲೀಸರೇ ಹೆಲ್ಮೆಟ್ ಇಲ್ಲದೆ ಹೋಗ್ತಾರೆ, ಜನರು ಹೋಗಬಾರದಾ ಎಂಬ ಪ್ರಶ್ನೆಗಳು ಎಸ್‌ಪಿ ರಂಜಿತ್ ಕುಮಾರ್ ಬಂಡಾರು ಅವರಿಗೆ ತಲುಪಿದ್ದವು. ಇದೀಗ ಪೊಲೀಸರಿಗೆ ಹೆಲ್ಮೆಟ್ ಹಾಕಿಸಿರುವ ಎಸ್‌ಪಿ, ಈಗ ನೀವು ಹಾಕ್ಕೊಳ್ಳಿ, ಇಲ್ಲದಿದ್ದರೆ ದಂಡ ಕಟ್ಟಿ ಎಂಬ ಎಚ್ಚರಿಕೆ ಸಂದೇಶವನ್ನು ದ್ವಿಚಕ್ರವಾಹನ ಸವಾರರಿಗೆ ರವಾನೆ ಮಾಡಲಾಗಿದೆ. ಇದಕ್ಕಾಗಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆಯ ಸಮರ್ಥವಾಗಿ ಬಳಕೆ ಮಾಡಿಕೊಳ್ಳಲಾಗಿದೆ.

ಜಿಲ್ಲಾಧಿಕಾರಿ ಕಚೇರಿ ಬಳಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ, ಪೊಲೀಸ್ ಸಿಬ್ಬಂದಿಗೆ ಹೆಲ್ಮೆಟ್ ಹಾಗೂ 9 ತಿಂಗಳಿಂದ 4 ವರ್ಷ ವಯೋಮಾನದೊಳಗಿನ ಮಕ್ಕಳನ್ನು ಹೊಂದಿರುವ ಪೋಷಕರಿಗೆ ದ್ವಿಚಕ್ರ ವಾಹನದಲ್ಲಿ ಸುರಕ್ಷಿತವಾಗಿ ಮಕ್ಕಳನ್ನು ಕೊಂಡೊಯ್ಯಲು ಬಳಸುವ ಶಿಶು ರಕ್ಷಾ ಕವಚವನ್ನು ಸಾಂಕೇತಿಕವಾಗಿ ವಿತರಣೆ ಮಾಡಿ ಮಾತನಾಡಿದ ಜಿಲ್ಲಾಧಿಕಾರಿ, ಟಿ.ವೆಂಕಟೇಶ್, ದ್ವಿಚಕ್ರ ವಾಹನ ಸವಾರರು ಜೀವ ರಕ್ಷಣೆ ಸಂಬಂಧ ಕಡ್ಡಾಯವಾಗಿ ಹೆಲ್ಮೆಟ್ ಧರಿಸವಂತೆ ತಿಳಿಸಿದರು.

ಜಿಲ್ಲೆಯಲ್ಲಿ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳು ಹಾದು ಹೋಗಿರುವುದರಿಂದ ಗ್ರಾಮೀಣ ಭಾಗದಲ್ಲಿ ರಸ್ತೆ ಅಪಘಾತಗಳು ಆಗುವ ಸಾಧ್ಯತೆ ಇದೆ. ರಸ್ತೆ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರು ಜಾಗೃತರಾಗಿರಬೇಕು. ವಾಹನ ಚಾಲನೆ ಮಾಡುವಾಗ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು. ರಸ್ತೆ ನಿಯಮಗಳನ್ನು ಚಾಲಕರು ಕಡ್ಡಾಯವಾಗಿ ಪಾಲಿಸಬೇಕು ಎಂದು ಮನವಿ ಮಾಡಿದರು.ಪ್ರಾದೇಶಿಕ ಸಾರಿಗೆ ಅಧಿಕಾರಿ ಭರತ್ ಕಾಳೆ ಸಿಂಘೆ ಮಾತನಾಡಿ, ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ-2025 ಅಂಗವಾಗಿ 70 ಮಂದಿ ಪೊಲೀಸ್ ಸಿಬ್ಬಂದಿಗೆ ಹೆಲ್ಮೆಟ್ ಹಾಗೂ ಶಿಶು ರಕ್ಷಾ ಕವಚಗಳನ್ನು 10 ಮಂದಿಗೆ ಸಾಂಕೇತಿಕವಾಗಿ ವಿತರಣೆ ಮಾಡಲಾಗಿದ್ದು, ವಾಹನ ಸವಾರರು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.

ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜೆ.ಕುಮಾರಸ್ವಾಮಿ, ಚಿತ್ರದುರ್ಗ ಉಪವಿಭಾಗ ಪೊಲೀಸ್ ಉಪಾಧೀಕ್ಷಕ ದಿನಕರ್, ಪ್ರಾದೇಶಿಕ ಸಾರಿಗೆ ಕಚೇರಿಯ ಅಧೀಕ್ಷಕ ಹೇಮಂತ್ ಸೇರಿ ಪೊಲೀಸ್ ಸಿಬ್ಬಂದಿ ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆ ಸಿಬ್ಬಂದಿ ಇದ್ದರು.