ಸಾರಾಂಶ
ಕೊಟ್ಟೂರೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಧರ್ಮಸಭೆ
ಕನ್ನಡಪ್ರಭ ವಾರ್ತೆ ಹೂವಿನಹಡಗಲಿಗ್ರಾಮೀಣ ಪ್ರದೇಶದಲ್ಲಿನ ವಿವಿಧ ದೇವಸ್ಥಾನ ಹಾಗೂ ಮಠ ಮಂದಿರಗಳಲ್ಲಿ ಜರುಗುವ ಜಾತ್ರಾ ಮಹೋತ್ಸವ ಜನರನ್ನು ಒಗ್ಗೂಡಿಸುವ ಜತೆಗೆ, ಧಾರ್ಮಿಕ ಜಾಗೃತಿ ಮೂಡಿಸುತ್ತದೆ ಎಂದು ಹಿರೇಹಡಗಲಿಯ ಸದ್ಗುರು ಶಿವಯೋಗಿ ಹಾಲಸ್ವಾಮಿ ಸಂಸ್ಥಾನ ಮಠದ ಸಣ್ಣ ಹಾಲ ಸ್ವಾಮೀಜಿ ಹೇಳಿದರು.
ತಾಲೂಕಿನ ಮಾಗಳ ಗ್ರಾಮದಲ್ಲಿ ಕೊಟ್ಟೂರೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಆಯೋಜಿಸಿದ್ದ ಧರ್ಮಸಭೆಯಲ್ಲಿ ಮಾತನಾಡಿದ ಅವರು, ಭಕ್ತರು ಜಾತಿ, ಮತ, ಪಂಥಗಳನ್ನು ಮೀರಿ ಸಂಘಟಿತರಾಗಿ ಜಾತ್ರೆಯಲ್ಲಿ ಭಾಗವಹಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಇಡೀ ಜಗತ್ತಿಗೆ ಭಾರತ ಜಗದ್ಗುರು ಸ್ಥಾನದಲ್ಲಿದೆ. ನಮ್ಮ ಭಾರತೀಯ ಸಂಸ್ಕೃತಿ, ಸಂಸ್ಕಾರ, ಪರಂಪರೆ ಹಾಗೂ ಉಡುಗೆ ತೊಡುಗೆಗಳನ್ನು ವಿದೇಶಿಗರು ಅನುಕರಣೆ ಮಾಡುತ್ತಿದ್ದಾರೆ. ಆದರಿಂದ ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಅವರನ್ನು ಸಂಸ್ಕಾರವಂತರನ್ನಾಗಿ ಮಾಡಿದಾಗ, ಉತ್ತಮ ನಾಗರಿಕ ಸಮಾಜ ನಿರ್ಮಾಣವಾಗಲು ಸಾಧ್ಯವಾಗುತ್ತದೆ ಎಂದರು.ಸಹಜ ಹಾಗೂ ಸಾವಯವ ಕೃಷಿಯತ್ತ ಗಮನ ಹರಿಸುವಂತಹ ಜಾಗೃತಿ ಕಾರ್ಯಕ್ರಮ ಮಾಡಬೇಕಿದೆ. ರೈತರು ಹೆಚ್ಚು ಇಳುವರಿ ತೆಗೆಯುವ ನೆಪದಲ್ಲಿ ಅತಿಯಾದ ರಾಸಾಯನಿಕ ಗೊಬ್ಬರ, ಔಷಧಿ ಬಳಕೆಯಿಂದಾಗಿ ಫಲತ್ತಾಗಿರುವ ಭೂಮಿಯನ್ನು ಬಂಜರು ಮಾಡುತ್ತಿದ್ದಾರೆ. ಗ್ರಾಮದ ಪಕ್ಕದಲ್ಲೇ ಹರಿಯುತ್ತಿರುವ ತುಂಗಭದ್ರಾ ನದಿಗೆ ಅಪಾಯಕಾರಿಯಾಗಿರುವ ಔಷಧಿಯುಕ್ತ ನೀರು ಹರಿಸುತ್ತಿದ್ದೇವೆ. ಇದರಿಂದ ಶುದ್ಧ ಜಲ ಕೂಡಾ ವಿಷವಾಗುತ್ತದೆ. ಆದರಿಂದ ರೈತರು ಈಗಲಾದರೂ ನೆಲ, ಜಲದ ಬಗ್ಗೆ ಜಾಗೃತಿ ವಹಿಸಬೇಕಿದೆ ಎಂದರು.
ಅಂಗೂರು ಹಿರೇಮಠದ ಶಿವಯೋಗೀಶ್ವರ ಸ್ವಾಮೀಜಿ ಮಾತನಾಡಿ, ಮನುಷ್ಯ ಅಹಂಕಾರ ಬಿಟ್ಟು ಬದುಕಿದರೇ ಉತ್ತಮ ಮನುಷ್ಯನಾಗಲು ಸಾಧ್ಯವಿದೆ ಎಂದರು.ಮುಖ್ಯ ಶಿಕ್ಷಕ ಎಂ.ಜಯಣ್ಣ, ಮಠದ ವೀರಣ್ಣ, ಗ್ರಾಪಂ ಉಪಾಧ್ಯಕ್ಷ ಯಳಮಾಲಿ ವಿರೂಪಾಕ್ಷಪ್ಪ, ಶಿಕ್ಷಕ ಡಾ. ಪಿ.ಎಂ. ಅನಿಲ್‌ಕುಮಾರ್ ಮಾತನಾಡಿದರು.
ನಿವೃತ್ತ ಶಿಕ್ಷಕ ಜಿ.ಮಲ್ಲಿಕಾರ್ಜುನ, ಎಚ್.ಪಕ್ಕೀರಪ್ಪ, ಎಲ್.ಮಂಜುನಾಥ ಸೇರಿದಂತೆ ಇತರರಿದ್ದರು.ಇದೇ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 20ಕ್ಕೂ ಹೆಚ್ಚು ಸಾಧಕರನ್ನು ದೇವಸ್ಥಾನದ ಸಮಿತಿಯಿಂದ ಸನ್ಮಾನಿಸಲಾಯಿತು.