ಸಾರಾಂಶ
ಹಾನಗಲ್ಲ: ಮನಸ್ಸುಗಳನ್ನು ಬೆಸೆಯುವ ಭಾವನಾತ್ಮಕ ಕಾರ್ಯದಲ್ಲಿ ಯಶಸ್ವಿಯಾಗಿರುವ ಗ್ರಾಮದೇವಿ ಜಾತ್ರೆ, ನಮ್ಮೂರ ಹಬ್ಬ ನಮ್ಮೆಲ್ಲರ ಹೆಮ್ಮೆಯಾಗಿರುವ ಸಂದರ್ಭದಲ್ಲಿ, ನೆಲದ ಸಂಸ್ಕೃತಿ ಉಳಿಸಿ, ಹಿರಿಮೆ ಹೆಚ್ಚಿಸಲು ಶ್ರಮ ವಹಿಸುವುದಾಗಿ ಶಾಸಕ ಶ್ರೀನಿವಾಸ ಮಾನೆ ಭರವಸೆ ನೀಡಿದರು.ಗ್ರಾಮದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಧರ್ಮಸಭೆಯಲ್ಲಿ ಮಾತನಾಡಿ, ಭಕ್ತಿಪೂರ್ವಕ ಘಳಿಗೆಗೆ ನಾವೆಲ್ಲರೂ ಸಾಕ್ಷಿಯಾಗಿದ್ದೇವೆ. ಹತ್ತನೆ ಬಾರಿಗೆ ಪಟ್ಟಣದಲ್ಲಿ ನಡೆಯುತ್ತಿರುವ ಗ್ರಾಮದೇವಿ ಜಾತ್ರೆ ಮನಸ್ಸುಗಳನ್ನು ಬೆಸೆದಿದೆ. ಸಂಬಂಧ ಗಟ್ಟಿಗೊಳಿಸಿದೆ. ಮೈಸೂರು ದಸರಾ ಮಾದರಿಯ ವಿದ್ಯುತ್ ದೀಪಾಲಂಕಾರ ಕಣ್ಮನ ಸೆಳೆಯುತ್ತಿದೆ ಎಂದರು.
ಅರಮನೆ ಮಂಟಪದಲ್ಲಿ ವಿರಾಜಮಾನಳಾಗಿರುವ ಗ್ರಾಮದೇವಿ ಭಕ್ತರ ಇಷ್ಟಾರ್ಥ ಈಡೇರಿಸಲಿ. ಉತ್ತಮ ಮಳೆ, ಬೆಳೆ ದಯಪಾಲಿಸಲಿ. ತಾಲೂಕಿಗೆ ಸುಭಿಕ್ಷೆ ನೀಡಲಿ ಎಂದು ಪ್ರಾರ್ಥಿಸಿದರು.ಮಾನವೀಯ ಮೌಲ್ಯಗಳನ್ನು ಗಾಳಿಗೆ ತೂರಿ ದ್ವೇಷ, ಅಸಹನೆ, ಅಸೂಯೆಯಲ್ಲಿ ಕಾಲ ಕಳೆಯುತ್ತಿದ್ದೇವೆ. ಶರಣರು, ಸೂಫಿಗಳ ಆದರ್ಶ ಪರಿಪಾಲಿಸುವ ಮೂಲಕ ಸೌಹಾರ್ದತೆ ಮತ್ತು ಸಾಮರಸ್ಯದ ಬದುಕು ಸಾಗಿಸುವ ಸಂಕಲ್ಪ ತೊಡಬೇಕಿದೆ. ಇಂಥ ಹಬ್ಬಗಳು ಅಂತಹ ಸಾಂಸ್ಕೃತಿಕ ಕಾರ್ಯಕ್ಕೆ ಸಾಕ್ಷಿಯಾಗಲಿ ಎಂದರು.ಮಾಜಿ ಶಾಸಕ ಶಿವರಾಜ ಸಜ್ಜನರ ಮಾತನಾಡಿ, ಹಿಂದೆಂಗಿಂತಲೂ ವಿಜೃಂಭಣೆಯ ಜಾತ್ರಾ ಮಹೋತ್ಸವಕ್ಕೆ ನಾವೆಲ್ಲರೂ ಸಾಕ್ಷಿಯಾಗಿದ್ದೇವೆ. ಪ್ರತಿಯೊಬ್ಬರಲ್ಲಿಯೂ ಉತ್ಸಾಹ, ಸಂಭ್ರಮ ಕಾಣುತ್ತಿದ್ದೇವೆ. ಹಬ್ಬದ ಆಚರಣೆ ಮೂಲಕ ನಮ್ಮೆಲ್ಲರ ಮನಸ್ಸು ಒಂದಾಗಲಿ. ಎಲ್ಲೆಡೆ ಶಾಂತಿ, ಸೌಹಾರ್ದತೆ ನೆಲೆಸುವಂತಾಗಲಿ ಎಂದರು.ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಮಂಜುನಾಥ ನಾಗಜ್ಜನವರ, ಪುರಸಭೆ ಅಧ್ಯಕ್ಷ ಪರಶುರಾಮ ಖಂಡೂನವರ, ಉಪಾಧ್ಯಕ್ಷೆ ವೀಣಾ ಗುಡಿ, ಹಿರಿಯ ಕೆಎಎಸ್ ಅಧಿಕಾರಿ ವಿಶ್ವನಾಥ ಹಿರೇಮಠ, ಪ್ರಮುಖರಾದ ಸದಾಶಿವಪ್ಪ ಉದಾಸಿ, ರಾಜೂ ಗೌಳಿ, ಸಿದ್ದಲಿಂಗಪ್ಪ ಕಮಡೊಳ್ಳಿ, ರಾಜಶೇಖರ ಕಟ್ಟೇಗೌಡ್ರ, ಭೋಜರಾಜ ಕರೂದಿ, ಆದರ್ಶ ಶೆಟ್ಟಿ, ಗಣೇಶ ಮೂಡ್ಲಿಯವರ, ನಾಗೇಂದ್ರ ಬಂಕಾಪೂರ, ಗುರುರಾಜ್ ನಿಂಗೋಜಿ, ಯಲ್ಲಪ್ಪ ಶೇರಖಾನೆ, ಬಾಳಾರಾಮ ಗುರ್ಲಹೊಸೂರ, ರವಿ ಪುರೋಹಿತ, ವಿರುಪಾಕ್ಷಪ್ಪ ಕಡಬಗೇರಿ, ಸುರೇಶ ಪೂಜಾರ, ನಾರಾಯಣ ಅಥಣಿ, ಸಂಜಯ ಬೇಂದ್ರೆ, ಈಶ್ವರ ವಾಲ್ಮೀಕಿ, ಕೀರ್ತಿಕುಮಾರ ಚಿನ್ನಮುಳಗುಂದ, ರಾಮೂ ಯಳ್ಳೂರ ಇದ್ದರು.