ಸಾರಾಂಶ
ತಾಲೂಕು ಕಚೇರಿಯಲ್ಲಿ ಸಮಿತಿ ಪ್ರಥಮ ಸಭೆ
ಕನ್ನಡಪ್ರಭ ವಾರ್ತೆ, ಕಡೂರುತಾಲೂಕಿನ ನೂತನ ಬಗರ್ ಹುಕುಂ ಸಮಿತಿ ಮುಂದೆ ಅರ್ಹ ರೈತರಿಗೆ ನ್ಯಾಯ ಒದಗಿಸುವ ದೊಡ್ಡ ಸವಾಲಿದ್ದು ಸಮಿತಿ ನ್ಯಾಯ ಒದಗಿಸುವ ಕೆಲಸ ಮಾಡಲಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
ತಾಲೂಕು ಕಚೇರಿಯಲ್ಲಿ ನಡೆದ ತಾಲೂಕು ಬಗರ್ ಹುಕುಂ ಸಮಿತಿ ಪ್ರಥಮ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಸ್ತುತ ಫಾರಂ 57 ಅಡಿ ಒಟ್ಟು 20,162 ಅರ್ಜಿಗಳು ಸಲ್ಲಿಕೆಯಾಗಿವೆ. ಫಾರಂ 50-53 ಅಡಿ ಇರುವ ಅರ್ಜಿಗಳನ್ನು ಮತ್ತೆ ಮರು ಪರಿಶೀಲನೆ ಮಾಡಿ ವರದಿ ನೀಡಲು ಸೂಚಿಸಲಾಗಿದೆ. ಈ ಹಿಂದಿನ ಅವಧಿಯಲ್ಲಿ ಕೆಲ ಘಟನೆಗಳು ನಡೆದ ಬಗ್ಗೆ ವಿಶೇಷ ಅಧಿಕಾರಿಗಳ ತಂಡ ತನಿಖೆ ನಡೆಸಿದೆ. ಆಗಿನ ಬಗರ್ ಹುಕುಂ ಭೂಮಿ ಮಂಜೂರಾತಿ ಹಾಗೂ ತಪ್ಪಿತಸ್ಥರ ಕುರಿತು ಸರ್ಕಾರ ನಿಯಮಾನುಸಾರ ಕ್ರಮ ಕೈಗೊಳ್ಳಲಿದೆ.ಸರಕಾರ ಯಾರಿಗೇ ಭೂಮಿ ಮಂಜೂರು ಮಾಡಿದರೂ ಮಂಜೂರಾತಿ ಪತ್ರದಲ್ಲಿ ಬಗರ್ ಹುಕುಂ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರೂ ಸಹ ಬೆರಳಚ್ಚು ಕೊಟ್ಟು ಧೃಢೀಕರಿಸುವ ನಿಯಮ ಜಾರಿಗೆ ತಂದಿದೆ. ಈ ಕಾರಣದಿಂದ ಮಂಜೂರಾತಿಯಲ್ಲಿ ಯಾವುದೇ ತಪ್ಪಾದರೂ ಅದಕ್ಕೆ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರೂ ಕೂಡ ಸಮಾನ ಹೊಣೆಗಾರರು. ಹಾಗಾಗಿ ಯಾವುದೇ ಗೊಂದಲ ಆಗದಂತೆ ಎಚ್ಚರಿಕೆಯಿಂದ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸುತ್ತೇವೆ ಎಂದರು.
ಈ ಹಿಂದಿನ ಕೆಲ ಮಂಜೂರು ಪ್ರಕರಣಗಳಲ್ಲಿ ಭೂಮಿ ಖಾತೆ, ಪಹಣಿ ಆಗಿಲ್ಲದ ಪ್ರಕರಣಗಳಿದ್ದರೆ ಸಮಗ್ರ ವರದಿ ನೀಡಲು ತಹಸೀಲ್ದಾರ್ ಅವರಿಗೆ ಸೂಚಿಸಿದ್ದೇನೆ. ಒಟ್ಟಾರೆ ಯಾವುದೇ ಸಮಸ್ಯೆ ಆಗದಂತೆ ಬಗರ್ ಹುಕುಂ ಸಮಿತಿ ಕಾರ್ಯ ನಿರ್ವಹಿಸುವುದು ನನ್ನ ಆಶಯವಾಗಿದೆ. ಅದಕ್ಕೆ ಸಮಿತಿ ಸದಸ್ಯರ ಪೂರ್ಣ ಸಹಕಾರ ಕೋರುತ್ತೇನೆ ಎಂದರು.ತಹಸೀಲ್ದಾರ್ ಪೂರ್ಣಿಮಾ, ತಾಲೂಕು ಬಗರ್ ಹುಕುಂ ಸಮಿತಿ ಸದಸ್ಯರಾದ ಹೊಗರೇಹಳ್ಳಿ ಶಶಿಕುಮಾರ್, ಬಿ.ಜಿ. ಶಾಂತಕುಮಾರ, ಕುಮಾರಿಬಾಯಿ ಶ್ರೀನಿವಾಸ ನಾಯ್ಕಮತ್ತು ಅಧಿಕಾರಿಗಳು ಇದ್ದರು.
12ಕೆಕೆಡಿಯು1.ಶಾಸಕ ಕೆ.ಎಸ್.ಆನಂದ್ ರವರ ಅಧ್ಯಕ್ಷತೆಯಲ್ಲಿ ತಾಲೂಕು ಕಚೇರಿಯಲ್ಲಿ ತಾಲೂಕು ಬಗರ್ ಹುಕುಂ ಸಮಿತಿ ಪ್ರಥಮ ಸಭೆ ನಡೆಯಿತು.