ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ವೈಜ್ಞಾನಿಕತೆಯನ್ನು ಮೈಗೂಡಿಸಿಕೊಂಡಿರುವ ಜ್ಯೋತಿಷ್ಯಶಾಸ್ತ್ರದಲ್ಲಿ ನಂಬಿಕೆ ಅಗತ್ಯ ಎಂದು ಬೇಬಿ ಮಠ, ಚಂದ್ರವನ ಆಶ್ರಮದ ಪೀಠಾಧಿಪತಿ ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ತಿಳಿಸಿದರು.ನಗರದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು ರಾಜ್ಯ ಜ್ಯೋತಿಷರ ಹಾಗೂ ಜ್ಯೋತಿಷ ಬೋಧನಾ ಸಂಸ್ಥೆಗಳ ಒಕ್ಕೂಟದ ಸಹಯೋಗದಲ್ಲಿ ಮಂಗಳವಾರ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಜ್ಯೋತಿರ್ ವಿಜ್ಞಾನ ಶಿಕ್ಷಣ ಕಾರ್ಯಕ್ರಮಗಳನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಶಾಸ್ತ್ರಗಳಿರುವುದು ಶೋಷಣೆ ಮಾಡಲು ಅಲ್ಲ, ಪೋಷಿಸಲು. ಅದನ್ನು ಅರ್ಥೈಸಿಕೊಂಡಾತ ಭಯ ಹುಟ್ಟಿಸುವುದಿಲ್ಲ. ಹಾಗೆಯೇ, ಶಾಸ್ತ್ರ, ಇತಿಹಾಸ ಪುರಾಣಗಳು ಶತಮಾನ ಕಳೆದರೂ ಶಾಶ್ವತ ಎಂದು ಅವರು ಹೇಳಿದರು.ತನ್ನ ಮೇಲೆ ನಂಬಿಕೆ, ವಿಶ್ವಾಸ ಇಲ್ಲದವರು ಯಾವುದನ್ನೂ ನಂಬುವುದಿಲ್ಲ. ಜೋತಿಷ್ಯಶಾಸ್ತ್ರದ ಉಲ್ಲೇಖವು ಪುರಾತನ ಗ್ರಂಥದಲ್ಲೂ ಬರುತ್ತದೆ. ಬುದ್ಧ ಹುಟ್ಟುವಾಗ ಆತನಿಗೆ ಸನ್ಯಾಸಿ ಯೋಗ ಇದೆ ಎಂದು ಆತನ ತಂದೆಗೆ ಜೋತಿಷ್ಯರು ತಿಳಿಸಿದ್ದರು. ಈ ರೀತಿಯ ವಿಚಾರಗಳು ಅನೇಕ ಕಡೆ ದೊರೆಯುತ್ತವೆ ಎಂದರು.
ಶಿಕ್ಷಣ ಹಾಗೂ ಆರೋಗ್ಯ ವ್ಯವಸ್ಥೆ ಗಟ್ಟಿಯಾಗಿದ್ದರೆ ದೇಶ ಬಲಿಷ್ಠವಾಗಿರಲು ಸಾಧ್ಯ. ಶಿಕ್ಷಣ ಸಂಸ್ಥೆ ಶಿಕ್ಷಣದ ಕೆಲಸ ಮಾಡಬೇಕು, ಯಾವುದೂ ವಿಚಾರದ ಲೇಪನವಾಗಿರಬಾರದು. ದೇಶದಲ್ಲಿ ಅಕ್ಷರದ ಬೀಜ ಹಾಗೂ ಅನ್ನದ ಬೀಜ ಬಿತ್ತುವವರಿಗೆ ರಕ್ಷಣೆ ನೀಡಬೇಕಾಗಿರುವುದು ನಮ್ಮ ಕರ್ತವ್ಯ ಎಂದು ಅವರು ತಿಳಿಸಿದರು.ಇಸ್ರೋ ವಿಜ್ಞಾನಿ ಡಾ.ಎಸ್.ವಿ. ಶರ್ಮ, ಶಾಸ್ವತಿ ಧಾರ್ಮಿಕ ಕೇಂದ್ರದ ಭಾನು ಪ್ರಕಾಶ್ ಶರ್ಮ, ರಾಜ್ಯ ಜ್ಯೋತಿಷರ ಹಾಗೂ ಜ್ಯೋತಿಷ ಬೋಧನಾ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಬಿ.ಎನ್. ಅನಂತ ರಾಘವನ್, ವಿವಿ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ, ಕುಲಸಚಿವ ಪ್ರೊ.ಎಸ್.ಕೆ. ನವೀನ್ ಕುಮಾರ್, ಹಣಕಾಸು ಅಧಿಕಾರಿ ಪ್ರೊ.ಎಸ್. ನಿರಂಜನ್ ರಾಜ್, ಡೀನ್ ಗಳಾದ ಪ್ರೊ.ಎಂ. ರಾಮನಾಥಂ ನಾಯ್ಡು, ಡಾ.ಎನ್.ಆರ್. ಚಂದ್ರೇಗೌಡ, ಜ್ಯೋತಿರ್ ವಿಜ್ಞಾನ ಸಂಯೋಜನಾಧಿಕಾರಿ ಡಾ.ಎಸ್. ಕೇಶವ ಮೊದಲಾದವರು ಇದ್ದರು.