ಸಾರಾಂಶ
ಕನ್ನಡಪ್ರಭ ವಾರ್ತೆ ಯಾದಗಿರಿ
ಮಠ, ಮಂದಿರ ಜಾತ್ರೆಗಳು ಸೌಹಾರ್ದತೆ ಸಂಕೇತವಾಗಿವೆ ಎಂದು ಆಲೂರು ಸಂಸ್ಥಾನ ಮಠದ ಕೆಂಚ ವೃಷಭೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ಜಿಲ್ಲೆಯ ವಡಗೇರಾ ತಾಲೂಕಿನ ಕೃಷ್ಣವೇಣಿ ಭೀಮಾ ಸಂಗಮದ ಸಂಗಮೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ನಡೆದ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ಧರ್ಮಸಭೆ ಉದ್ಘಾಟಿಸಿ ಮಾತನಾಡಿದರು.
ಮಠ-ಮಂದಿರಗಳು ನೆಮ್ಮದಿ ನೀಡುವ ತಾಣಗಳಾಗಿವೆ. ಇತ್ತೀಚಿನ ದಿನಗಳಲ್ಲಿ ಮನುಷ್ಯ ಒತ್ತಡದ ಜೀವನದಿಂದ ಮಾನಸಿಕ ನೆಮ್ಮದಿ ಹಾಳು ಮಾಡಿಕೊಳ್ಳುತ್ತಿದ್ದಾನೆ. ಆದ್ದರಿಂದ ಪ್ರತಿಯೊಬ್ಬರು ಸ್ವಲ್ಪ ಸಮಯವಾದರೂ ಧಾರ್ಮಿಕ ಕಾರ್ಯಗಳಿಗೆ ಮುಡುಪಾಗಿಡಬೇಕು. ಪರೋಪಕಾರಿ ಕೆಲಸದಿಂದ ಮಾತ್ರ ಮನುಷ್ಯನ ಜೀವನ ಸಾರ್ಥಕವಾಗುತ್ತದೆ ಎಂದರು.ಸಂಗಮದ ಶ್ರೀಗಳು ಕೂಡ ಈ ಬಾರಿ ಉಚಿತ ಆರೋಗ್ಯ ಶಿಬಿರ ಪುರಾಣ ಪ್ರವಚನ ಮಹಿಳೆಯರಿಗೆ ಉಡಿ ತುಂಬುವುದು ದಿನನಿತ್ಯ ವಿವಿಧ ಬಗೆಯ ಪ್ರಸಾದ ವಿತರಣೆ, ಲೋಕಕಲ್ಯಾಣಾರ್ಥವಾಗಿ ವಿವಿಧ ಪೂಜಾ ಕಾರ್ಯಕ್ರಮಗಳು ಯುವಕರಿಗಾಗಿ ಗ್ರಾಮೀಣ ಕ್ರೀಡೆಗಳನ್ನು ಹಮ್ಮಿಕೊಳ್ಳುವ ಮೂಲಕ ಜಾತ್ರೆಗೆ ವಿಶೇಷ ಮೆರುಗು ತಂದು ಕೊಟ್ಟಿದ್ದಾರೆ. ಭಕ್ತರು ಶ್ರೀಗಳ ಬೆಂಬಲಕ್ಕೆ ಸದಾ ಕಾಲ ಇರುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಮುತ್ತೈದೆ ಮಹಿಳೆಯರಿಗೆ ಉಡಿ ತುಂಬಲಾಯಿತು. ಸಂಗಮದ ಸಂಗಮೇಶ್ವರ ಮಠದ ಪೀಠಾಧಿಪತಿ ಕರುಣೇಶ್ವರ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು. ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಚಂದನಕೇರಾ ಅಧ್ಯಕ್ಷತೆ ವಹಿಸಿದ್ದರು.ವೇದಮೂರ್ತಿ ವೀರಭದ್ರಯ್ಯ ಸ್ವಾಮಿ, ಸಿದ್ದರಾಮಪ್ಪ ಮಾಲಿ ಪಾಟೀಲ್, ಸಂಗಪ್ಪಗೌಡ ಹಳಿಮನಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಶರಣು ಶಂಕರ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮುಕುಂದ ದೇಶಪಾಂಡೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮರೆಪ್ಪ ಬಿಳಾರ, ಮಾಣಿಕ್ ಶೆಟ್ಟಿ, ಪ್ರಾಚಾರ್ಯ ಡಾ. ಸುಭಾಶ್ಚಂದ್ರ ಕೌಲಗಿ, ಡಾ. ಮಲ್ಲಪ್ಪ ಸೇರಿದಂತೆ ಇತರರಿದ್ದರು. ಮಲ್ಲೇಶ ಕುರುಕುಂದಿ ನಿರೂಪಿಸಿ, ವಂದಿಸಿದರು.